ಜೈಪುರ (ಡಿ. 03): ಚುನಾವಣೆಗಳಲ್ಲಿ ಗೆಲ್ಲಲು ಅಭ್ಯರ್ಥಿಗಳು ಮನಸ್ಸಿಗೆ ಬಂದ ಎಲ್ಲಾ ರೀತಿಯ ಭರವಸೆ ನೀಡುವುದು ಹೊಸದೇನಲ್ಲ. ಆದರೆ ರಾಜಸ್ಥಾನದ ಬಿಜೆಪಿ ಅಭ್ಯರ್ಥಿಯೊಬ್ಬರು, ಕಾನೂನು ಬಾಹಿರ ಚಟುವಟಿಕೆಗೆ ಎಲ್ಲಾ ರೀತಿ ನೆರವು ನೀಡುವುದಾಗಿ ಭರವಸೆ ನೀಡುವ ಎಲ್ಲರನ್ನೂ ದಂಗುಬಡಿಸಿದ್ದಾರೆ.

ಸೋಜಟ್‌ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಬಿಜೆಪಿಯ ಶೋಭಾ ಚೌಹಾಣ್‌, ಶನಿವಾರ ಪೀಪಾಲಿಯಾ ಕಲಾ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯ ದೇವಸಿ ಸಮುದಾಯದ ಜನ, ತಮ್ಮ ಸಮುದಾಯದಲ್ಲಿ ಬಾಲ್ಯ ವಿವಾಹ ನಡೆಯುವ ವೇಳೆ ಪೊಲೀಸರು ಬಂದು ಅಡ್ಡಿ ಮಾಡುತ್ತಾರೆ ಎಂದು ಆರೋಪಿಸಿದ್ದರು. ಇದಕ್ಕೆ ತಕ್ಷಣದಲ್ಲಿಯೇ ಪರಿಹಾರ ಪ್ರಕಟಿಸಿದ ಶೋಭಾ, ತಾವು ಗೆದ್ದಲ್ಲಿ, ಬಾಲ್ಯ ವಿವಾಹದ ಸಂದರ್ಭದಲ್ಲಿ ಪೊಲೀಸರು ಅಡ್ಡಿ ಮಾಡದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು. ಅವರ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.