Asianet Suvarna News Asianet Suvarna News

ಜೆಡಿಎಸ್ ಅಭ್ಯರ್ಥಿ ನಮ್ಮ ಅಭ್ಯರ್ಥಿಗೆ ಸರಿಸಾಟಿಯಿಲ್ಲ

ಶಿವರಾಮೇಗೌಡರು ನಮ್ಮ ಅಭ್ಯರ್ಥಿಗೆ ಹೋಲಿಕೆ ಮಾಡಿಕೊಂಡರೆ ಯಾವುದರಲ್ಲೂ ಸಮಾನರಿಲ್ಲ. ಸಿದ್ದರಾಮಯ್ಯನವರಿಗೆ ಕುಟುಂಬ ರಾಜಕೀಯ ಹಿನ್ನೆಲೆ ಇದೆ. ಅವರ ದೊಡ್ಡಪ್ಪ 2 ಸಲ ಶಾಸಕರಾಗಿ ಆಯ್ಕೆಯಾಗಿ ಉತ್ತಮ ಜನಸೇವೆ ಮಾಡಿದ್ದಾರೆ. ಅಂತಹ ಮನೆಯಲ್ಲಿ ಹುಟ್ಟಿದ ಸಿದ್ದರಾಮಯ್ಯ ಜಿಲ್ಲೆಯ ಜನರ ವಿಶ್ವಾಸಗಳಿಸಿದ್ದಾರೆ.

BJP By Election campaign in Mandya and slams coalition government
Author
Bengaluru, First Published Oct 24, 2018, 3:25 PM IST
  • Facebook
  • Twitter
  • Whatsapp

ಪಾಂಡವಪುರ[ಅ.24]: ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಗಿಂತ ಎಲ್ಲಾ ವಿಷಯದಲ್ಲೂ ನಮ್ಮ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಸರ್ವೋತ್ತಮರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು ಹೊಸ ಇತಿಹಾಸ ಸೃಷ್ಟಿ ಮಾಡುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣ ಹಳೇ ಬಸ್ ನಿಲ್ದಾಣದಲ್ಲಿ ಲೋಕಸಭಾ ಉಪ ಚುನಾವಣೆಯ ಬಹಿರಂಗ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ಶಿವ ರಾಮೇಗೌಡರು ನಮ್ಮ ಅಭ್ಯರ್ಥಿಗೆ ಹೋಲಿಕೆ ಮಾಡಿಕೊಂಡರೆ ಯಾವುದರಲ್ಲೂ ಸಮಾನರಿಲ್ಲ. ಸಿದ್ದರಾಮಯ್ಯನವರಿಗೆ ಕುಟುಂಬ ರಾಜಕೀಯ ಹಿನ್ನೆಲೆ ಇದೆ. ಅವರ ದೊಡ್ಡಪ್ಪ 2 ಸಲ ಶಾಸಕರಾಗಿ ಆಯ್ಕೆಯಾಗಿ ಉತ್ತಮ ಜನಸೇವೆ ಮಾಡಿದ್ದಾರೆ. ಅಂತಹ ಮನೆಯಲ್ಲಿ ಹುಟ್ಟಿದ ಸಿದ್ದರಾಮಯ್ಯ ಜಿಲ್ಲೆಯ ಜನರ ವಿಶ್ವಾಸಗಳಿಸಿದ್ದಾರೆ. ಅಲ್ಲದೇ ಜಿಲ್ಲೆಯ ಅನೇಕ ಕಾಂಗ್ರೆಸ್ ಮುಖಂಡರು, ರೈತ ನಾಯಕರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವ ಭರವಸೆ ನೀಡಿದ್ದಾರೆ. ಇದರಿಂದ ಬಿಜೆಪಿ ಈ ಬಾರಿ ಗೆಲುವಿನ ನಗೆ ಬೀರಲಿದೆ ಎಂದರು.

ಕೆಆರ್‌ಎಸ್‌ಗೆ ಅಪಾಯ ಕಾದಿದೆ: ತಾಲೂಕಿನ ಬೇಬಿ ಬೆಟ್ಟದ ಕಾವಲು ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಯಿಂದ ಪಕ್ಕದ ಕೆಆರ್‌ಎಸ್ ಭಾರಿ ಅಣೆಕಟ್ಟೆಗೆ ಅಪಾಯ ಕಾದಿದೆ. ಅದಕ್ಕಾಗಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಹಿಂದೆಯೂ ಸಹ ಬಿಜೆಪಿ ಬೇಬಿಬೆಟ್ಟದಿಂದ ಪಾಂಡವ ಪುರ ತಾಲೂಕು ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಹೋರಾಟ ನಡೆಸಿದೆ.

ಮುಂದಿನ ದಿನಗಳಲ್ಲಿ ಕಲ್ಲುಗಣಿಗಾರಿಕೆಯನ್ನು ವಿರುದ್ಧ ಉಗ್ರ ಹೋರಾಟ ವನ್ನು ನಡೆಸಬೇಕಾಗುತ್ತದೆ. ಜತೆಗೆ ಬೇಬಿಬೆಟ್ಟದ ಸುತ್ತಮುತ್ತಲಿನ ಸುಮಾರು 150 ಎಕರೆ ಜಮೀನು ರಾಜಮನೆತನಕ್ಕೆ ಸೇರಿದ್ದಾಗಿದೆ. ಆ ಜಾಗವನ್ನು ಮೈಸೂರು ರಾಜಮನೆತನದ ಹೆಸರಿಗೆ ಖಾತೆ ಮಾಡಿಸಿ ಕೊಡಬೇಕು ಎಂದು ಆಗ್ರಹಿಸಿದರು. ರಾಜ್ಯದ ಧೀಮಂತ ರೈತ ನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯನವರು ಕೊನೆವರೆಗೂ ರೈತ ಚಳವಳಿಯಲ್ಲಿಯೇ ಗುರುತಿಸಿಕೊಂಡು ರೈತರ ಪರವಾಗಿ ಹೋರಾಟವನ್ನು ಮಾಡಿಕೊಂಡು ಬಂದ ರೈತನಾಯಕ. ಅಂತಹ ರೈತನಾ ಯಕನ ಪ್ರತಿಮೆಯನ್ನು ಪಟ್ಟಣದಲ್ಲಿ ಸ್ಥಾಪನೆ ಮಾಡಲು ರೈತಸಂಘದ ಕಾರ್ಯಕರ್ತರು ಮನವಿಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಂಡು ಕೆ.ಎಸ್. ಪುಟ್ಟಣ್ಣಯ್ಯನವರ ಪ್ರತಿಮೆ ಸ್ಥಾಪಿಸಿಕೊಡಲಾಗುವುದು ಎಂದರು.

ಲಕ್ಷ್ಮೀ ನಾಪತ್ತೆ: ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಶಿವರಾಮೇ ಗೌಡರ ವಿರುದ್ಧ ಸ್ವತಃ ಜೆಡಿಎಸ್ ಪಕ್ಷದಲ್ಲಿಯೇ ಸಾಕಷ್ಟು ಬಂಡಾಯವಿದೆ. ಆಕಾಂಕ್ಷಿತ ಅಭ್ಯರ್ಥಿಯಾಗಿದ್ದ ಲಕ್ಷ್ಮೀ ಅಶ್ವಿನಿಗೌಡ ಅವರು ಬಂಡಾಯವೆದ್ದು ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್ ನಾಯಕರೇ ಜೆಡಿಎಸ್ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಮಾತನಾಡಿದರು. ಸಭೆಯಲ್ಲಿ ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ, ಶಾಸಕರಾದ ನಿರಂಜನ್ ಕುಮಾರ್ ನಾಗೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಮೈಸೂರು ಮಾಜಿ ಮಹಾಪೌರ ಸಂದೇಶ್‌ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ತಾಲೂಕು ಅಧ್ಯಕ್ಷ ಪ.ಮಾ. ರಮೇಶ್, ಅಶ್ವಥ್ ನಾರಾಯಣ, ಎಚ್.ಎನ್. ಮಂಜುನಾಥ್, ಜೆ.ಶಿವಲಿಂಗೇಗೌಡ, ರೈಸ್ಮಿಲ್ ತಮಣ್ಣ, ಪುರಸಭೆ ಸದಸ್ಯ ಅಶೋಕ್, ಶ್ರೀನಿವಾಸ್ ನಾಯಕ್, ಚಿಕ್ಕಮರಳಿ ನವೀನ್ ಕುಮಾರ್ ಉಪಸ್ಥಿತರಿದ್ದರು.
 

Follow Us:
Download App:
  • android
  • ios