ಕಣಿವೆಯಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಫಿನಿಷ್..!

First Published 19, Jun 2018, 2:42 PM IST
BJP Breaks Alliance With Mehbooba Mufti's PDP In Jammu And Kashmir
Highlights

ಕಣಿವೆಯಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಫಿನಿಷ್

ಪಿಡಿಪಿ ಜೊತೆ ಮೈತ್ರಿ ಕಡಿದುಕೊಂಡ ಬಿಜೆಪಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಬಿಕ್ಕಟ್ಟು

ಕಣಿವೆಯಲ್ಲಿ ರಾಜಕೀಯ ಪ್ರಕ್ಷುಬ್ದತೆ     
 

ನವದೆಹಲಿ(ಜೂ.19): ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದಿದೆ. ಕಣಿವೆಯಲ್ಲಿ ನಿರಂತರವಗಿ ಅಶಾಂತಿಯ ವಾತಾವರಣ ಇದ್ದು, ಮೆಹಬೂಬಾ ಮುಫ್ತಿ ಶಾಂತಿ ಕಾಪಾಡುವಲ್ಲಿ ವಿಫಲವಾಗಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಕಣಿವೆಯಲ್ಲಿ ಇರುವ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಶಾಂತಿ ಮರುಸ್ಥಾಪನೆಗೆ ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, ಪಿಡಿಪಿ ಈ ನಿಟ್ಟಿನಲ್ಲಿ ಅಸಹಕಾರ ಧೋರಣೆ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.

ಗಡಿಯಲ್ಲಿ ಉಗ್ರರು ಮತ್ತು ಪಾಕ್ ಸೇನಾಪಡೆಗಳ ನಿರಂತರ ಅಪ್ರಚೋದಿತ ದಾಳಿಯಿಂದಾಗಿ ನಮ್ಮ ಸೈನಿಕರು ಹುತಾತ್ಮರಾಗುತ್ತಿದ್ದು, ಉಗ್ರರಿಗೆ ಬೆಂಬಲ ನೀಡುವ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ಮೆಹಬೂಬಾ ವಿಫಲವಾಗಿದ್ದಾರೆ ಎಂದು ರಾಮ್ ಮಾಧವ್ ವಾಗ್ದಾಳಿ ನಡೆಸಿದರು. ಅಲ್ಲದೇ ಮೈತ್ರಿ ಸರ್ಕಾರದಲ್ಲಿ ಬಿಜೆಪಿ ಸಲಹೆಗಳನ್ನು ತಿರಸ್ಕರಿಸುತ್ತಲೇ ಬಂದಿರುವ ಮೆಹಬೂಬಾ, ಅಶಾಂತಿ ವಾತಾವರಣ ಹೋಗಲಾಡಿಸಲು ಏನೂ ಕ್ರಮ ಕೈಗೊಂಡಿಲ್ಲ ಎಂದು ಅವರು ಹರಿಹಾಯ್ದರು.

ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮೈತ್ರಿ ಸರ್ಕಾರದಿಂದ ಬಿಜೆಪಿ ಹೊರ ಬರುವ ನಿರ್ಣಯ ಕೈಗೊಂಡಿದ್ದು, ಈಗಾಗಲೇ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾಗಿ ರಾಮ್ ಮಾಧವ್ ತಿಳಿಸಿದರು. 

loader