Asianet Suvarna News Asianet Suvarna News

‘ಯಡಿಯೂರಪ್ಪ ಸರ್ಕಾರ ರಚಿಸಿದರೂ ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲ್ಲ’

"2018ರ ಚುನಾವಣೆಯಲ್ಲಿ ಬಿಜೆಪಿಗೆ ಸಂಖ್ಯೆ ಇಲ್ಲವೇ ಮತಪ್ರಮಾಣದಲ್ಲಿ ಬಹುಮತ ಇರಲಿಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು ತಮ್ಮ ಬಲದ ಮೇಲಿನ ವಿಶ್ವಾಸದಿಂದ ಅಲ್ಲ. ಆಪರೇಷನ್ ಕಮಲದ ಮೇಲಿನ ವಿಶ್ವಾಸದಿಂದ. 15 ದಿನ ಕಾಲಾವಕಾಶ ಸಿಕ್ಕಿದ್ದರೆ ಈಗಿನದ್ದನ್ನು ಆಗಲೇ ಮಾಡಿಬಿಡುತ್ತಿದ್ದರು."

BJP Behind Karnataka Political Turmoil  Siddaramaiah
Author
Bengaluru, First Published Jul 23, 2019, 6:10 PM IST

ಬೆಂಗಳೂರು (ಜು.23): ವಿಶ್ವಾಸಮತ ಯಾಚನೆ ಕಲಾಪ ಮುಕ್ತಾಯ ಹಂತಕ್ಕೆ ತಲುಪಿದೆ. ಮಂಗಳವಾರ ಊಟದ ವಿರಾಮದ ನಂತರ ಶಾಸನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದೀರ್ಘವಾಗಿ ಮಾತನಾಡಿದರು.

ಮತ್ತೆ ಪಕ್ಷಾಂತರದ ಇತಿಹಾಸ ಕೆದಕಿದ ಸಿದ್ದರಾಮಯ್ಯ, ರಾಜಕೀಯ ವಿದ್ಯಮಾನ, ಪ್ರಜಾತಂತ್ರ , ಸಂವಿಧಾನದ ಆಶಯಗಳ ಮೇಲೆ ಬೆಳಕು ಚೆಲ್ಲಿದರು.ಈ ಬಗ್ಗೆ ಸಿದ್ದರಾಮಯ್ಯ ಫೇಸ್ಬುಕ್‌ನಲ್ಲಿ ಪೋಸ್ಟ್ ಹಾಕಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿದ್ದಾರೆ.

 

ಮತಪ್ರಮಾಣದ ಪ್ರಕಾರ ಮತದಾರರು ನಮಗೆ ಬಹುಮತ ಕೊಟ್ಟಿದ್ದರು. ನಮ್ಮೆರಡು ಪಕ್ಷಗಳ ಒಟ್ಟು ಮತಪ್ರಮಾಣ ಶೇಕಡಾ 54.44. ಇದರ ಆಧಾರದಲ್ಲಿಯೇ ನಾವು ಸರ್ಕಾರ ರಚಿಸಿದ್ದು.
ಈ ಹಿಂದೆಯೂ ಕರ್ನಾಟಕದಲ್ಲಿ ಹಲವು ಬಾರಿ ಸಮ್ಮಿಶ್ರ ಸರ್ಕಾರಗಳು ರಚನೆಯಾಗಿ, ಆಡಳಿತ ನಡೆಸಿವೆ. ಇದೇನು ಮೊದಲ ಬಾರಿ ರಚನೆಯಾಗುತ್ತಿರುವುದಲ್ಲ.

2018ರ ಚುನಾವಣೆಯಲ್ಲಿ ಬಿಜೆಪಿಗೆ ಸಂಖ್ಯೆ ಇಲ್ಲವೇ ಮತಪ್ರಮಾಣದಲ್ಲಿ ಬಹುಮತ ಇರಲಿಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು ತಮ್ಮ ಬಲದ ಮೇಲಿನ ವಿಶ್ವಾಸದಿಂದ ಅಲ್ಲ. ಆಪರೇಷನ್ ಕಮಲದ ಮೇಲಿನ ವಿಶ್ವಾಸದಿಂದ. 15 ದಿನ ಕಾಲಾವಕಾಶ ಸಿಕ್ಕಿದ್ದರೆ ಈಗಿನದ್ದನ್ನು ಆಗಲೇ ಮಾಡಿಬಿಡುತ್ತಿದ್ದರು. ಈ ಹೊಲಸು ರಾಜಕೀಯ ಬೆಳವಣಿಗೆಗಳ ಹಿಂದೆ ಬಿಜೆಪಿ ಪಕ್ಷ ಇದೆ ಎಂಬುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ. ರಾಜ್ಯದ ಮತದಾರರು ಮೂರ್ಖರಲ್ಲ. ಇದಕ್ಕೆ ಮುಂದಿನ ಚುನಾವಣೆಗಳು ತಕ್ಕ ಪಾಠ ಕಲಿಸಲಿವೆ.
ಅಧಿಕಾರದಾಸೆಗೆ ಶಾಸಕರನ್ನು ಖರೀದಿಸಿ, ಇದ್ದ ಸರ್ಕಾರವನ್ನು ಅಸ್ಥಿರಗೊಳಿಸಿ ಜನರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ರಚಿಸುವುದು ಎಷ್ಟು ಸರಿ?

ಜನಸೇವೆಯ ಉದ್ದೇಶದಿಂದ ರಾಜಕಾರಣಕ್ಕೆ ಬಂದಿದ್ದೇವೆ. ಇದು ನಮಗೆ ವೃತ್ತಿಯಲ್ಲ, ಪ್ರವೃತ್ತಿ. ಇಲ್ಲಿಗೆ ಬಂದ ನಂತರ ಒಂದು ಸಿದ್ದಾಂತವಿಲ್ಲದೇ ಹೋದರೆ ಬಂದದ್ದು ವ್ಯರ್ಥವಾಗುತ್ತದೆ. ನಾನು ಸಂವಿಧಾನದಲ್ಲಿ ನಂಬಿಕೆಯಿಟ್ಟವನು. ದೇಶದ ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದು ಸಂವಿಧಾನದ ಉದ್ದೇಶ. ಸಾಮಾಜಿಕ ನ್ಯಾಯ, ಸಮಾನ ಅವಕಾಶ ಇವು ನನ್ನ ಆಶಯಗಳು ಕೂಡ. ಅಧಿಕಾರ ಯಾರೂ ಬೇಕಾದರೂ ಮಾಡಬಹುದು, ಸರ್ಕಾರ ಯಾವುದು ಬೇಕಾದರೂ ಬರಬಹುದು. ಯಾರೂ ಇಲ್ಲಿ ಶಾಶ್ವತರಲ್ಲ. ಆದರೆ ಪಕ್ಷಾಂತರ ಎಂಬ ಪ್ರಜಾಪ್ರಭುತ್ವಕ್ಕಂಟಿದ ರೋಗದ ಬಗ್ಗೆ ಇಂದು ಚರ್ಚೆಯಾಗಬೇಕಿದೆ. ಇದರ ಬಗ್ಗೆ ಜನರನ್ನು ಎಚ್ಚರಿಸಬೇಕು. ಬಿಜೆಪಿ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಬಿಜೆಪಿಯ ಈ ನಡೆ ನಾಚಿಕೆಗೇಡಿನ ಸಂಗತಿಯಲ್ಲವೇ?

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ104 ಸ್ಥಾನ ಪಡೆದಿದ್ದ ಕಾರಣದಿಂದ ರಾಜ್ಯಪಾಲರು ಯಡಿಯೂರಪ್ಪನವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು, ಜೊತೆಗೆ ಹದಿನೈದು ದಿನಗಳ ಕಾಲಾವಕಾಶ ಸಹ ನೀಡಿದ್ದರು. ಬಹುಮತ ಸಾಬೀತುಪಡಿಸುವಲ್ಲಿ ಅವರು ವಿಫಲರಾದ ನಂತರವೇ ನಾವು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದು. ಹಾಗಾಗಿ ಇದೇನು ಜನಾಭಿಪ್ರಾಯದ ವಿರುದ್ಧವಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚು ಸ್ಥಾನ ಪಡೆಯದಿದ್ದರೂ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಿಲ್ಲವೇ? ಕರ್ನಾಟಕದಲ್ಲಿ ನಮ್ಮದು ಅಪವಿತ್ರ ಮೈತ್ರಿಯಾದರೇ, ಗೋವಾದಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸಿರುವುದು ಅಪವಿತ್ರ ಮೈತ್ರಿಯಲ್ಲವೇ?

ತಮಿಳುನಾಡಲ್ಲಿ ಪಳನಿಸ್ವಾಮಿಯವರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸ್ಸು ಪಡೆಯುತ್ತೇವೆ ಎಂದು ಕೆಲವು ಶಾಸಕರು ರಾಜ್ಯಪಾಲರಿಗೆ ಪತ್ರ ನೀಡಿದ್ದರು. ಅಲ್ಲಿ ವಿಪ್ ಸಹ ನೀಡದೆ ಆ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಯಾವುದೇ ಶಾಸಕ ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದರೆ ತಕ್ಷಣ ಅವರನ್ನು ವಜಾ ಮಾಡುವ ಅಧಿಕಾರವಿದೆ. ಇಂದು ಚರ್ಚೆಯಾಗಬೇಕಿರುವ ಮುಖ್ಯ ವಿಚಾರ ಶಾಸಕರ ಪಕ್ಷಾಂತರದ್ದು. ಇದೇ ರೀತಿಯ ಕೀಳು ಮನೋಭಾವ ಮುಂದುವರೆದರೆ ಯಾವ ಸರ್ಕಾರ ಕೂಡ ಸ್ಥಿರವಾಗಿ ನಿಲ್ಲಲಾರದು. ಬಿಜೆಪಿಯವರು ನಮ್ಮ ಶಾಸಕರನ್ನು ಸಾರಾಸಗಟಾಗಿ ಖರೀದಿ ಮಾಡಿದ್ದಾರೆ.‌ ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ. ಇದನ್ನು ರಾಜ್ಯದ ಜನ ಒಪ್ಪುತ್ತಾರೆಯೇ?

ಇಷ್ಟೆಲ್ಲಾ ನಾಟಕ ಮಾಡಿ, ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದರೂ ಯಡಿಯೂರಪ್ಪನವರು ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲು ಆಗುವುದಿಲ್ಲ. 2008ರಲ್ಲೂ ಇದೇ ಪರಿಸ್ಥಿತಿಯನ್ನು ಅವರು ಎದುರಿಸಿದ್ದಾರೆ. ರೇಣುಕಾಚಾರ್ಯ, ಗೂಳಿಹಟ್ಟಿ ಶೇಖರ್ ಇವರೆಲ್ಲ ಅಂದು ಯಡಿಯೂರಪ್ಪನವರ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದವರಲ್ಲವೇ? ಇಂದಿನ ಹದಗೆಟ್ಟ ರಾಜಕೀಯ ಪರಿಸ್ಥಿತಿಗೂ ನಮಗೂ ಸಂಬಂಧವೇ ಇಲ್ಲ ಎಂದು ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಇದೊಂದು ರೀತಿ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯದು ಎಂಬಂತಿದೆ. ಮುಂದೆ ಬಿಜೆಪಿ ಸರ್ಕಾರ ಬಂದು ಈಗ ಪಕ್ಷಾಂತರ ಮಾಡಿದವರೆಲ್ಲ ಬಿಜೆಪಿಯಲ್ಲಿ ಮಂತ್ರಿಗಳಾದರೆ ಜಗತ್ತಿಗೆ ಇವರ ಕುತಂತ್ರ ತಿಳಿಯುವುದಿಲ್ಲವೇ?

ಕರ್ನಾಟಕಕ್ಕೆ ತನ್ನದೇ ಆದ ಇತಿಹಾಸವಿದೆ. ಹಲವು ಜನಪರ ಹೋರಾಟಗಳನ್ನು ಕಂಡ ನೆಲವಿದು. ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರುವಾಸಿ ರಾಜ್ಯ ನಮ್ಮದು. ಇಂತಹ ಪುಣ್ಯಭೂಮಿಯಲ್ಲಿ ಇಂದು ಎದುರಾಗಿರುವ ಸನ್ನಿವೇಶ ಎಲ್ಲರೂ ತಲೆತಗ್ಗಿಸುವಂತೆ ಮಾಡಿದೆ. ಪ್ರಜಾಪ್ರಭುತ್ವ, ಸಿದ್ದಾಂತ ಗೊತ್ತಿಲ್ಲದವರೆಲ್ಲ ರಾಜಕಾರಣಕ್ಕೆ ಬಂದಿರುವುದೇ ಈ ಪರಿಸ್ಥಿತಿಗೆ ಕಾರಣ. ಹಿಂದೆ ದೇವದುರ್ಗದಲ್ಲಿ ಮಾತನಾಡಿದ್ದ ಆಡಿಯೋ ಟೇಪ್‌ನಲ್ಲಿದ್ದ ಧ್ವನಿ ನನ್ನದೇ ಎಂದು ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದೇ ತರ ಎಷ್ಟೋ ಆಡಿಯೋಗಳು ಹೊರಬಂದಿವೆ, ಬಂಡಾಯ ಶಾಸಕರಿಗೆ ವಿಮಾನ ವ್ಯವಸ್ಥೆ ಮಾಡಿಕೊಡೋದು, ಪಂಚತಾರಾ ಹೋಟೆಲುಗಳಲ್ಲಿ ವಾಸ್ತವ್ಯದ ವ್ಯವಸ್ಥೆ, ಪೊಲೀಸ್ ಬೆಂಗಾವಲು ಇವೆಲ್ಲ ಬಿಜೆಪಿಯವರು ಮಾಡಿಕೊಟ್ಟಿದ್ದಲ್ಲವೇ?

ಹಾಗಾದರೆ ಮಹಾರಾಷ್ಟ್ರದಲ್ಲಿ ಯಾವ ಸರ್ಕಾರವಿದೆ? ಹದಿನೈದು ಜನ ಪಕ್ಷಾಂತರ ಶಾಸಕರನ್ನು ಕಾಯಲು ಸಾವಿರಾರು ಜನರನ್ನು ಬಿಟ್ಟಿದ್ದಾರಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ? ನಾವು ನಮ್ಮ ಪಕ್ಷದ ಶಾಸಕರ ಬಳಿಯೇ ಮಾತನಾಡುವಂತಿಲ್ಲ, ಇಂದು ಇಂದಿನ ರಾಜಕಾರಣದ ವಾಸ್ತವ ಪರಿಸ್ಥಿತಿ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು.

Follow Us:
Download App:
  • android
  • ios