ಜಗ್ಗೇಶ್‌ ಸ್ಪರ್ಧೆಗೆ ಬಿಜೆಪಿಯಲ್ಲಿ ಒತ್ತಡ| ನಾವು ಗೆಲ್ಲಿಸುತ್ತೇವೆ, ಜಗ್ಗೇಶ್‌ಗೆ ಟಿಕೆಟ್‌ ಕೊಡಿ: ಕಾರ‍್ಯಕರ್ತರ ಒತ್ತಾಯ

ಬೆಂಗಳೂರು[ಸೆ.23]: ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಹಾಗೂ ನಟ ಜಗ್ಗೇಶ್‌ ಅವರಿಗೆ ಟಿಕೆಟ್‌ ನೀಡುವಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಗ್ಗೇಶ್‌ ಅವರು ಬಯಸದಿದ್ದರೂ ಅವರನ್ನು ಕೊನೆ ಗಳಿಗೆಯಲ್ಲಿ ಕರೆತಂದು ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಆದರೂ ಜಗ್ಗೇಶ್‌ ಅವರು ಕಡಿಮೆ ಅವಧಿಯಲ್ಲಿ ಭಾರಿ ಪ್ರಚಾರ ಕೈಗೊಂಡು ಸುಮಾರು 60 ಸಾವಿರ ಮತಗಳನ್ನು ಗಳಿಸಿದ್ದು ಕಡಿಮೆ ಸಂಗತಿಯೇನಲ್ಲ. ಕೆಲವು ತಿಂಗಳುಗಳ ಕಾಲ ಮೊದಲೇ ಅವರನ್ನು ಅಭ್ಯರ್ಥಿಯನ್ನಾಗಿಸುವ ಭರವಸೆ ನೀಡಿದ್ದರೆ ಗೆಲ್ಲುತ್ತಿದ್ದರು ಎಂಬ ಮಾತೂ ಪಕ್ಷದಲ್ಲಿ ಪ್ರಬಲವಾಗಿ ಕೇಳಿಬಂದಿದೆ.

ಇದೀಗ ಉಪಚುನಾವಣೆ ಎದುರಾಗಿದೆ. ಕಳೆದ ಬಾರಿ ನಾವು ಯಾರ ವಿರುದ್ಧವಾಗಿ ಕೆಲಸ ಮಾಡಿದೆವೋ ಈ ಬಾರಿ ಅವರ ಪರವಾಗಿ ಕೆಲಸ ಮಾಡಬೇಕು ಎಂದರೆ ಹೇಗೆ? ಇದು ಕಷ್ಟದ ಮಾತು. ಹೀಗಾಗಿ, ಹಿಂದಿನ ಬಾರಿ ಸೋಲುಂಡಿರುವ ಜಗ್ಗೇಶ್‌ ಅವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂಬ ಬೇಡಿಕೆಯನ್ನು ಕಾರ್ಯಕರ್ತರು ಪಕ್ಷದ ನಾಯಕರ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಭಾನುವಾರ ಜಗ್ಗೇಶ್‌ ಅವರೇ ಸ್ವತಃ ಟ್ವೀಟ್‌ ಮೂಲಕ ತಾವು ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಜೊತೆಗೆ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ‘ಉಪಚುನಾವಣೆ ಬಂತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡೆಗಳಿಗೆಯಲ್ಲಿ ಅಭ್ಯರ್ಥಿಯಾದ ನಾನು ತನು ಮನ ಧನ ಕಳೆದುಕೊಂಡು ಕೇವಲ ಒಂಬತ್ತು ದಿನಗಳಲ್ಲಿ 60,400 ಮತಗಳನ್ನು ಪಡೆದೆ. ಮೌನವಾಗಿರಲೋ, ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ, ಇಲ್ಲಾ ಮೌನವಾಗಿ ತ್ಯಾಗಿಯಾಗಲೋ? ಕಾಡಿನಲ್ಲಿ ಕಳೆದುಹೋದ ಮಗುವಿನಂತಾಗಿರುವೆ’ ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿರೋಧಿಸಿದ್ದಾರೆ. ಎಲ್ಲೋ ಇದ್ದ ಅನ್ಯ ಪಕ್ಷದ ಫೇಕ್‌ ಐಡಿಗಳೆಲ್ಲಾ ತಕ್ಷಣ ಕ್ರಿಯಾಶೀಲವಾಗಿ ನನ್ನ ಪೇಜ್‌ ಮೇಲೆ ವಾಂತಿ ಮಾಡಿವೆ. ನೆನಪಿಡಿ, ನಾನು ಜಗ್ಗೇಶ್‌. ರಾಯರ ಮಗ. ನನಗೆ ಬೇಕಾದದ್ದು ಹುಡುಕಿಕೊಂಡು ಬರುತ್ತದೆ. ಶ್ರೀರಾಮಪುರದ ಫುಟ್‌ಪಾತಿನಿಂದ ಇಲ್ಲಿವರೆಗೂ ಬಂದವನು ನಾನು.

- ಜಗ್ಗೇಶ್‌

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.