ವಿಶ್ವದ ಜನಪ್ರಿಯ ಹಾಗೂ ಅಷ್ಟೇ ವಿವಾದಿತ ಡಿಜಿಟಲ್ ಕರೆನ್ಸಿ `ಬಿಟ್ ಕಾಯಿನ್' ಮೌಲ್ಯ ಇದೇ ಮೊದಲ ಬಾರಿಗೆ 10 ಸಾವಿರ ಅಮೆರಿಕನ್ ಡಾಲರ್ (6.4 ಲಕ್ಷ ರು.) ಗಡಿ ದಾಟಿದೆ. ಇದರಿಂದಾಗಿ ಬಿಟ್ ಕಾಯಿನ್ ಮೇಲೆ ಹಣ ಹೂಡಿರುವವರು ಭಾರಿ ಸಂತಸ ಗೊಂಡಿದ್ದರೆ, ಇದು ನೀರಿನ ಮೇಲಿನ ಗುಳ್ಳೆಯಂತೆ ಯಾವಾಗ ಒಡೆದು ಹೋಗುತ್ತದೋ ಎಂಬ ಆತಂಕವೂ ಕೇಳಿಬಂದಿದೆ.
ಸಿಂಗಾಪುರ(ನ.30): ವಿಶ್ವದ ಜನಪ್ರಿಯ ಹಾಗೂ ಅಷ್ಟೇ ವಿವಾದಿತ ಡಿಜಿಟಲ್ ಕರೆನ್ಸಿ `ಬಿಟ್ ಕಾಯಿನ್' ಮೌಲ್ಯ ಇದೇ ಮೊದಲ ಬಾರಿಗೆ 10 ಸಾವಿರ ಅಮೆರಿಕನ್ ಡಾಲರ್ (6.4 ಲಕ್ಷ ರು.) ಗಡಿ ದಾಟಿದೆ. ಇದರಿಂದಾಗಿ ಬಿಟ್ ಕಾಯಿನ್ ಮೇಲೆ ಹಣ ಹೂಡಿರುವವರು ಭಾರಿ ಸಂತಸ ಗೊಂಡಿದ್ದರೆ, ಇದು ನೀರಿನ ಮೇಲಿನ ಗುಳ್ಳೆಯಂತೆ ಯಾವಾಗ ಒಡೆದು ಹೋಗುತ್ತದೋ ಎಂಬ ಆತಂಕವೂ ಕೇಳಿಬಂದಿದೆ. ಏಷ್ಯಾ ಮಾರುಕಟ್ಟೆಯಲ್ಲಿ ಒಂದು ಬಿಟ್ ಕಾಯಿನ್ ಮೌಲ್ಯ 10379 ಅಮೆರಿಕನ್ ಡಾಲರ್ (6.6 ಲಕ್ಷ ರು.)ಗೆ ಏರಿಕೆಯಾಗಿದೆ.
ವರ್ಷದ ಆರಂಭದಲ್ಲಿ ಇದ್ದ ಮೌಲ್ಯಕ್ಕೆ ಹೋಲಿಸಿದರೆ ಇದು 10 ಪಟ್ಟಿಗಿಂತ ಅಧಿಕ ಎಂಬುದು ಗಮನಾರ್ಹ. ಹಣ ವಿನಿಮಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿಎಂಇ ಗ್ರೂಪ್ ಬಿಟ್ ಕಾಯಿನ್ ವಹಿವಾಟಿಗಾಗಿ ಮಾರುಕಟ್ಟೆ ಒದಗಿಸುವುದಾಗಿ ಕಳೆದ ತಿಂಗಳು ಹೇಳಿತ್ತು. ಹೀಗಾಗಿ ಕಳೆದ ಎರಡು ವಾರಗಳಲ್ಲಿ ಬಿಟ್ ಕಾಯಿನ್ ಮೌಲ್ಯ ಶೇ.45ರಷ್ಟು ವೃದ್ಧಿಯಾಗಿದೆ. 2009ರಲ್ಲಿ ಜನ್ಮತಳೆದ ಬಿಟ್ ಕಾಯಿನ್ ಅನ್ನು `ಆನ್ಲೈನ್ ಮನಿ', `ಡಿಜಿಟಲ್ ಗೋಲ್ಡ್' ಎಂದೆಲ್ಲಾ ಅದರ ಹೂಡಿಕೆದಾರರು ಹೊಗಳುತ್ತಾರೆ.
ಪ್ರತಿ ಬಿಟ್ ಕಾಯಿನ್ ಮೇಲೂ ಅನಾಮಧೇಯ ಕೋಡ್ ಗೂಢಲಿಪಿ ಇರುತ್ತದೆ. ಇದಕ್ಕೆ ಕಾನೂನುಬದ್ಧ ವಿನಿಮಯ ದರವಿಲ್ಲ. ಯಾವುದೇ ಕೇಂದ್ರೀಯ ಬ್ಯಾಂಕಿನ ಬೆಂಬಲವಿಲ್ಲ. ಇದೊಂದು ವಂಚನೆ ಎಂದು ಜೆಪಿ ಮಾರ್ಗನ್ ಚೇಸ್ ಸಂಸ್ಥೆ ಕಿಡಿಕಾರಿತ್ತು. ಚೀನಾ ಹಾಗೂ ದಕ್ಷಿಣ ಕೊರಿಯಾ ಸರ್ಕಾರಗಳು ಕಳವಳ ವ್ಯಕ್ತಪಡಿಸಿದ್ದವು. ಬಿಟ್ ಕಾಯಿನ್ ಅನ್ನು ಮಾದಕ ವಸ್ತು ಹಾಗೂ ಶಸ್ತ್ರಾಸ್ತ್ರ ಖರೀದಿಗೂ ಬಳಸಲಾಗುತ್ತದೆ ಎಂದು ಹೇಳಲಾಗಿದೆ.
