ಬೆಂಗಳೂರು [ಜೂ.21] :  ನಾಟಕ, ಕಲೆ, ಕನ್ನಡ ಸಂಸ್ಕೃತಿ, ಸಂಗೀತ, ನಾಟ್ಯ ಸೇರಿದಂತೆ ವಿವಿಧ ಪ್ರಾಕಾರಗಳಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಆಯಾ ಜಿಲ್ಲಾಮಟ್ಟದಲ್ಲಿ ಪ್ರೋತ್ಸಾಹಿಸಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ಕರ್ನಾಟಕ ಸಂಸ್ಕೃತಿ’ ಎಂಬ ನೂತನ ಕಾರ್ಯಕ್ರಮವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ನಗರದ ಕನ್ನಡ ಭವನದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ‘ಕರ್ನಾಟಕ ಸಂಸ್ಕೃತಿ’ ಕಾರ್ಯಕ್ರಮದ ಕುರಿತು ನಿಲುವು ವ್ಯಕ್ತವಾಯಿತು. ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಆಯಾ ಪ್ರಾಕಾರಗಳಲ್ಲಿ 18 ವರ್ಷದೊಳಗೆ ಮತ್ತು ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವುದು. ವಿಜೇತರಾದವರಿಗೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ, ಅಂತಿಮ ವಿಜೇತರನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಪರಿಗಣಿಸುವುದು ಈ ಹೊಸ ಯೋಜನೆಯ ಉದ್ದೇಶವಾಗಿದೆ.

ಜಯಂತಿಗಳ ವಿಲೀನಕ್ಕೆ ಚಿಂತನೆ:

ಆಯಾ ಸಮುದಾಯ ಹಾಗೂ ಸಾರ್ವಜನಿಕರು ನಿರುತ್ಸಾಹ ತೋರುತ್ತಿರುವ ಹಿನ್ನೆಲೆಯಲ್ಲಿ ಸರ್ವಜ್ಞ ಜಯಂತಿ, ಮಹಾವೀರ ಜಯಂತಿ, ಅಕ್ಕಮಹಾದೇವಿ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ, ವಿಶ್ವಮಾನವ ಜಯಂತಿ, ಕಾಯಕ ಶರಣರ ಜಯಂತಿಗಳನ್ನು ಒಂದೇ ದಿನ ಆಚರಿಸುವ ಸಂಬಂಧ ಎಲ್ಲ ಶಾಸಕರು, ಚಿಂತಕರು, ಸಾಹಿತಿಗಳು, ಗಣ್ಯರು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಚಿಂತನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಎಲ್ಲ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಅಲ್ಲಿನ ಶಾಲಾ-ಕಾಲೇಜುಗಳಲ್ಲಿ ಮಹಾನುಭಾವರ ಬಗ್ಗೆ ಪ್ರಬಂಧ, ಚರ್ಚಾ ಸ್ಪರ್ಧೆ, ನಾಟಕ ಸ್ಪರ್ಧೆಗಳನ್ನು ಏರ್ಪಡಿಸಿ ಅವರ ಬಗ್ಗೆ ಮತ್ತಷ್ಟುಪ್ರಚುರಪಡಿಸಬೇಕು. ಈ ಕಾರ್ಯಕ್ರಮಕ್ಕೆ ನಿಗದಿ ಆಗಿರುವ ಹಣವನ್ನು ಅದೇ ಉದ್ದೇಶಕ್ಕೆ ಬಳಸಲು ತೀರ್ಮಾನ ಕೈಗೊಳ್ಳಲಾಯಿತು.