ರೋಗಿಗಳಂತೆ ಕರೆತಂದು ದೇವರ ದರ್ಶನ!| ಕೈಗೆ ಡ್ರಿಪ್ ಅಳವಡಿಸಿ, ಆ್ಯಂಬುಲೆನ್ಸ್‌ನಲ್ಲಿ ಕರೆತಂದು ಅಯ್ಯಪ್ಪ ದರ್ಶನ
ಶಬರಿಮಲೆ[ಜ.04]: ಕೇರಳದ ಬಿಂದು ಮತ್ತು ಕನಕದುರ್ಗ, ಶಬರಿಮಲೆ ಅಯ್ಯಪ್ಪ ದರ್ಶನ ಮಾಡಿದ್ದು ಹೇಗೆ ಎಂಬ ರಹಸ್ಯ ಬಯಲಾಗಿದೆ. ಈ ಇಬ್ಬರನ್ನೂ ರೋಗಿಗಳಂತೆ ಬಿಂಬಿಸಿ, ಆ್ಯಂಬುಲೆನ್ಸ್‌ನಲ್ಲಿ ಕರೆತಂದು, ದೇವರ ದರ್ಶನ ಮಾಡಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಇಡೀ ಪ್ರಕರಣ ನಡೆದಿದ್ದು ಹೇಗೆ ಎಂಬ ಮಾಹಿತಿ ಹೀಗಿದೆ.
ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ
ಬಿಂದು ಮತ್ತು ಕನಕರಿಗೆ ದೇವರ ದರ್ಶನ ಒದಗಿಸಲು ನಿರ್ಧರಿಸಿದ್ದ ಕೇರಳ ಸರ್ಕಾರ, ಇದಕ್ಕೆಂದೇ ಹಿರಿಯ ಅಧಿಕಾರಿಗಳ ತಂಡವೊಂದನ್ನು ರಚಿಸಿತ್ತು. ಈ ಮೂಲಕ ಡಿ.30ರಂದೇ ದರ್ಶನ ಭಾಗ್ಯ ಕಲ್ಪಿಸಲು ನಿರ್ಧರಿಸಿತ್ತು. ಆದರೆ ಆ ಸಮಯದಲ್ಲಿ ಜನಸಂದಣಿ ಹೆಚ್ಚಿರುವ ಕಾರಣ ಮತ್ತು ಜ.1ರಂದು ತಾನೇ ನಡೆಸಲು ಉದ್ದೇಶಿಸಿದ್ದ ಮಹಿಳಾ ಗೋಡೆ ಕಾರ್ಯಕ್ರಮಕ್ಕೆ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಕಡೇ ಹಂತದಲ್ಲಿ ಸರ್ಕಾರ ಯೋಜನೆಯನ್ನು ಡಿ.2ಕ್ಕೆ ಮುಂದೂಡಿತ್ತು. ಹೀಗಾಗಿ ಅವರನ್ನು 2 ದಿನಗಳ ಕಾಲ ಕೊಡಗಿಗೆ ಕಳುಹಿಸಲಾಗಿತ್ತು.
ಬಳಿಕ ಡಿ.31ರ ರಾತ್ರಿ ಕೊಡಗಿನಿಂದ ಹೊರಟ ಬಿಂದು ಮತ್ತು ಕನಕಾ ಕೇರಳಕ್ಕೆ ಪ್ರವೇಶಿಸಿದರು. ಅಲ್ಲಿಂದ ಖಾಸಗಿ ವಾಹನದಲ್ಲಿ, ಪೊಲೀಸ್ ಬೆಂಗಾವಲಿನಲ್ಲಿ ಜ.1ರಾತ್ರಿ 10.30ರ ವೇಳೆಗೆ ಪಂಬಾ ತಲುಪಿದರು. ಬಳಿಕ ಇಬ್ಬರನ್ನೂ ಅರಣ್ಯ ಇಲಾಖೆ ಆ್ಯಂಬುಲೆನ್ಸ್‌ನಲ್ಲಿ ಹತ್ತಿಸಿಕೊಳ್ಳಲಾಯಿತು. ಆ್ಯಂಬುಲೆನ್ಸ್‌ನಲ್ಲಿ ಆಕ್ಸಿಜನ್ ಸಿಲಿಂಡರ್ ಅಳವಡಿಸಿ, ಇಬ್ಬರೂ ಕೈಗೂ ಗ್ಲುಕೋಸ್ ಡ್ರಿಪ್ ಹಾಕಿ, ರೋಗಿಗಳೆಂಬಂತೆ ಬಿಂಬಿಸಿ ದೇಗುಲದ ಮಾರ್ಗದಲ್ಲಿ ಕರೆದೊಯ್ಯಲಾಯಿತು. ಈ ಮೂಲಕ, ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲಾಯಿತು.
ಶಬರಿಮಲೆಗೆ ರಾತ್ರೋ ರಾತ್ರಿ ಇಬ್ಬರು ಮಹಿಳೆಯರು ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ವಿವರ
ಹೀಗೆ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದ ಬಳಿಕ ಇಬ್ಬರನ್ನೂ ದೇಗುಲದ ಸಮೀಪದ ಪ್ರದೇಶದಲ್ಲಿ ಇಳಿಸಲಾಯ್ತು. ಅಲ್ಲಿಂದ ದೇಗುಲದಲ್ಲಿ ಅರವಣ ಪ್ರಸಾದ ವಿತರಿಸುವ ಸ್ಥಳಕ್ಕೆ, ದೇಗುಲದ ಸಿಬ್ಬಂದಿ ಪ್ರವೇಶಕ್ಕೆ ಇರುವ ಸುರಂಗ ಮಾರ್ಗದ ಮೂಲಕ ಕರೆದೊಯ್ಯಲಾಯ್ತು. ಇವರ ಬರುವಿಕೆಯ ರಹಸ್ಯ ಕಾಪಾಡಲು, ಮಾರ್ಗ ಮಧ್ಯದಲ್ಲಿ ಇರುವ ಬಾಂಬ್ ತಪಾಸಣಾ ಸಿಬ್ಬಂದಿಯನ್ನೂ ಅಲ್ಲಿಂದ ತೆರವುಗೊಳಿಸಲಾಯ್ತು.
ಹೀಗೆ ಬಿಂದು ಮತ್ತು ಕನಕ, ದೇಗುಲದ ಮುಖ್ಯಪ್ರದೇಶವನ್ನು ಬೆಳಗ್ಗೆ 3.48ಕ್ಕೆ ಪ್ರವೇಶಿಸಿದ ವೇಳೆ ದೇಗುಲದಲ್ಲಿ ಗಣಪತಿ ಹೋಮ ನಡೆಯಿತ್ತು. ಎಲ್ಲರೂ ಅತ್ತ ಗಮನ ಹರಿಸಿದ್ದ ಕಾರಣ, ಇವರ ಬಗ್ಗೆ ಯಾರೂ ಗಮನ ಹರಿಸಲಿಲ್ಲ. ಹೀಗೆ ಕೆಲವೇ ನಿಮಿಷಗಳಲ್ಲಿ ದೇವರ ದರ್ಶನ ಪಡೆದ ಇಬ್ಬರನ್ನೂ ಬಳಿಕ ಪೊಲೀಸ್ ಭದ್ರತೆಯಲ್ಲೇ ಆ್ಯಂಬುಲೆನ್ಸ್ ಮೂಲಕ ಯಾರಿಗೂ ತಿಳಿಯದಂತೆ ಕರೆದೊಯ್ಯಲಾಯಿತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 4, 2019, 10:49 AM IST