ನವದೆಹಲಿ[ಜ.09]: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 2 ದಿನಗಳ ಭಾರತ ಬಂದ್‌ ನಡೆಸುತ್ತಿರುವ ಕಾರ್ಮಿಕ ಸಂಘಟನೆಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ಶಾಕ್‌ ನೀಡಿದೆ. ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡುವ ಮಸೂದೆಯೊಂದನ್ನು ಲೋಕಸಭೆಯಲ್ಲಿ ಮಂಡನೆ ಮಾಡಿದೆ. ಇದು ಕಾಂಗ್ರೆಸ್‌ ಹಾಗೂ ಸಿಪಿಎಂನ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದೊಂದು ಅಸಂವಿಧಾನಿಕ ವಿಧೇಯಕ ಎಂದು ಕಿಡಿಕಾರಿ ಸಿಪಿಎಂ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದಿದ್ದಾರೆ.

ಈಗ ಇರುವ ನಿಯಮಗಳ ಪ್ರಕಾರ ಕಾರ್ಮಿಕ ಸಂಘಟನೆಗಳು ಹೆಸರು ನೋಂದಣಿ ಮಾಡಬೇಕು. ಅವುಗಳಿಗೆ ಮಾನ್ಯತೆ ಎಂಬುದು ಏನಿಲ್ಲ. ಆದರೆ ಕೇಂದ್ರ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಮಂಡನೆ ಮಾಡಿರುವ ‘ಕಾರ್ಮಿಕ ಸಂಘಟನೆಗಳ (ತಿದ್ದುಪಡಿ) ವಿಧೇಯಕ- 2019’ರಡಿ ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡುವ ಪ್ರಸ್ತಾವವಿದೆ. ಸರ್ಕಾರದ ನೀತಿ ನಿರೂಪಣೆಯಲ್ಲಿ ಈ ರೀತಿ ಮಾನ್ಯತೆ ಪಡೆದ ಸಂಘಟನೆಗಳನ್ನು ಮಾತ್ರವೇ ಸಂಪರ್ಕಿಸಲಾಗುತ್ತದೆ.

ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆಗಳು ಇದ್ದರೆ ಕೈಗಾರಿಕೆ ಅಥವಾ ಸಂಸ್ಥೆಗಳ ಜತೆ ಚೌಕಾಸಿ ಅಥವಾ ಸಂಧಾನ ನಡೆಸುವ ಹಕ್ಕು ಹೊಂದಿರುತ್ತವೆ ಎಂಬುದು ಸರ್ಕಾರದ ವಾದ. ವಿಧೇಯಕ ಚರ್ಚೆಗೆ ಬಂದಾಗ ಇತರೆ ಅಂಶಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಸಂದು ಗಂಗ್ವಾರ್‌ ಮಂಗಳವಾರ ಸದನದಲ್ಲಿ ತಿಳಿಸಿದರು.

ಆದರೆ ಕಾಂಗ್ರೆಸ್ಸಿನ ಶಶಿ ತರೂರ್‌, ಸಿಪಿಎಂನ ಎಂ.ಬಿ. ರಾಜೇಶ್‌, ಅನಿರುಧನ್‌ ಸಂಪತ್‌ ಹಾಗೂ ಆರ್‌ಎಸ್ಪಿಯ ಎನ್‌.ಕೆ. ಪ್ರೇಮಚಂದ್ರನ್‌ ಅವರು ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಸರ್ಕಾರಕ್ಕೆ ವ್ಯಾಪಕ ಅಧಿಕಾರ ನೀಡುವ ಈ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಲಾಗಿದೆ. ಇದನ್ನು ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಎಂದು ತರೂರ್‌ ಆಗ್ರಹಿಸಿದರು.