ಮುಂದಿನ 15 ವರ್ಷಗಳಲ್ಲಿ ದೇಶದ ಪ್ರತಿ ನಾಗರಿಕರು ಶೌಚಾಲಯ ಸಹಿತ ಮನೆ, ದ್ವಿಚಕ್ರ ವಾಹನ ಅಥವಾ ಕಾರು, ಹವಾನಿಯಂತ್ರಕ ಯಂತ್ರ (ಎ.ಸಿ.) ಹಾಗೂ ಡಿಜಿಟಲ್‌ ಸಂಪರ್ಕ ಹೊಂದಿರುವಂತೆ ಮಾಡುವ ದೂರದೃಷ್ಟಿಯನ್ನು ನೀತಿ ಆಯೋಗ ಹೊಂದಿದೆ.

ನವದೆಹಲಿ(ಎ.25): ಮುಂದಿನ 15 ವರ್ಷಗಳಲ್ಲಿ ದೇಶದ ಪ್ರತಿ ನಾಗರಿಕರು ಶೌಚಾಲಯ ಸಹಿತ ಮನೆ, ದ್ವಿಚಕ್ರ ವಾಹನ ಅಥವಾ ಕಾರು, ಹವಾನಿಯಂತ್ರಕ ಯಂತ್ರ (ಎ.ಸಿ.) ಹಾಗೂ ಡಿಜಿಟಲ್‌ ಸಂಪರ್ಕ ಹೊಂದಿರುವಂತೆ ಮಾಡುವ ದೂರದೃಷ್ಟಿಯನ್ನು ನೀತಿ ಆಯೋಗ ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ 2031-32ರ ದೂರದೃಷ್ಟಿಯನ್ನು ಆಯೋಗದ ಉಪಾಧ್ಯಕ್ಷ ಅರವಿಂದ ಪಾನಗಢಿಯಾ ಅವರು ಮಂಡಿಸಿದರು. ಈ ವೇಳೆ ಮುಖ್ಯಮಂತ್ರಿಗಳೂ ಇದ್ದರು. ಸಂಪೂರ್ಣ ಸಾಕ್ಷರತೆ ಹೊಂದಿದ ಸಮಾಜವನ್ನು ನಿರ್ಮಿಸುವುದರ ಜತೆಗೆ, ಸರ್ವರಿಗೂ ಆರೋಗ್ಯ ಸೇವೆ ದೊರಕಿಸಿಕೊಡುವ ಆಶಯವೂ ನೀತಿ ಆಯೋಗದ ದೂರದೃಷ್ಟಿಯಲ್ಲಿದೆ. ವಿಶಾಲವಾದ, ಅತ್ಯಾಧುನಿಕ ರಸ್ತೆ, ರೈಲು, ಜಲ ಹಾಗೂ ವಾಯುಸಂಪರ್ಕ, ಪ್ರತಿಯೊಬ್ಬರ ನಾಗರಿಕರಿಗೂ ಶುದ್ಧ ಗಾಳಿ ಹಾಗೂ ನೀರು ಸಿಗುವಂತಹ ಸ್ವಚ್ಛ ಭಾರತದ ಕನಸನ್ನು ಆಯೋಗ ಹೊಂದಿದೆ.

ಸದ್ಯ 1.06 ಲಕ್ಷ ರು.ನಷ್ಟಿರುವ ತಲಾದಾಯವನ್ನು ಮೂರುಪಟ್ಟು ಹೆಚ್ಚಿಸಿ 3.14 ಲಕ್ಷ ರು.ಗೆ ಏರಿಸುವ, 137 ಲಕ್ಷ ಕೋಟಿ ರು.ನಷ್ಟಿರುವ ದೇಶದ ಒಟ್ಟು ಆಂತರಿಕ ಉತ್ಪನ್ನವನ್ನು 469 ಲಕ್ಷಕ್ಕೇರಿಸುವ ಉದ್ದೇಶವನ್ನು ಹೊಂದಿದೆ.