ಭೀಮಾತೀರದ ಹತ್ಯೆಗೆ ಬಿಗ್ ಟ್ವಿಸ್ಟ್ !
ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದ, ಭೀಮಾತೀರದ ಹಂತಕ ಕುಖ್ಯಾತಿಯ ಧರ್ಮರಾಜ ಚಡಚಣ ಸಹೋದರ ನಾಪತ್ತೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ವಿಜಯಪುರ : ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದ, ಭೀಮಾತೀರದ ಹಂತಕ ಕುಖ್ಯಾತಿಯ ಧರ್ಮರಾಜ ಚಡಚಣ ಸಹೋದರ ನಾಪತ್ತೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಗಂಗಾಧರ ಚಡಚಣ ನಾಪತ್ತೆ ಯಾಗಿ ರುವುದಲ್ಲ, ಬದಲಾಗಿ ಆತನನ್ನು ಹತ್ಯೆ ಮಾಡಿ, ದೇಹವನ್ನು ಭೀಮಾ ನದಿಗೆ ಎಸೆಯಲಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಅಷ್ಟೇ ಅಲ್ಲದೆ ಗಂಗಾಧರನನ್ನು ಆರೋಪಿಗಳಿಗೆ ಒಪ್ಪಿಸಿದವರು ಪೊಲೀಸರು ಎಂಬ ಮಾಹಿತಿಯೂ ಈಗ ಸ್ಫೋಟಗೊಂಡಿದ್ದು ಇದಕ್ಕೆ ಸಂಬಂಧಿಸಿ ಒಬ್ಬ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಮೂವರು ಕಾನ್‌ಸ್ಟೇಬಲ್‌ಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದರಿಂದಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಚಡಚಣದ ಹಿಂದಿನ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಕಾನ್‌ಸ್ಟೇಬಲ್‌ಗಳಾದ ಸಿದ್ಧಾರೂಢ ರೂಗಿ, ಚಂದ್ರಶೇಖರ ಜಾಧವ ಹಾಗೂ ಗೆದ್ದಪ್ಪ ನಾಯ್ಕೋಡಿ ಅವರನ್ನು ಬಂಧಿಸಿರುವುದಾಗಿ ತಿಳಿಸಿದರು. ಸದ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿ ಶನಿವಾರ ಇಂಡಿ ತಾಲೂಕು ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಧೀಶರು ಜೂ.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದರು.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಮಂತ ಪೂಜಾರಿ ಹಾಗೂ ಸಿದ್ಧಗೊಂಡಪ್ಪ ತಿಕ್ಕುಂಡಿಯನ್ನು ಪೊಲೀಸರು ಕಳೆದ ಐದು ದಿಗನಳ ಹಿಂದೆಯೇ ಬಂಧಿಸಿದ್ದರು. ಈಗ ಪಿಎಸ್‌ಐ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ ಆರಕ್ಕೆ ಏರಿದಂತಾಗಿದೆ. ಬಂಧಿತ ಆರೋಪಿ ಪಿಎಸ್‌ಐ ಗೋಪಾಲ ಹಳ್ಳೂರ ಅವರು ಸದ್ಯ ಬೆಳಗಾವಿ ಡಿಸಿಆರ್‌ಬಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಎಸ್‌ಪಿ ನಿಕ್ಕಂ ತಿಳಿಸಿದರು.
ಆರೋಪಿಗಳೇ ಬಾಯ್ಬಿಟ್ಟಿದ್ದರು:
ತನ್ನ ಮಗನನ್ನು ಕೊಲೆ ಮಾಡಿಸಲಾಗಿದೆ ಎಂದು ಗಂಗಾಧರನ ತಾಯಿ ನೀಡಿದ ದೂರಿನನ್ವಯ ಈಗ್ಗೆ ಐದು ದಿನಗಳ ಹಿಂದೆಯಷ್ಟೇ ಪ್ರಕರಣ ದಾಖಲಿಸಿ ಆರೋಪಿಗಳಾದ ಹನಮಂತ ಪೂಜಾರಿ ಹಾಗೂ ಸಿದ್ಧಗೊಂಡಪ್ಪ ತಿಕ್ಕುಂಡಿ ಅವರನ್ನು ಬಂಧಿಸಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಗಂಗಾಧರನನ್ನು ತಮಗೆ ಪೊಲೀಸರೇ ಒಪ್ಪಿಸಿದ್ದು ನಂತರ ಆತನನ್ನು ಕೊಲೆ ಮಾಡಿ ದೇಹವನ್ನು ಭೀಮಾನದಿಗೆ ಎಸೆಯಲಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದರು. ಅಲ್ಲದೆ, ಈ ಗಂಗಾಧರನನ್ನು ತಮಗೆ ಒಪ್ಪಿಸಿದವರ ಹೆಸರನ್ನೂ ಬಹಿರಂಗಪಡಿಸಿದ್ದರು ಎಂದು ಹೇಳಿದರು.
ಭೈರಗೊಂಡ ಪತ್ತೆಗೆ ಜಾಲ: ಗಂಗಾಧರ ಕೊಲೆ ಪ್ರಕರಣದಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಪ್ರಮುಖ ಆರೋಪಿಯಾಗಿದ್ದು, ಆತನ ಪತ್ತೆಗಾಗಿ ಜಾಲ ಬೀಸಲಾಗಿದೆ. 2017 ಅಕ್ಟೋಬರ್ 30ರಂದು ಧರ್ಮರಾಜ ಚಡಚಣ ಎನ್‌ಕೌಂಟರ್ ಮಾಡಿದ ದಿನವೇ ಆತನ ಸಹೋದರ ಗಂಗಾಧರನನ್ನೂ ಕೊಲೆ ಮಾಡಲಾಗಿದೆ. ಆದರೆ ಆತನ ಮೃತದೇಹ ಪತ್ತೆಯಾಗಿಲ್ಲ. ಬಂಧಿತ ಇಬ್ಬರು ಆರೋಪಿಗಳು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ತನಿಖೆ ಇನ್ನೂ ಮುಂದುವರಿದಿದೆ ಎಂದರು.