Asianet Suvarna News Asianet Suvarna News

ನಟ ದೊಡ್ಡಣ್ಣ ಅಳಿಯಗೆ ಬಿಗ್ ರಿಲೀಫ್

ನೋಟು ಅಮಾನ್ಯೀಕರಣ ಬಳಿಕ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಬಿಐ ನಡೆಸಿದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಸಿಬಿಐ ವಿಶೇಷ ನ್ಯಾಯಾಲಯವು ಉದ್ಯಮಿ ಕೆ.ಸಿ.ವೀರೇಂದ್ರ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶಿಸಿದೆ.
 

Big Relief To Actor Doddanna Son-In-Law KC Veerendra.

ಬೆಂಗಳೂರು :  ನೋಟು ಅಮಾನ್ಯೀಕರಣ ಬಳಿಕ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಬಿಐ ನಡೆಸಿದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಸಿಬಿಐ ವಿಶೇಷ ನ್ಯಾಯಾಲಯವು ಉದ್ಯಮಿ ಕೆ.ಸಿ.ವೀರೇಂದ್ರ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶಿಸಿದೆ.

2016 ರ ಡಿ.10 ರಂದು ಚಿತ್ರದುರ್ಗದ ಚಳ್ಳಕೆರೆಯ ಕೆ.ಸಿ.ವೀರೇಂದ್ರ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಬಾತ್‌ರೂಂನಲ್ಲಿನ ಗೌಪ್ಯ ಲಾಕರ್‌ನಲ್ಲಿ90  ಲಕ್ಷ ರು. ನಗದು, 4  ಕೆ.ಜಿ. ಚಿನ್ನವನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ಪ್ರಕರಣವನ್ನು ಕೈ ಬಿಟ್ಟಿದೆ. ಅಲ್ಲದೇ, ಒಟ್ಟು, 5.7 ಕೋಟಿ ರು. ಮೌಲ್ಯದ ನಗ-ನಾಣ್ಯವನ್ನು ಹಿಂತಿರುಗಿ ಸುವಂತೆ ಆದೇಶಿಸಿದೆ.

ಚಳ್ಳಕೆರೆಯ ಎಸ್‌ಬಿಎಂ ಬ್ಯಾಂಕ್ ನೋಟು ಅಮಾನ್ಯೀಕರಣಗೊಂಡ ವೇಳೆ ಎರಡು ಸಾವಿರ ಮುಖಬೆಲೆ ನೋಟುಗಳನ್ನು ಅನುಕ್ರಮವಾಗಿ ಯಾವ ಶಾಖೆಗಳಿಗೆ ವಿತರಣೆ ಮಾಡಿತು ಎಂಬ ಮಾಹಿತಿ ಲಭ್ಯವಾಗಿಲ್ಲ. ಬ್ಯಾಂಕ್ ಅಧಿಕಾರಿಗಳ ಪಾತ್ರ ಇರುವ ಬಗ್ಗೆ ಪುಷ್ಟೀಕರಿಸುವ ಸಾಕ್ಷ್ಯಗಳು ಸಿಕ್ಕಿಲ್ಲ. ಆರೋಪಿಗಳು ದಾಖಲೆ ತಿದ್ದಿದ್ದಾರೆ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ಪ್ರಕರಣವನ್ನು ಇತ್ಯರ್ಥಗೊಳಿಸಿದೆ.

ಲಾಕರ್ ಎಲ್ಲಿ ಬೇಕಾದರೂ ಮಾಡಿಸ ಬಹುದು: ಲಾಕರ್ ಎಲ್ಲಿ ಬೇಕಾದರೂ ಮಾಡಿಸಬಹುದಾಗಿದ್ದು, ಗೌಪ್ಯವಾಗಿರಲಿ ಎಂಬ ಕಾರಣಕ್ಕಾಗಿ ಬಾತ್‌ರೂಂನಲ್ಲಿ ಲಾಕರ್ ಮಾಡಿಸಲಾಗಿತ್ತು ಎಂದು ನಟ ದೊಡ್ಡಣ್ಣ ಅಳಿಯ ಹಾಗೂ ಉದ್ಯಮಿ ಕೆ.ಸಿ.ವೀರೇಂದ್ರ ತಿಳಿಸಿದ್ದಾರೆ.

ನೋಟು ಅಮಾನ್ಯೀಕರಣ ಬಳಿಕ ದಾಳಿಗೊಳಗಾಗಿ ಸಿಬಿಐ ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದ ಬಳಿಕ ಮಾತನಾಡಿದ ಅವರು, ನನ್ನ ವಿರುದ್ಧ ಕೇಳಿ ಬಂದ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ವೇಳೆ ಸಿಬಿಐ ಮತ್ತು ಐಟಿ ಇಲಾಖೆಗೆ ಸೂಕ್ತ ದಾಖಲೆಗಳನ್ನು ಒದಗಿಸಲಾಗಿದೆ. ಹೀಗಾಗಿ ಸಿಬಿಐ ತನಿಖೆಯಲ್ಲಿ ನಿರ್ದೋಷಿ ಎಂಬುದು ಸಾಬೀತಾಗಿದೆ. ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಪ್ರಕರಣವನ್ನು ಖುಲಾಸೆಗೊಳಿಸಲಾಗಿದೆ ಎಂದು ಹೇಳಿದರು.

ಅಮೂಲ್ಯ ವಸ್ತುಗಳನ್ನು ಮತ್ತು ಹಣವನ್ನು ಇಡಲು ಲಾಕರ್ ಎಲ್ಲಿ ಬೇಕಾದರೂ ಮಾಡಿಸಬಹುದು. ಅದು ಅವರವರ ವೈಯಕ್ತಿಕ ವಿಚಾರ. ನನ್ನ ಅಮೂಲ್ಯ ವಸ್ತುಗಳನ್ನು ಗೌಪ್ಯ ಸ್ಥಳದಲ್ಲಿಡಲು ಬಾತ್  ರೂಂನಲ್ಲಿ ಲಾಕರ್ ಮಾಡಲಾಗಿತ್ತು. ಕಾನೂನು ಬದ್ಧವಾಗಿ  ವ್ಯವಹಾರ ನಡೆಸುತ್ತಿದ್ದು, ತನಿಖೆ ವೇಳೆ ಸಿಬಿಐ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ. ಎಲ್ಲಾ ದಾಖಲೆಗಳನ್ನು ಒದಗಿಸಿದ ಬಳಿಕ ತಮ್ಮ ವಿರುದ್ಧದ ಪ್ರಕರಣವನ್ನು ಕೈ ಬಿಡಲಾಗಿದೆ ಎಂದರು.

ಯಾವುದೇ ಉದ್ಯಮಿಗಳಿಗೆ ಜೈಲಿನಲ್ಲಿ ಇರುವಂತಹ ಸ್ಥಿತಿ ಬರಬಾರದು. ತಮ್ಮ ವಿರುದ್ಧ ಪ್ರಕರಣ ದಾಖಲಾದ ಬಳಿಕ ಸಾಕಷ್ಟು ನೋವು ಅನುಭವಿಸಿದ್ದೇನೆ. ಅತಿ ಕಡಿಮೆ ಅವಧಿಯಲ್ಲಿ ಪ್ರಕರಣ ಮುಕ್ತಾಯಗೊಂಡಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವೀರೇಂದ್ರ ಪರ ವಕೀಲ ಎಚ್.ಎಸ್. ಚಂದ್ರಮೌಳಿ ಮಾತನಾಡಿ, ಉದ್ಯಮಿ ಯಾಗಿರುವ ವೀರೇಂದ್ರ ಅವರ ವ್ಯವಹಾರಗಳು ಹೆಚ್ಚಾಗಿ ನಗದು ಮೂಲಕವೇ ನಡೆಯುತ್ತಿತ್ತು. ಇದೇ ವೇಳೆ ನೋಟು ಅಮಾನ್ಯೀಕರಣಗೊಂಡಿತು.

ಉದ್ಯಮಿ ಯಾಗಿರುವ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಅವರ ಹಣ ಯಾವ ಯಾವ ಬ್ಯಾಂಕ್‌ಗಳಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಕಲೆ ಹಾಕಲಾಯಿತು. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಸಿಬಿಐ ಬಿ ರಿಪೋರ್ಟ್ ಹಾಕಿದ್ದು, ವಶಪಡಿಸಿಕೊಂಡಿರುವ ನಗದು, ವಸ್ತುಗಳನ್ನು ಹಿಂತಿರುಗಿಸುವಂತೆ ನ್ಯಾಯಾಲಯದ ಆದೇಶಿಸಿದೆ ಎಂದರು .

Follow Us:
Download App:
  • android
  • ios