ಅತ್ಯಂತ ಕುತೂಹಲ ಕೆರಳಿಸಿದ್ದ ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣದ ಪ್ರಾಥಮಿಕ ಚಾರ್ಜ್'ಶೀಟ್ ಉಡುಪಿ ಕೋರ್ಟ್ಗೆ ಸಲ್ಲಿಸಲಾಗಿದೆ. ಈ ಚಾರ್ಜ್ ಶೀಟ್ ಹಲವು ಊಹಾಪೋಹಗಳಿಗೆ ತೆರೆ ಎಳೆದಿದೆ.
ಉಡುಪಿ(ನ. 03): ಹೋಮಕುಂಡಕ್ಕೆ ವ್ಯಕ್ತಿಯೊಬ್ಬನನ್ನ ಹಾಕಿ ಕೊಲ್ಲಲು ಸಾಧ್ಯವೇ? ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯಾದಾಗ ಎಲ್ಲರಿಗೂ ಈ ಸಂಶಯ ಕಾಡಿತ್ತು. ಈಗ ಸಿಐಡಿ ಪೊಲೀಸರು 1300 ಪುಟಗಳ ಚಾರ್ಜ್'ಶೀಟ್ ಸಲ್ಲಿಸಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಚಾರ್ಜ್'ಶೀಟ್ ಪ್ರಮುಖಾಂಶ
* ಕೊಲೆಗೆ ಅನೈತಿಕ ಸಂಬಂಧದ ಕಾರಣಕ್ಕೆ ಉಂಟಾದ ವೈಮನಸ್ಸೇ ಕಾರಣ
* ಮುಖಕ್ಕೆ ಪೆಪ್ಪರ್ ಸ್ಪ್ರೇ ಹಾಕಿ, ಕಬ್ಬಿಣದ ರಾಡ್'ನಿಂದ ಹೊಡೆಯಲಾಗಿದೆ
* ಮುಖಕ್ಕೆ ಹೊಡೆದ ಬಳಿಕ ಕೀಟನಾಶಕ ಕುಡಿಸಿ ಕೊಲ್ಲಲಾಗಿದೆ
* ನಿರಂಜನ ಭಟ್ಟನ ಯಾಗಶಾಲೆಯಲ್ಲಿ ಕಲ್ಲುಗಳಿಂದ ಹೋಮಕುಂಡ ತಯಾರಿ
* ಹೋಮಕುಂಡದಲ್ಲಿ ದೇಹವಿರಿಸಿ ತುಪ್ಪ, ಕರ್ಪೂರ, ಪೆಟ್ರೋಲ್ ಬಳಸಿ ಸುಡಲಾಗಿದೆ
* ಹೋಮಕುಂಡ ಸ್ಥಳದ ಟೈಲ್ಸ್ ಬದಲು, ಮೂಳೆಗಳ ಅವಶೇಷವನ್ನ ನದಿಗೆ ಎಸೆದಿದ್ದಾರೆ
* ಆರೋಪಿಗಳ ಮೇಲೆ 302, 201, 204, 120ಬಿ, ಐಪಿಸಿ 34 ಸೆಕ್ಷನ್'ಗಳಡಿ ಕೇಸ್ ದಾಖಲು ಮಾಡಲಾಗಿದೆ.
ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಗೆ ಅನೈತಿಕ ಸಂಬಂಧ ವಿಚಾರದಲ್ಲಿ ಉಂಟಾದ ವೈಮನಸ್ಸೇ ಕಾರಣ. ಭಾಸ್ಕರ ಶೆಟ್ಟಿ ಮುಖಕ್ಕೆ ಪೆಪ್ಪರ್ ಸ್ಟ್ರೇ ಮಾಡಿ ಕಬ್ಬಿಣದಿಂದ ಹೊಡೆಯಲಾಗಿದೆ. ಆಮೇಲೆ ಕೀಟನಾಶಕ ಸೇವಿಸಿ ಕೊಲ್ಲಲಾಗಿದೆ. ಆಮೇಲೆ ಆರೋಪಿ ನಿರಂಜನ ಭಟ್ಟನ ಯಾಗಶಾಲೆಯಲ್ಲಿ ಕಲ್ಲುಗಳಿಂದ ಹೋಮಕುಂಡ ತಯಾರು ಮಾಡಿ ಅದರಲ್ಲಿ ದೇಹವಿರಿಸಿ ತುಪ್ಪ, ಕರ್ಪೂರ ಹಾಗೂ ಪೆಟ್ರೋಲ್ ಬಳಸಿ ಸುಡಲಾಗಿದೆ. ಆಮೇಲೆ ಹೋಮಕುಂಡದ ಸ್ಥಳದ ಟೈಲ್ಸ್ ಬದಲು ಮಾಡಿ ಮೂಳೆಗಳ ಅವಶೇಷಗಳನ್ನ ನದಿಗೆ ಎಸೆಯಲಾಗಿದೆ. ಈ ಸಂಬಂಧ ಆರೋಪಿಗಳ ಮೇಲೆ 302, 201, 204, 120ಬಿ ಐಪಿಸಿ 34 ಸೆಕ್ಷನ್ಗಳನ್ನ ಹಾಕಲಾಗಿದೆ.
ಮೇಲ್ನೋಟಕ್ಕೆ ಯಾವ ರೀತಿ ಕೊಲೆ ನಡೆದಿದೆ ಅಂತ ಭಾವಿಸಲಾಗಿತ್ತೋ ಆ ಎಲ್ಲಾ ಊಹಾಪೋಹಗಳು ಪ್ರಾಥಮಿಕ ತನಿಖೆಯಲ್ಲಿ ನಿಜವಾಗಿದೆ. ಆದ್ರೆ ಮೂರು ಹೊಸ ಅಂಶಗಳು ಈ ಚಾರ್ಜ್'ಶೀಟ್ನಲ್ಲಿದೆ.
ಚಾರ್ಜ್'ಶೀಟ್'ನಲ್ಲಿರುವ ಹೊಸ ಅಂಶಗಳು:
* ಕೊಲೆ ನಡೆದ ವೇಳೆ ರಾಜೇಶ್ವರಿ, ನವನೀತ ಹಾಗೂ ನಿರಂಜನ ಭಟ್ಟ ಹಾಜರಿದ್ದ
* ಕಲ್ಕಾರು ಹೊಳೆಯಲ್ಲಿ ಸಿಕ್ಕಮೂಳೆಗಳು ಭಾಸ್ಕರ ಶೆಟ್ಟಿಯದ್ದೇ ಎಂದು ಸಾಬೀತು
* ಸುಡುವ ಮುನ್ನ ದೇಹವನ್ನು ಕಾರಿನ ಡಿಕ್ಕಿಯಲ್ಲಿ ತೆಗೆದುಕೊಂಡು ಹೋಗಲಾಗಿತ್ತು
* ಭಾಸ್ಕರ ಶೆಟ್ಟರನ್ನು ಜೀವಂತ ಸುಡಲಾಗಿತ್ತೇ ಎಂಬುದರ ಬಗ್ಗೆ ಸಂಶಯ
* ಚಾರ್ಜ್ಶೀಟ್ನಲ್ಲಿ ಮೃತದೇಹ ಎಂದು ಎಲ್ಲೂ ನಮೂದಾಗಿಲ್ಲ
ಚಾರ್ಜ್ಶೀಟ್ನಲ್ಲಿರೋ ಪ್ರಮುಖ ಅಂಶಗಳು ಅಂದ್ರೆ.. ಕೊಲೆ ನಡೆದ ಸ್ಥಳದಲ್ಲಿ ಪತ್ನಿ ರಾಜೇಶ್ವರಿ ಪುತ್ರ ನವನೀತ್ ಮಾತ್ರವಲ್ಲ.. ನಿರಂಜನ ಭಟ್ಟ ಕೂಡ ಹಾಜರಿದ್ದ. ಎರಡನೇ ಅಂಶ ಅಂದ್ರೆ. ಕಲ್ಕಾರು ಹೊಳೆಯಲ್ಲಿ ಸಿಕ್ಕ ಮೂಳೆಗಳು ಭಾಸ್ಕರ ಶೆಟ್ಟಿ ಅವರದ್ದೇ ಅಂತ DNA ವರದೀಲಿ ಸಾಬೀತಾಗಿದೆ. ಅದೇ ರೀತಿ 3ನೇ ಪ್ರಮುಖ ಆಂಶ ಅಂತಂದ್ರೆ.. ಸುಡುವ ಮುನ್ನ ದೇಹವನ್ನ ಕಾರಿನ ಡಿಕ್ಕೀಲಿ ತೆಗೆದುಕೊಂಡು ಹೋಗಲಾಗಿತ್ತು. ಆದ್ರೆ, ಭಾಸ್ಕರ ಶೆಟ್ಟಿ ಜೀವ ಹೋಗಿತ್ತೇ ಅನ್ನೋದ್ರ ಮಾಹಿತಿ ಇಲ್ಲ. ಎಲ್ಲಾ ಕಡೆ ದೇಹ ಅಂತ ಮಾತ್ರ ಉಲ್ಲೇಖವಾಗಿದೆ. ಎಲ್ಲೂ ಮೃತದೇಹ ಅಂತಿಲ್ಲ. ಹೀಗಾಗಿ ಜೀವಂತ ಸುಟ್ಟಿರಬಹುದು ಅಂತ ಹೇಳಲಾಗ್ತಿದೆ.
ಉಳಿದಂತೆ 1300 ಪುಟಗಳ ಚಾರ್ಜ್'ಶೀಟ್'ನಲ್ಲಿ ಒಟ್ಟು 80 ಮಂದಿಯ ಹೇಳಿಕೆ ಪಡೆಯಲಾಗಿದೆ. ಸೈಬರ್ ಫೋರೆನ್ಸಿಕ್ ರಿಪೋರ್ಟ್ ಇನ್ನಷ್ಟೇ ಬರಬೇಕು ಅಂತ ಸಿಐಡಿ ಪೊಲೀಸರು ತಿಳಿಸಿದ್ದಾರೆ. ಪ್ರಾರಂಭಿಕ ಚಾರ್ಜ್'ಶೀಟ್ ಗಮನಿಸಿದರೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಅಂತಿಮ ಚಾರ್ಜ್'ಶೀಟ್ ಸಲ್ಲಿಕೆಯಾದ ನಂತರ ಸ್ಪಷ್ಟ ಚಿತ್ರಣ ಸಿಗಬೇಕಾಗಿದೆ.
- ಶಶಿಧರ್ ಮಾಸ್ತಿಬೈಲು, ಉಡುಪಿ
