ಏರ್ಟೆಲ್ ಕಂಪನಿಯ ಮಾಲೀಕ ಸುನೀಲ್ ಮಿತ್ತಲ್ ಕೂಡ ಸಮಾಜ ಸೇವೆಗೆ ಮುಂದಾಗಿದ್ದಾರೆ. ಭಾರ್ತಿ ಏರ್ಟೆಲ್ ಕಂಪನಿಯ ಶೇ.10ರಷ್ಟು ಸಂಪತ್ತು ಅಂದರೆ 7000 ಕೋಟಿ ರು.ಗಳನ್ನು ಸಮಾಜ ಸೇವೆಗೆ ವಿನಿಯೋಗಿಸುವುದಾಗಿ ಪ್ರಕಟಿಸಿದ್ದಾರೆ.

ನವದೆಹಲಿ(ನ.23): ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕ, ಕನ್ನಡಿಗ ನಂದನ್ ನಿಲೇಕಣಿ ಅವರು ತಮ್ಮ ಸಂಪತ್ತಿನ ಪೈಕಿ ಅರ್ಧದಷ್ಟನ್ನು (5500 ಕೋಟಿ ರು.) ಸಮಾಜ ಸೇವೆಗೆ ದಾನ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ, ಏರ್ಟೆಲ್ ಕಂಪನಿಯ ಮಾಲೀಕ ಸುನೀಲ್ ಮಿತ್ತಲ್ ಕೂಡ ಸಮಾಜ ಸೇವೆಗೆ ಮುಂದಾಗಿದ್ದಾರೆ. ಭಾರ್ತಿ ಏರ್ಟೆಲ್ ಕಂಪನಿಯ ಶೇ.10ರಷ್ಟು ಸಂಪತ್ತು ಅಂದರೆ 7000 ಕೋಟಿ ರು.ಗಳನ್ನು ಸಮಾಜ ಸೇವೆಗೆ ವಿನಿಯೋಗಿಸುವುದಾಗಿ ಪ್ರಕಟಿಸಿದ್ದಾರೆ.
ಈ ಪೈಕಿ ಸುನೀಲ್ ಮಿತ್ತಲ್ ಕುಟುಂಬ ಭಾರ್ತಿ ಏರ್ಟೆಲ್ ಕಂಪನಿಯಲ್ಲಿ ಹೊಂದಿರುವ ಶೇ.3ರಷ್ಟು ಷೇರುಗಳೂ ಸೇರಿವೆ. ಕಂಪನಿಯ ಸಮಾಜಸೇವಾ ಸಂಸ್ಥೆಯಾಗಿರುವ ಭಾರ್ತಿ ಪ್ರತಿಷ್ಠಾನದ ಮೂಲಕ ಈ ಹಣವನ್ನು ಸಮಾಜ ಸೇವೆಗೆ ಸದ್ವಿನಿಯೋಗ ಮಾಡಲು ನಿರ್ಧರಿಸಲಾಗಿದೆ. ಆರ್ಥಿಕವಾಗಿ ದುರ್ಬಲವಾಗಿರುವ, ಅವಕಾಶ ವಂಚಿತ ಯುವಕರಿಗೆ ಉಚಿತ ಶಿಕ್ಷಣ ನೀಡಲು ಸತ್ಯ ಭಾರತಿ ವಿಶ್ವ ವಿದ್ಯಾಲಯವನ್ನು ಭಾರ್ತಿ - ಫೌಂಡೇಷನ್ ಸ್ಥಾಪಿಸಲಿದೆ. ಕಂಪನಿ ದಾನ ಮಾಡುವ ಬಹುಪಾಲು ಹಣ ವಿಶ್ವವಿದ್ಯಾಲಯ ಯೋಜನೆಗೆ ಬಳಕೆಯಾಗಲಿದೆ.

ಉತ್ತರ ಭಾರತದಲ್ಲಿ ಈ ವಿಶ್ವವಿದ್ಯಾಲಯ ಆರಂಭವಾಗಲಿದ್ದು, ಭೂಮಿ ಅಂತಿಮಗೊಳಿಸುವ ಮಾತುಕತೆ ಪ್ರಗತಿಯಲ್ಲಿದೆ. 2021ರಿಂದ ರಂಭವಾಗಲಿರುವ ವಿಶ್ವವಿದ್ಯಾಲಯದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶವಿದೆ.