ಬೆಂಗಳೂರು: 111 ವರ್ಷದ ತ್ರಿವಿಧ ದಾಸೋಹಿ, ಆಧುನಿಕ ಬಸವಣ್ಣ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾಗಿದ್ದಾರೆ. ವಿವಿಧ ರೂಪಗಳಲ್ಲಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿರುವ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬ ಆಗ್ರಹ ಎಲ್ಲೆಡೆಯಿಂದ ಕೇಳಿ ಬಂದಿತ್ತು.

ಆದರೆ, ಈ ವರ್ಷವೂ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಸಿಗಲಿಲ್ಲ. ಈ ಬಗ್ಗೆ ವಿವಿಧೆಡೆಯಿಂದ ಪರ, ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಗೌರವ ತಪ್ಪಿದ್ದಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಕೆಸರೆರಚಾಟವೂ ಮುಂದುವರಿದಿದೆ. 

ಈ ಎಲ್ಲ ಆರೋಪ, ಪ್ರತ್ಯಾರೋಪಗಳ ನಡುವೆಯೇ ಶ್ರೀಗಳಿಗೆ ಭಾರತ ರತ್ನ ನೀಡುವ ಸಂಬಂಧ ಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಹೊಸದೊಂದು ಆಶಯವನ್ನು ವ್ಯಕ್ತಪಡಿಸಿದ್ದಾರೆ.

'ಒಂದು ಸಮಿತಿಯಿಂದ ಪ್ರಶಸ್ತಿಗೆ ಅರ್ಹರನ್ನ ಆಯ್ಕೆ ಮಾಡಿದ ನಂತರ ಸರ್ಕಾರ ಆ ಪ್ರಶಸ್ತಿ ಘೋಷಿಸುವುದು ಪರಂಪರೆ.  ನಂತರ ಆ ಪ್ರಶಸ್ತಿ ಪಡೆದವರ ಬಗ್ಗೆ ಮತ್ತು ಪ್ರಕ್ರಿಯೆ ಬಗ್ಗೆ ಮಾತನಾಡುವುದು ಚರ್ಚೆಗೆ ಯೋಗ್ಯವಲ್ಲದ ಮಾತು. ಈ ಹಿನ್ನಲೆಯಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರ ಹೋಲಿಕೆಗೆ ಮೀರಿದ ವ್ಯಕ್ತಿತ್ವ ನಮ್ಮ ಶ್ರೀಗಳು. 

ಏಪ್ರಿಲ್ ಒಂದನೇ ತಾರೀಖು ಶ್ರೀಗಳ ಹುಟ್ಟು ಹಬ್ಬದ ಪ್ರಯುಕ್ತ  ಅವರ ನೆನಪಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಿ ಎಂದು ಒತ್ತಾಯಿಸೋಣ. ಆಗ ಮಾತ್ರ ಈಗ ಆಗಿರುವ ಅನಾಹುತ ತಪ್ಪಿಸಲು ಸಾಧ್ಯ,' ಎಂದು ಕರ್ನಾಟಕದ ರತ್ನರಿಗೆ ಭಾರತ ರತ್ನ ನೀಡಲು ಲಿಂಗದೇವರು ಅವರು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರ ಈ ಮನವಿಯನ್ನು ಪುರಸ್ಕರಿಸಿ, ಕನ್ನಡಿಗರ ಆಶಯವನ್ನು ಈಡೇರಿಸುತ್ತಾ ಎಂಬುದನ್ನು ಕಾದು ನೋಡಬೇಕು.

ಭಾರತ ರತ್ನ ಯಕ್ಕಡಕ್ಕೆ ಸಮ