ಬೆಂಗಳೂರು :  ರಾಜಧಾನಿ ಬೆಂಗಳೂರು ನಗರದ ಸರ್ಕಾರಿ ಶಾಲಾ ಕಾಲೇಜುಗಳು ಬುಧವಾರ ಎಂದಿನಂತೆಯೇ ಕಾರ್ಯ ನಿರ್ವಹಿಸಲಿವೆ. ಪೂರ್ವ ನಿಗದಿಯಂತೆ ಭಾಗಶಃ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಕೆಲವು ಶಾಲೆಗಳು ಮಾತ್ರ ಕಾರ್ಯ ನಿರ್ವಹಿಸಲಿವೆ.

ಬಂದ್‌ ಹಿನ್ನೆಲೆಯಲ್ಲಿ ರಜೆ ಘೋಷಿಸಿರುವುದು ಅಧಿಕೃತ ರಜೆಯಲ್ಲವಾದ್ದರಿಂದ ಬುಧವಾರ ಸರ್ಕಾರಿ ಶಾಲಾ ಕಾಲೇಜುಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಲಿವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್‌ ತಿಳಿಸಿದ್ದಾರೆ.

ಇನ್ನು ಖಾಸಗಿ ಶಾಲಾ ಕಾಲೇಜುಗಳು ಈಗಾಗಲೇ ಎರಡು ದಿನ ರಜೆ ಘೋಷಿಸಿವೆ. ಈ ಎರಡು ದಿನಗಳನ್ನು ಸರಿದೂಗಿಸಲು ಮುಂದಿನ ಎರಡು ಶನಿವಾರ ಸಂಜೆಯವರೆಗೂ ಬೋಧನೆ ಮಾಡುವುದಾಗಿ ಈಗಾಗಲೇ ತಿಳಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಮಾತ್ರ ರಜೆ ಘೋಷಿಸಿದ್ದ ಕೆಲವು ಶಾಲೆಗಳು ಬುಧವಾರ ಕಾರ್ಯ ನಿರ್ವಹಿಸಲು ನಿರ್ಧರಿಸಿವೆ. ಮಂಗಳವಾರ ಸಂಜೆ ಪೋಷಕರ ಮೊಬೈಲ್‌ಗಳಿಗೆ ಎಸ್‌ಎಂಎಸ್‌ ಕಳುಹಿಸುವ ಮೂಲಕ ಮಾಹಿತಿ ನೀಡಲಿದ್ದೇವೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ತಿಳಿಸಿದ್ದಾರೆ.