ದ್ವಿತೀಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಬಿಎಫ್‌ಸಿ 2 ಬಾರಿ ಎದುರಾಳಿಯ ರಕ್ಷಣಾಪಡೆಯನ್ನು ವಂಚಿಸುವಲ್ಲಿ ಯಶಸ್ವಿಯಾಯಿತು. 51ನೇ ನಿಮಿಷದಲ್ಲಿ ಉದಾಂತ ಸಿಂಗ್ 2ನೇ ಗೋಲು ಬಾರಿಸಿದರು. 78ನೇ ನಿಮಿಷದಲ್ಲಿ ಲೆನ್ನಿ ರೊಡ್ರಿಗಾಸ್ ತಂಡಕ್ಕೆ 3ನೇ ಗೋಲು ತಂದುಕೊಟ್ಟರು.

ಬೆಂಗಳೂರು(ಆ.23): ಎಎಫ್‌ಸಿ ಕಪ್ ಅಂತರ ವಲಯ ಸೆಮಿಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡ ಉತ್ತರ ಕೊರಿಯಾದ ಏಪ್ರಿಲ್ 25 ತಂಡದ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಸೆಮೀಸ್‌ನ ಮೊದಲ ಚರಣದಲ್ಲಿ ಗೆಲ್ಲುವ ಮೂಲಕ ಮುನ್ನಡೆ ಪಡೆದಿದ್ದು, ಸೆ.13ರಂದು ಪ್ಯೊಂಗ್‌ಯಾಂಗ್‌ನಲ್ಲಿ ಮತ್ತೊಂದು ಸುತ್ತಿನ ಸೆಣಸಾಟ ನಡೆಸಲಿದೆ.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಪರ ನಾಯಕ ಸುನಿಲ್ ಚೆಟ್ರಿ 33ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿ ಖಾತೆ ತೆರೆದರು. ಮೊದಲಾರ್ಧದ ಮುಕ್ತಾಯಕ್ಕೆ ತಂಡ 1-0 ಮುನ್ನಡೆ ಪಡೆದುಕೊಂಡಿತು.

ದ್ವಿತೀಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಬಿಎಫ್‌ಸಿ 2 ಬಾರಿ ಎದುರಾಳಿಯ ರಕ್ಷಣಾಪಡೆಯನ್ನು ವಂಚಿಸುವಲ್ಲಿ ಯಶಸ್ವಿಯಾಯಿತು. 51ನೇ ನಿಮಿಷದಲ್ಲಿ ಉದಾಂತ ಸಿಂಗ್ 2ನೇ ಗೋಲು ಬಾರಿಸಿದರು. 78ನೇ ನಿಮಿಷದಲ್ಲಿ ಲೆನ್ನಿ ರೊಡ್ರಿಗಾಸ್ ತಂಡಕ್ಕೆ 3ನೇ ಗೋಲು ತಂದುಕೊಟ್ಟರು.

ಕಳೆದ ವಾರವಷ್ಟೇ ಬಿಎಫ್‌ಸಿ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡ ಭಾರತ ತಂಡದ ಗೋಲ್‌ಕೀಪರ್ ಗುರ್‌ಪ್ರೀತ್ ಸಂಧು ಆಕರ್ಷಕ ಪ್ರದರ್ಶನ ತೋರಿದರು. ಎದುರಾಳಿ ತಂಡ ಗೋಲು ಗಳಿಸಲು ಎಷ್ಟೇ ಪ್ರಯತ್ನಿಸಿದರೂ ಗುರ್‌ಪ್ರೀತ್ ಭದ್ರಕೋಟೆಯನ್ನು ದಾಟಲು ಸಾಧ್ಯವಾಗಲಿಲ್ಲ.

ಭಾರೀ ಮಳೆಯ ನಡುವೆಯೂ ಬಿಎಫ್‌ಸಿ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಎದುರಾಳಿ ಪಡೆಗೆ ಅಚ್ಚರಿ ಮೂಡಿಸಿತು. ಭಾರೀ ಸಂಖ್ಯೆಯ ಅಭಿಮಾನಿಗಳ ಬಲವೂ ತವರು ತಂಡಕ್ಕೆ ದೊರೆಯಿತು. ಈ ಗೆಲುವಿನಿಂದಿಗೆ ಕಂಠೀರವದಲ್ಲಿ ಬಿಎಫ್‌ಸಿ ಅಜೇಯ ಓಟ ಮುಂದುವರಿಸಿದೆ.

(ಸಾಂಧರ್ಭಿಕ )