ರಾಜಧಾನಿಯಲ್ಲಿ ಇನ್ನು ಎರಡು ದಿನಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು (ಸೆ.09): ರಾಜಧಾನಿಯಲ್ಲಿ ಇನ್ನು ಎರಡು ದಿನಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್'ಮೆಂಟ್ ನಿವಾಸಿಗಳಿಗೆ ಬೆಸ್ಕಾಂ ಎಚ್ಚರಿಕೆ ನೀಡಿದೆ. ಮಳೆಯಿಂದ ಪ್ರವಾಹ ಪೀಡಿತವಾಗುವ ಪ್ರದೇಶಗಳಲ್ಲಿ ಸಂಭವಿಸಬಹುದಾದ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಬೆಸ್ಕಾಂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಪಾರ್ಟ್'ಮೆಂಟ್ ಗಳ ನೆಲಮಾಳಿಗೆಗಳಲ್ಲಿ ವಿದ್ಯುತ್ ಮೀಟರ್, ಟ್ರಾನ್ಸ್ ಫಾರ್ಮರ್'ಗಳಿದ್ದರೆ ಆರು ತಿಂಗಳೊಳಗೆ ಬೇರೆಡೆಗೆ ಸ್ಥಳಾಂತರಿಸಬೇಕು ಇಲ್ಲದಿದ್ದರೆ ಸಂಪರ್ಕವನ್ನು ಅಕ್ರಮ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ನೆಲಮಹಡಿಯಲ್ಲಿರುವ ವಿದ್ಯುತ್ ಮೀಟರ್ ಗಳ ಸ್ಥಳಾಂತರಕ್ಕೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು ಕೂಡಾ ಕರೆ ನೀಡಿದ್ದಾರೆ. ನಗರದ ತಗ್ಗುಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ಅಪಾರ್ಟ್'ಮೆಂಟ್'ಗಳಲ್ಲಿ ನೀರು ನುಗ್ಗುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಬೇಸ್ ಮೆಂಟ್'ಗಳಲ್ಲಿ ಮೀಟರ್ ಅಳವಡಿಸುವಂತಿಲ್ಲ. ನೆಲ ಮಾಳಿಗೆಯಲ್ಲಿ ವಿದ್ಯುತ್ ಮೀಟರ್, ಟ್ರಾನ್ಸ್ ಫಾರ್ಮರ್ ಹೊಂದಿರುವ ವಸತಿ ಸಮುಚ್ಚಯಗಳನ್ನು ಗುರುತಿಸಿ ನೋಟಿಸ್ ಜಾರಿಗೊಳಿಸಲಾಗುವುದು. ಎಲ್ಲೆಲ್ಲಿ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಬಹುದು ಎಂಬುದರ ಬಗ್ಗೆ ನಿವಾಸಿಗಳಿಗೆ ಬೆಸ್ಕಾಂ ಅಧಿಕಾರಿಗಳು ನೆರವು ನೀಡಲಿದ್ದಾರೆ. ಬೆಸ್ಕಾಂ ಸಹಾಯವಾಣಿಗಾಗಿ 1912 ಗೆ ಕರೆ ಮಾಡಬಹುದಾಗಿದೆ.
