ಬೆಂಗಳೂರು :  ಪ್ರತ್ಯೇಕ ಪ್ರಕರಣಗಳಲ್ಲಿ ಪೀಣ್ಯ ಮತ್ತು ಯಲಹಂಕದಲ್ಲಿ ದುಷ್ಕರ್ಮಿಗಳು ಇಬ್ಬರು ಮಹಿಳೆಯರ ಚಿನ್ನದ ಸರ ಕಸಿದು ಪರಾರಿಯಾಗಿರುವ ಪ್ರಕರಣ ನಡೆದಿದೆ.

ಅಪರಿಚಿತ ದುಷ್ಕರ್ಮಿಯೊಬ್ಬ ನೀರು ಕೇಳುವ ನೆಪದಲ್ಲಿ ಬಂದು ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ದೊಡ್ಡ ಬಿದರುಕಲ್ಲಿನಲ್ಲಿ ನಡೆದಿದೆ.

ದೊಡ್ಡಬಿದರುಕಲ್ಲು ನಿವಾಸಿ ಗಾಯತ್ರಿ 30 ಗ್ರಾಂ ಸರ ಕಳೆದುಕೊಂಡವರು. ಗಾಯತ್ರಿ ಅವರು ದೊಡ್ಡಬಿದರುಕಲ್ಲುವಿನಲ್ಲಿರುವ ತಮ್ಮ ಜ್ಯೂಸ್‌ ಅಂಗಡಿಯಲ್ಲಿ ಸೋಮವಾರ ಬೆಳಗಿನ ಜಾವ 5.50ರ ಸುಮಾರಿಗೆ ಶುಚಿಗೊಳಿಸುತ್ತಿದ್ದರು. ದುಷ್ಕರ್ಮಿ ಕುಡಿಯಲು ನೀರು ಕೊಡುವಂತೆ ಮಹಿಳೆಯನ್ನು ಕೇಳಿದ್ದ. 

ಗಾಯತ್ರಿ ಅವರು ನೀರು ತರಲು ಅಂಗಡಿ ಒಳಗೆ ಪ್ರವೇಶಿಸುತ್ತಿದ್ದಂತೆ ದುಷ್ಕರ್ಮಿ ಹಿಂದಿನಿಂದ ಸರ ಕಸಿದು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮಹಿಳೆ ಚೀರಾಡುವಷ್ಟರಲ್ಲಿ ಸ್ಥಳದಿಂದ ಪರಾರಿಯಾಗಿದ್ದ. ದುಷ್ಕರ್ಮಿ ಕನ್ನಡ ಮಾತನಾಡುತ್ತಿದ್ದು, ಜ್ಯೂಸ್‌ ಮಳಿಗೆಯ ಸಮೀಪದಲ್ಲೇ ಬೈಕ್‌ ನಿಲುಗಡೆ ಮಾಡಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಕ್‌ನಲ್ಲಿ ಬಂದು ಸರ ಕಿತ್ತರು:

ಮತ್ತೊಂದು ಘಟನೆಯಲ್ಲಿ ಯಲಹಂಕ ಬಳಿಯ ಮಾರುತಿನಗರದಲ್ಲಿ ಬೆಳಿಗ್ಗೆ 5.20 ಗಂಟೆಗೆ ರತ್ನಮ್ಮ ಎಂಬುವರ 40 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಲಾಗಿದೆ. ಎರಡೂ ಕಡೆಯೂ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.