ಮೆಟ್ರೊ ನಗರಿಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಅನಿರೀಕ್ಷಿತ ದಾಖಲೆ ಮಳೆಗೆ ಜನರು ಕಂಗಾಲಾಗಿದ್ದು, ನಗರದ ವಿವಿಧ ಏರಿಯಾಗಳು ಜಲಾವೃತಗೊಳ್ಳುತ್ತಿವೆ. ಹೀಗಾಗಿ ಕೊನೆಗೂ ಎಚ್ಚೆತ್ತುಕೊಂಡಿರುವ ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮುಂದೆ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಬೆಂಗಳೂರು (ಸೆ.03): ಮೆಟ್ರೊ ನಗರಿಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಅನಿರೀಕ್ಷಿತ ದಾಖಲೆ ಮಳೆಗೆ ಜನರು ಕಂಗಾಲಾಗಿದ್ದು, ನಗರದ ವಿವಿಧ ಏರಿಯಾಗಳು ಜಲಾವೃತಗೊಳ್ಳುತ್ತಿವೆ. ಹೀಗಾಗಿ ಕೊನೆಗೂ ಎಚ್ಚೆತ್ತುಕೊಂಡಿರುವ ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮುಂದೆ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಿಲಿಕಾನ್ ಸಿಟಿಯಲ್ಲಿ, ವರುಣನ ಆರ್ಭಟ ಮುಂದುವರಿದಿದೆ. ಮಳೆಗೆ ಮೆಟ್ರೊ ಮಂದಿ ತತ್ತರಿಸಿ ಹೋಗಿದ್ದಾರೆ. ಜನರು ಕ್ರಮ ತೆಗೆದುಕೊಳ್ಳಲು ವಿಫಲವಾದ ಬಿಬಿಎಂಪಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಜೊತೆಗೆ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆಯಿರುವ ಹಿನ್ನೆಲೆ, ಮುಂದೆ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಲು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಸುದ್ದಿಗೋಷ್ಠಿ ನಡೆಸಿದರು. ಲಿ ಆಸ್ಗರ್ ರಸ್ತೆಯ ಬಿಆರ್ ಡಿಎ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರಿಗೆ ಮೇಯರ್ ಜಿ ಪದ್ಮಾವತಿ, ಮತ್ತು ಆಯುಕ್ತ ಮುಂಜುನಾಥ್ ಪ್ರಸಾದ್ ಸಾಥ್ ನೀಡಿದರು. ಈ ವೇಳೆ ಸಚಿವ ಜಾರ್ಜ್ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ದಾಖಲೆಯ ಮಳೆಯಾಗಿದೆ. ಹೀಗಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಕಂಗಾಲಾಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು. ಜೊತೆಗೆ ಸದ್ಯ ಅಲ್ಪಾವಧಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಮಳೆ ಹಾನಿಯನ್ನು ಕಡಿಮೆಗೊಳಿಸುವುದಾಗಿ ತಿಳಿಸಿದರು.
ಇನ್ನು ಹೆಚ್'ಎಸ್'ಆರ್ ಲೇಔಟ್ ನಲ್ಲಿ ಹೆಚ್ಚಿನ ಮಳೆ ಹಾನಿಯಾಗಿದೆ. ಹೀಗಾಗಿ ಈ ಮಳೆಯ ನೀರನ್ನು ಡೈವರ್ಟ್ ಮಾಡಲು 300 ಕೋಟಿ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಈ ವಿಚಾರವನ್ನು ಕ್ಯಾಬಿನೆಟ್ ಮುಂದೆ ತಂದು ಚರ್ಚಿಸಿ ಕಾಮಗಾರಿ ಆರಂಭಿಸಲಾಗುವುದು ಎಂದಿದ್ದಾರೆ. ಜೆ.ಸಿ ರಸ್ತೆ, ಶಿವಾನಂದ ಸರ್ಕಲ್ ಅಂಡರ್ ಪಾಸ್, ಕಿನೋ ಥಿಯೇಟರ್ ಅಂಡರ್ ಪಾಸ್, ಕೋರಮಂಗಲ, ಶಾಂತಿನಗರ ಬಸ್ ಡಿಪೋ, ಕೆ.ಆರ್ ಪುರ ಹೀಗೆ ಹೆಚ್ಚಿನ ಮಟ್ಟದಲ್ಲಿ ಮಳೆ ಹಾನಿಯಾಗುವ ಪ್ರದೇಶಗಳಲ್ಲಿ ಆದಷ್ಟು ತ್ವರಿತಗತಿಯಲ್ಲಿ ಕೆಲಸ ಮುಗಿಸುವ ಭರವಸೆ ನೀಡಿದರು. ಜೊತೆಗೆ 800 ಕೋಟಿ ರೂಪಾಯಿಯ ಧೀರ್ಘಾವಧಿ ಯೋಜನೆಗಳನ್ನು ಕೈಗೊಂಡಿದ್ದು, ಮುಂದಿನ ಮಳೆಗಾಲದಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಸರ್ವೆ ಮಾಡಿ ಅವರಿಗೂ ಪರಿಹಾರ ನೀಡುವ ಭರವಸೆ ನೀಡಿದರು. ಇದೇ ವೇಳೆ ರಾಜಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಲ್ಲದೇ, ಸದ್ಯದಲ್ಲೆ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವ ಸುಳಿವನ್ನು ನೀಡಿದರು. ಒಟ್ಟಾರೆ ಮಳೆ ಹೆಚ್ಚಾದ ಹಿನ್ನೆಲೆ ಕೊನೆಗೂ ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆ ಎಚ್ಚೆತ್ತುಕೊಂಡಿದ್ದು ಜನ್ರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.
