ಬೆಂಗಳೂರು: ಮೆಟ್ರೋ ಹಂತ 2ರಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೆಳಹಂತದ ಮೆಟ್ರೋ ನಿಲ್ದಾಣ (ಸುರಂಗ ಮಾರ್ಗದಲ್ಲಿ ನಿರ್ಮಾಗೊಳ್ಳಲಿರುವ ನಿಲ್ದಾಣಗಳು )ಗಳ ಉದ್ದವು, ಜಾಗದ ಕೊರತೆಯಿಂದ ಮೊದಲ ಹಂತದಲ್ಲಿ ನಿರ್ಮಾಣಗೊಂಡ ಅಂಡರ್‌ಗ್ರೌಂಡ್‌ ಸ್ಟೇಷನ್‌ಗಳಿಗಿಂತ ಚಿಕ್ಕದಾಗಿ ಇರಲಿವೆ. ಆದರೆ ಪ್ರಯಾಣಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನಿರ್ಮಾಣಗೊಳ್ಳಲಿವೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ಮಾಹಿತಿ ನೀಡಿವೆ.

ಮೆಟ್ರೋ 2ನೇ ಹಂತವು ಸುಮಾರು 72.1 ಕಿ.ಮೀ ಉದ್ದವನ್ನು ಒಳಗೊಂಡಿದೆ. ಬಂಬೂ ಬಜಾರ್‌, ಪೋಟ್ರಿ ರಸ್ತೆ, ಶಿವಾಜಿನಗರ, ಎಂ.ಜಿ.ರಸ್ತೆ, ವೆಲ್ಲಾರ್‌ ಜಂಕ್ಷನ್‌, ಡೈರಿ ವೃತ್ತ, ಮೈಕೋ ಲೇಔಟ್‌, ಲ್ಯಾಂಡ್‌ಫೋರ್ಡ್‌ ಜಂಕ್ಷನ್‌, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್‌ ಕಾಲೇಜ್‌ ಮತ್ತು ನಾಗವಾರದ ಮೆಟ್ರೋ ಮಾರ್ಗದಲ್ಲಿ ಒಟ್ಟು 12 ಕೆಳಹಂತದ ಮೆಟ್ರೋ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಈ ನಿಲ್ದಾಣಗಳನ್ನು ಮೊದಲ ಹಂತದ ಯೋಜನೆಯಲ್ಲಿ ನಿರ್ಮಾಣ ಮಾಡಲಾದ ಅಂಡರ್‌ಗ್ರೌಂಡ್‌ ನಿಲ್ದಾಣಗಳ ಅಳತೆಗಿಂತ ಕಡಿಮೆ ಇರಲಿದೆ ಎನ್ನಲಾಗಿದ್ದು, ಸುಮಾರು 210 ಮೀಟರ್‌ ಉದ್ದ, 24 ಮೀಟರ್‌ ಅಗಲದಲ್ಲಿ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ನಿರ್ಮಾಣವಾಗಿರುವ ಐದು ಕೆಳಹಂತದ ಮೆಟ್ರೋ ನಿಲ್ದಾಣಗಳಾದ ಕೆಂಪೇಗೌಡ ಮೆಟ್ರೋ ನಿಲ್ದಾಣ(ಮೆಜೆಸ್ಟಿಕ್‌), ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಸರ್‌ ಎಂ ವಿಶ್ವೇಶ್ವರಯ್ಯ ನಿಲ್ದಾಣ, ಡಾ.ಬಿ.ಆರ್‌.ಅಂಬೇಡ್ಕರ್‌ ನಿಲ್ದಾಣ (ವಿಧಾನಸೌಧ) ಮತ್ತು ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣಗಳು 272 ಮೀಟರ್‌ ಉದ್ದ ಮತ್ತು 24 ಮೀಟರ್‌ ಅಗಲದ ಅಳತೆಯಲ್ಲಿ ನಿರ್ಮಾಣ ಮಾಡಲಾಗಿದೆ. ಆದಾಗ್ಯೂ ಚಿಕ್ಕಪೇಟೆ, ಕೆ.ಆರ್‌.ಮಾರುಕಟ್ಟೆಮೆಟ್ರೋ ನಿಲ್ದಾಣಗಳು 240 ಮೀಟರ್‌ ಉದ್ದ ಮತ್ತು 24 ಮೀಟರ್‌ ಅಗಲದ ಅಳತೆಯಲ್ಲಿಯೇ ನಿರ್ಮಾಣ ಮಾಡಲಾಗಿದೆ. ಇದರಿಂದ ಮೆಟೋ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.

2ನೇ ಹಂತದ ಮೆಟ್ರೋ ನಿಲ್ದಾಣಗಳಲ್ಲಿ ವಿಸ್ತಾರವಾದ ಜಾಗವು ಕಾಣಲು ಸಿಗುವುದಿಲ್ಲ. ಮೊದಲ ಹಂತದ ನಿಲ್ದಾಣಗಳಲ್ಲಿ ಮೇಲೆ ನಿಂತರೆ ಕೆಳಗೆ ಲಭ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಸುಲಭವಾಗಿ ಕಾಣಬಹುದಿತ್ತು. ಜತೆಗೆ ವಿಸ್ತಾರವಾದ ಜಾಗವು ಇತ್ತು. 2ನೇ ಹಂತದ ಕೆಳಹಂತದ ನಿಲ್ದಾಣಗಳಲ್ಲಿ ಅವು ಕಾಣಲು ಸಿಗುವುದಿಲ್ಲ. ಆದರೆ ಎಲ್ಲ ರೀತಿಯ ಸೌಕರ್ಯಗಳು ಲಭ್ಯವಿರುವಂತೆ ವ್ಯವಸ್ಥೆಯನ್ನು ಇತರ ಕಡೆಗಳಿಗೆ ವರ್ಗಾಯಿಸಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದ ಮೆಟ್ರೋ ಕಾಮಗಾರಿಯಲ್ಲಿ ಕೆಳಹಂತದ ಮೆಟ್ರೋ ನಿಲ್ದಾಣಗಳು ಹೆಚ್ಚಾಗಿ ಸರ್ಕಾರಿ ಜಾಗದಲ್ಲೇ ಆಗಿದ್ದು, ವಿಸ್ತಾರವಾಗಿವೆ. ಆದರೆ 2ನೇ ಹಂತದ ಮೆಟ್ರೋ ಯೋಜನೆಯಲ್ಲಿ ಬಹುತೇಕ ಜಾಗವು ಖಾಸಗಿಯದ್ದಾಗಿದೆ. ಮತ್ತೊಂದು ಮುಖ್ಯ ಉದ್ದೇಶವೆಂದರೆ 2ನೇ ಹಂತದ ನಿಲ್ದಾಣಗಳಲ್ಲಿ ಕೇವಲ ಎರಡು ಪ್ರವೇಶ ದ್ವಾರಗಳು ಮಾತ್ರ ಇರಲಿವೆ. ಈ ಎರಡು ದ್ವಾರಗಳಿಂದ ಪ್ರಯಾಣಿಕರ ದಟ್ಟಣೆಯನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ. ಕೆಲವು ದ್ವಾರಗಳನ್ನು ಪ್ರಯಾಣಿಕರ ಅಸಹಕಾರದಿಂದ ಮುಚ್ಚುವಂತಾಗಿದ್ದು, ಎಂ.ಜಿ.ರಸ್ತೆಯಲ್ಲಿ ಮಾತ್ರ ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಲು ಯೋಚಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಹಂತದ ಯೋಜನೆಯಲ್ಲಿ ಸುರಂಗ ಮಾರ್ಗದಲ್ಲಿ ನಿರ್ಮಾಣವಾದ ನಿಲ್ದಾಣಗಳಲ್ಲಿ ಅನಾವಶ್ಯಕವಾಗಿ ಜಾಗ ಬಳಕೆ ಮಾಡಲಾಗಿದೆ. ವಿಸ್ತಾರವಾದ ನಿಲ್ದಾಣಗಳ ನಿರ್ಮಾಣದಿಂದ ಕೋಟ್ಯಂತರ ರು.ಗಳು ನಷ್ಟವಾಗಿದೆ. ಅಲ್ಲದೇ ಕೇವಲ 6 ಬೋಗಿಯ ಮೆಟ್ರೋ ರೈಲು ನಿಲುಗಡೆಗೆ ಅನುಕೂಲವಾಗುವಷ್ಟುಮಾತ್ರ ನಿಲ್ದಾಣ ನಿರ್ಮಿಸಲು 2ನೇ ಹಂತದಲ್ಲಿ ನಿಗಮ ತೀರ್ಮಾನಿಸಿದೆ ಎಂಬ ಮಾಹಿತಿ ಇದೆ.

-ಸೂರ್ಯನಾರಾಯಣಮೂರ್ತಿ, ಉಪಾಧ್ಯಕ್ಷ, ಬಿಎಂಆರ್‌ಸಿಎಲ್‌ ಎಂಪ್ಲಾಯೀಸ್‌ ಯೂನಿಯನ್‌.