ಬೆಂಗಳೂರು(ಸೆ. 14): ಕಳೆದ ಎರಡು ದಿನಗಳಿಂದ ಕಾವೇರಿ ಕಿಚ್ಚಿಗೆ ಸಿಕ್ಕು ‘ಬೆಂದ’ಕಾಳೂರಾಗಿದ್ದ ನಗರ ಬುಧವಾರ ಶಾಂತಗೊಂಡಿದೆ. ಇಲ್ಲಿಯ ಜನಜೀವನ ಬಹುತೇಕ ಸಹಜಸ್ಥಿತಿಗೆ ಬಂದಿದೆ. ಬಹುತೇಕ ಅಂಗಡಿ-ಮುಂಗಟ್ಟುಗಳು, ಮಾರುಕಟ್ಟೆ ಬಾಗಿಲು ತೆರೆದಿವೆ. ಅನೇಕ ಕಡೆ ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತಿವೆ. ಸಾರ್ವಜನಿಕ ಸಾರಿಗೆ ಚಾಲನೆಯಲ್ಲಿದೆ.
ಇಂದು ಎಲ್ಲಿಯೂ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. 16 ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಹಿಂಪಡೆಯಲು ಗೃಹ ಸಚಿವರು ಸೂಚಿಸಿದ್ದಾರೆ. ಆದರೆ, ಈ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯಾಗಿ ಶಾಲಾ-ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಇಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡದಂತೆ ನಿಷೇಧ ಹೇರಿರುವ ಕ್ರಮವನ್ನು ಮುಂದುವರಿಸಲಾಗಿದೆ.
