ಬೆಂಗಳೂರು (ಸೆ. 29): ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಹೊರ ರಾಜ್ಯದ ನಾಲ್ವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ, ₹28 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಬಿಹಾರ ಮೂಲದ ಸಂಜಯ್ ಕುಮಾರ್ ಶರ್ಮಾ, ಅಸ್ಸಾಂನ ಚಂದ್ರಪ್ರಸಾದ್, ಆಶಿಸ್ ರಾಬಿದಾಸ್ ಹಾಗೂ ದಿಬಾಕರ್ ಬಿಸೋಯ್ ಬಂಧಿತರಾಗಿದ್ದು, ಆರೋಪಿಗಳಿಂದ ₹28 ಲಕ್ಷ ಮೌಲ್ಯದ 56 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ.

ಬೊಮ್ಮನಹಳ್ಳಿ ಸಮೀಪ ಸಂಜಯ್‌ಕುಮಾರ್ ಶರ್ಮಾ ಗಾಂಜಾ ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಮಾಲಿನ ಸಮೇತ ಆತ ಸಿಕ್ಕಿಬಿದ್ದ, ವಿಚಾರಣೆಯಲ್ಲಿ ಸಂಜಯ್ ನೀಡಿದ ಮಾಹಿತಿ ಮೇರೆಗೆ ಇನ್ನುಳಿದವರನ್ನು ಬಂಧಿಸಲಾಯಿತು ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ತಿಳಿಸಿದ್ದಾರೆ. ಹಲವು

ತಿಂಗಳುಗಳಿಂದ ಗಾಂಜಾ ದಂಧೆಯಲ್ಲಿ ಸಂಜಯ್ ನಿರತನಾಗಿದ್ದು, ಆತನ ಮೇಲೆ ನಗರದ ಬೇರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಗಾಂಜಾ ವ್ಯವಹಾರದಲ್ಲಿ ಸಂಜಯ್‌ಗೆ ಉಳಿದ ಮೂವರು ಸಂಪರ್ಕಕ್ಕೆ ಬಂದಿದ್ದಾರೆ. ಒಡಿಶಾದಿಂದ ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸೂಟ್ ಕೇಸ್ ಹಾಗೂ ಏರ್ ಬ್ಯಾಗ್ ಗಳಲ್ಲಿ ಗಾಂಜಾ ತುಂಬಿಕೊಂಡು ಆರೋಪಿಗಳು ತರುತ್ತಿದ್ದರು. ಸ್ಥಳೀಯವಾಗಿ ಗಾಂಜಾ ಬೇಸಾಯಗಾರರಿಂದ ಕಡಿಮೆ ಬೆಲೆಗೆ ಖರೀದಿಸಿ ಅದನ್ನು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು.

ಬೊಮ್ಮನಹಳ್ಳಿಯಲ್ಲಿ ಸಂಜಯ್ ಕುಮಾರ್ ನೆಲೆಸಿದ್ದರೆ, ಹಾಲನಾಯಕನಹಳ್ಳಿ ಮತ್ತು ಜಂಗಲ್‌ಪಾಳ್ಯದಲ್ಲಿ ಚಂದ್ರಪ್ರಸಾದ್, ಬಿಸೋಯ್ ಹಾಗೂ ಆಶಿಸ್ ವಾಸವಾಗಿದ್ದರು. ಈ ನಾಲ್ವರು ಪ್ರತ್ಯೇಕ ತಂಡ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಮೊದಲು ಸಂಜಯ್‌ನನ್ನು ಬಂಧಿಸಿ ಆತನಿಂದ 4.90 ಕೆ.ಜಿ. ಗಾಂಜಾ ಜಪ್ತಿಯಾಯಿತು. ಇನ್ನುಳಿದ ಗಾಂಜಾವನ್ನು ಮೂವರಿಂದ ವಶಪಡಿಸಿಕೊಳ್ಳಲಾಯಿತು ಎಂದು ಡಿಸಿಪಿ ವಿವರಿಸಿದ್ದಾರೆ.