ಹೊಸ ವರ್ಷದ ಬೆಳಕನ್ನು ಬರ ಮಾಡಿಕೊಳ್ಳಲು ಸಿಲಿಕಾನ್‌ ಸಿಟಿ ಬೆಂಗಳೂರು ಸರ್ವ ರೀತಿಯಲ್ಲೂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ನಗರದ ಜನತೆಯೂ ಕೂಡ ಸಾಕಷ್ಟು ಕಾತರರಾಗಿದ್ದಾರೆ.

ಬೆಂಗಳೂರು : ಜೀವನವನ್ನು ಮತ್ತಷ್ಟು ಹೊಸತಾಗಿಸಿ ಮತ್ತು ಹಸನುಗೊಳಿಸುವ ಭರವಸೆ ಎಂಬ ಹೊಸ ವರ್ಷದ ಬೆಳಕನ್ನು ಬರ ಮಾಡಿಕೊಳ್ಳಲು ಸಿಲಿಕಾನ್‌ ಸಿಟಿ ಬೆಂಗಳೂರು ಸರ್ವ ರೀತಿಯಲ್ಲೂ ಸಜ್ಜಾಗಿದೆ. ನಗರದ ಜನರು 2018ಅನ್ನು ಬೀಳ್ಕೊಟ್ಟು, 2019ಅನ್ನು ಸ್ವಾಗತಿಸಲು ಕಾತುರರಾಗಿದ್ದಾರೆ.

2019ಅನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್‌ 31ರ ಸೋಮವಾರ ಮಧ್ಯರಾತ್ರಿ 12 ಗಂಟೆಯ ಆ ಕ್ಷಣಗಳಿಗೆ ಸಾಕಾರವಾಗಲಿದೆ. ಎಲ್ಲರ ಚಿತ್ತ ಆ ಕ್ಷಣವನ್ನು ಸ್ವಾಗತಿಸಿ ಹೊಸ ವರ್ಷಾಚರಣೆಯತ್ತ ನೆಟ್ಟಿದೆ. ನವ ವಧುವಿನಂತೆ ಶೃಂಗಾರಗೊಂಡಿರುವ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಗಳು ಕೈಬೀಸಿ ಕರೆಯುತ್ತಿವೆ. ಈ ಶೃಂಗಾರ, ರಂಗು, ವೈಭೋಗಗಳ ನಡುವೆ ಬಹಳ ಎಚ್ಚರದಿಂದ ಇದ್ದು, ಎಲ್ಲೆಡೆ ಶಾಂತಿ ಕಾಪಾಡಲು, ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದೆ ಸಮರ್ಥವಾಗಿ ನಿಭಾಯಿಸಲು ಪೊಲೀಸರು ಬಿಗಿ ಭದ್ರತೆ ಮಾಡಿಕೊಂಡಿದ್ದಾರೆ.

ಹೊಸ ವರ್ಷದ ಸಂಭ್ರಮ ಸಾಮಾನ್ಯವಾಗಿ ನಡೆಯುವುದು ಮನೆಗಳಿಗಿಂತ ಹೊರಗಡೆಯೇ ಹೆಚ್ಚು. ಹಾಗಾಗಿ ಮಹಾನಗರಿಯ ಹಾಟ್‌ ಸ್ಪಾಟ್‌ ಎಂದೇ ಕರೆಯುವ ಎಂ.ಜಿ. ರಸ್ತೆ, ಬ್ರಿಗೇಡ್‌ ರೋಡ್‌, ಚಚ್‌ರ್‍ ಸ್ಟ್ರೀಟ್‌ ಸೇರಿದಂತೆ ಹಲವು ಪ್ರಮುಖ ಸ್ಥಳಗಳು ಹೊಸ ವರ್ಷವನ್ನು ಸ್ವಾಗತಿಸಲು ವಿದ್ಯುತ್‌ ದೀಪಾಲಂಕಾರದಿಂದ ಸಿಂಗಾರಗೊಂಡು ತುದಿಗಾಲಲ್ಲಿ ನಿಂತಿದೆ. ನಗರದ ಬಹುತೇಕ ಐಷಾರಾಮಿ ಸ್ಟಾರ್‌ ಹೋಟೆಲ್‌ಗಳು, ಪ್ರಸಿದ್ಧ ಹೋಟೆಲ್‌ಗಳು, ಪಬ್‌, ಬಾರ್‌, ರೆಸ್ಟೋರೆಂಟ್‌, ಮಾಲ್‌ಗಳು ಪ್ರತಿ ವರ್ಷದಂತೆ ಈ ಬಾರಿಯ ವರ್ಷಾಚರಣೆಗೂ ಸಂಗೀತ, ನೃತ್ಯ, ಫ್ಯಾಷನ್‌ ಶೋ, ಪಾನಗೋಷ್ಠಿಯಂತಹ ಮನರಂಜನೆಗಳಿಗೆ ವೇದಿಕೆ ಸಿದ್ಧಪಡಿಸಿಕೊಂಡು ಕಾಯುತ್ತಿವೆ. ನಗರದ ಬಹುತೇಕ ಹೋಟೆಲ್‌ಗಳಲ್ಲಿ ಬುಕಿಂಗ್‌ ಪೂರ್ಣ ಮುಗಿದಿದೆ. ಹಾಗಾಗಿಯೇ ಹೋಟೆಲ್‌ಗಳು ತಮ್ಮ ವೆಸ್‌ಸೈಟ್‌ಗಳಲ್ಲಿ ಡಿ.31 ಮತ್ತು ಜ.1ಕ್ಕೆ ಯಾವುದೇ ಬುಕಿಂಗ್‌ ಖಾಲಿ ಇಲ್ಲ ಎಂದು ಪ್ರಕಟಿಸಿಕೊಂಡಿವೆ.

ಪಬ್‌, ಬಾರ್‌, ರೆಸ್ಟೋರೆಂಟ್‌ಗಳು ಹೌಸ್‌ಫುಲ್‌ ಆಗಲಿವೆ. ಪ್ರವೇಶ ಶುಲ್ಕ ಒಬ್ಬರಿಗೆ .2 ಸಾವಿರದಿಂದ ಐಷಾರಾಮಿ ಸೌಲಭ್ಯ, ಕಾರ್ಯಕ್ರಮಗಳಿಗೆ ಅನುಗುಣವಾಗಿ ಎಂಟತ್ತು ಸಾವಿರ ರು. ವರೆಗೂ ನಿಗದಿಪಡಿಸಿವೆ. ಗ್ರಾಹಕರನ್ನು ಸೆಳೆಯಲು ಉಚಿತ ಪಿಕ್‌ಅಪ್‌ ಡ್ರಾಪ್‌, ಕೆಲ ಕಾಲ ಮಕ್ಕಳನ್ನು ನೋಡಿಕೊಳ್ಳಲು ವ್ಯವಸ್ಥೆ, 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಉಚಿತ ಪ್ರವೇಶದಂತಹ ಅವಕಾಶಗಳನ್ನು ನೀಡಿವೆ. ಎಲ್ಲೆಡೆ ಅನಿಯಮಿತ ಮದ್ಯ, ವಿವಿಧ ಬಗೆಯ ಸಾಂಪ್ರದಾಯಿಕ ಔತಣ, ಡಿಜೆಗಳ ಕಿವಿ ಗಡಚಿಕ್ಕುವ ಸಂಗೀತ, ನೃತ್ಯ ಸೇರಿದಂತೆ ಮನರಂಜನೆ ಮುಗಿಲು ಮುಟ್ಟಲಿದೆ.

ಎ.ಜಿ.ರಸ್ತೆ ಬ್ರಿಗೇಡ್‌ ರಸ್ತೆ ಮಾತ್ರವಲ್ಲದೆ, ಇಂದಿರಾ ನಗರ, ಎಚ್‌ಎಸ್‌ಆರ್‌ ಲೇಔಟ್‌, ಜಯನಗರ, ಜೆ.ಪಿ.ನಗರ, ರಾಜರಾಜೇಶ್ವರಿ ನಗರ ಸೇರಿದಂತೆ ನಗರದ ಇತರ ಪ್ರದೇಶಗಳ ಹೆಸರುವಾಸಿ ರಸ್ತೆಗಳಲ್ಲೂ ಸ್ಥಳೀಯವಾಗಿಯೇ ಹೊಸ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಸ್ಥಳೀಯ ವಾಣಿಜ್ಯ ಕೇಂದ್ರಗಳು ವಿದ್ಯುದ್ದೀಪಾಲಂಕಾರಗಳಿಂದ ಸಿಂಗಾರಗೊಂಡಿದ್ದು, ಕಳೆದಹೋದ ಕ್ಷಣಗಳ ಮೆಲುಕು, ಮುಂದಿನ ದಿನಗಳ ಕನವರಿಕೆ ನಡುವಿನ ಗಳಿಗೆಯನ್ನು ಬರಮಾಡಿಕೊಳ್ಳಲು ವೇದಿಕೆ ಸಿದ್ಧಪಡಿಸಿವೆ.

ಎಲ್ಲೆಲ್ಲಿ ಏನೇನು?

*ವಿವಂತ ಬೈ ತಾಜ್‌, ಎಂ.ಜಿ.ರಸ್ತೆ

ಇಲ್ಲಿ, ದೇಶೀ, ವಿದೇಶಿ ಡ್ಯಾನ್ಸ್‌, ಲಂಡನ್‌ನ ಕ್ಲೋಯ್‌ ಬೊಡಿಮೇಡ್‌ ಮತ್ತು ಲೋಯ್‌ ಅವರ ಡಿಜೆಗಳು ಯುವ ಮನಸ್ಸುಗಳಿಗೆ ಕಿಚ್ಚು ಹಚ್ಚಲಿವೆ. ಅವರು ಹಾಕುವ ತಾಳಕ್ಕೆ ಜನ ಹುಚ್ಚೆದ್ದು ಕುಣಿಯಲಿದ್ದಾರೆ. ಮನಬಂದಷ್ಟುಪಾನಗೋಷ್ಠಿ, ಅನಿಯಮಿತ ತಿಂಡಿ ತಿನಿಸು ವ್ಯವಸ್ಥೆ ಇರಲಿದೆ. ಪ್ರವೇಶ ಶುಲ್ಕ .3500 ನಿಂದ ಆರಂಭ.

*ರಾಯಲ್‌ ಆರ್ಕಿಡ್‌ ಹೋಟೆಲ್‌, ಹಳೇ ಮದ್ರಾಸು ರಸ್ತೆ

ಪ್ಯಾರಿಸ್‌ ರಾತ್ರಿಯ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ದೇಶಿ ವಿದೇಶಿ ಸೆಲೆಬ್ರಿಟಿ ಡಿಜೆ, ಫ್ಯಾಷನ್‌ ಶೋ, ಬ್ಯಾಲೆಟ್‌ ಪ್ರದರ್ಶನ, ಕಿಡ್ಸ್‌ ಝೋನ್‌, ಅನಿಯಮಿತ ಪಾನ ಮತ್ತು ಊಟ ವ್ಯವಸ್ಥೆ ಮಾಡಲಾಗಿದೆ. ದೊಡ್ಡವರಿಗೆ ಸ್ಟೇಜ್‌ ಮೇಲೆ ಪ್ರವೇಶಕ್ಕೆ ಅವಕಾಶವಿದೆ. 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶ, ದೊಡ್ಡ ಮಕ್ಕಳಿಗೆ ತಲಾ 2 ಸಾವಿರ ರು. ಆರಂಭಿಕ ಶುಲ್ಕ ನಿಗದಿಪಡಿಸಲಾಗಿದೆ.

*ಹಾರ್ಡ್‌ ರಾಕ್‌ ಕೆಫೆ, ಸೆಂಟ್‌ ಮಾರ್ಕ್ಸ್‌ ರಸ್ತೆ

ಇಲ್ಲಿ ಮಾಸ್ಕ್‌ ರೇಡ್‌ ಪಾರ್ಟಿ ಆಯೋಜಿಸಲಾಗಿದೆ. ಲೈವ್‌ ಪರ್ಮಾರ್ಮೆನ್ಸ್‌, ರಾಕಿಂಗ್‌ ಡ್ಯಾನ್ಸ್‌, ಫೆä್ಲೕರ್‌ ಆಫ್‌ ಹಾರ್ಡ್‌ ರಾಕ್‌ ಮತ್ತಿತರ ಮನರಂಜನೀಯ ಕಾರ್ಯಕ್ರಮಗಳು, ಪಾನ ಮತ್ತು ಔತಣಗೋಷ್ಠಿಗಳಿವೆ. ಪ್ರವೇಶ ಶುಲ್ಕ 2000 ರು.ನಿಂದ ಆರಂಭ.

*ಡೋನ್‌ ಟೆಲ್‌ ಮಾಮ ಲಾಂಜ್‌, ಎಚ್‌ಎಸ್‌ಆರ್‌ ಲೇಔಟ್‌

ಇಲ್ಲಿ ರೂಪ್‌ಟಾಪ್‌ ಬಾರ್‌ ಮತ್ತು ರೆಸ್ಟೋರೆಂಟ್‌ ಇದ್ದು, ಇಡೀ ರಾತ್ರಿ ಸಂಗೀತ, ನೃತ್ಯದ ಜೊತೆಗೆ ಸಾಕಾಗುವಷ್ಟುಪಾನ ಸೇವಿಸಿ, ನಿಮ್ಮಿಷ್ಟದ ಸಾಂಪ್ರದಾಯಿಕ ಊಟ ಮಾಡಿ ಕುಣಿದು ಕುಪ್ಪಳಿಸಲು ಅವಕಾಶಗಳಿವೆ. ಪ್ರವೇಶ ಶುಲ್ಕ 1800 ರು.ನಿಂದ ಆರಂಭವಾಗಲಿದೆ.

*ವಿವಂತಾ ಬೈ ತಾಜ್‌, ಯಶವಂತಪುರ

ಪ್ರಖ್ಯಾತ ವಿದೇಶಿ ಡಿಜೆಗಳು, ಅಂತಾರಾಷ್ಟ್ರೀಯ ಬೆಲ್ಲಿ ಡ್ಯಾನ್ಸ್‌, ಸಂಗೀತ, ನೃತ್ಯ. ಮಕ್ಕಳಿಗೂ ಮನರಂಜನೆಗೂ ಪ್ರತ್ಯೇಕ ವೇದಿಕೆ. ಜೊತೆಗೆ ಅನಿಯಮಿತ ಪಾನ, ಖಾದ್ಯ, ಔತಣ ಇಲ್ಲಿನ ಹೊಸ ವರ್ಷದ ಪಾರ್ಟಿಯ ವಿಶೇಷ. ಜೋಡಿಗೆ ಪ್ರವೇಶ ಶುಲ್ಕ 4 ಸಾವಿರ ರು., ಓರ್ವ ವ್ಯಕ್ತಿಗೆ 1800 ರು.ನಿಂದ ಪ್ರವೇಶ ಶುಲ್ಕ ಆರಂಭವಾಗಲಿದೆ.

* ಕ್ಯಾಪಿಟಲ್‌ ಹೋಟೆಲ್‌

ಇಲ್ಲಿ ವಿದೇಶಗಳಿಂದ ಆಗಮಿಸಿದ ನೃತ್ಯಗಾರ್ತಿಯರು ಹೊಸ ವರ್ಷದ ರಸದೌತಣ ಉಣಬಡಿಸಲಿದ್ದಾರೆ. ದೇಶಿ, ವಿದೇಶಿ ಡಿಜೆ ಕೂಡ ಇದಕ್ಕೆ ಸಾಥ್‌ ನೀಡಲಿದೆ. ಫೇಸ್‌ ಪೇಂಟಿಂಗ್‌, ಆಟಗಳು ಮೊದಲಾದವು ಮುದನೀಡಲಿವೆ.