ಬೆಂಗಳೂರಿಗರಿಗೆ ಪ್ರಿಯವಾದ ಗಣೇಶ ಇವನು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 10:05 AM IST
Bengaluru People Like POP Ganesh Idols
Highlights

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿ ಎಷ್ಟೇ ಜಾಗೃತಿ ಮೂಡಿಸಿದರೂ ಉದ್ಯಾನನಗರಿ ನಾಗರಿಕರಲ್ಲಿ ಪಿಒಪಿ ಬೇಡಿಕೆ ಹಾಗೂ ಜನಪ್ರಿಯತೆ ಎರಡೂ ಕುಸಿದಿಲ್ಲ. ಇದಕ್ಕೆ ಪಿಒಪಿ ಮೂರ್ತಿಗಳ ಅಗ್ಗದ ದರ, ಆಕರ್ಷಕ ಮತ್ತು ಬೃಹತ್ ರೂಪವೇ ಕಾರಣವಾಗಿದೆ. 

ಬೆಂಗಳೂರು : ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿ ಎಷ್ಟೇ ಜಾಗೃತಿ ಮೂಡಿಸಿದರೂ ಉದ್ಯಾನನಗರಿ ನಾಗರಿಕರಲ್ಲಿ ಪಿಒಪಿ ಬೇಡಿಕೆ ಹಾಗೂ ಜನಪ್ರಿಯತೆ ಎರಡೂ ಕುಸಿದಿಲ್ಲ. ಇದಕ್ಕೆ ಪಿಒಪಿ ಮೂರ್ತಿಗಳ ಅಗ್ಗದ ದರ, ಆಕರ್ಷಕ ಮತ್ತು ಬೃಹತ್ ರೂಪ ಹಾಗೂ ಎಲ್ಲದಕ್ಕಿಂತ ಮಿಗಿಲಾಗಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯು ಸಂಪ್ರದಾಯಕ್ಕಿಂತ ಹೆಚ್ಚಾಗಿ ಕ್ರೇಜ್ ರೂಪ ಪಡೆದಿರುವುದೇ ಪ್ರಮುಖ ಕಾರಣ. 

ಹೌದು, ಪಿಒಪಿ ಮೂರ್ತಿಗಳಿಂದ ಪರಿಸರದ  ಮೇಲೆ ಉಂಟಾಗುವ ಹಾನಿ ಬಗ್ಗೆ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿಯು ಸಾರ್ವ ಜನಿಕರಲ್ಲಿ ಜಾಗೃತಿ  ಮೂಡಿಸುತ್ತದೆ. ಅಲ್ಲದೆ 2016 ರಿಂದ ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶಿಸಲಾಗಿದೆ.

ಆದ್ಯಾಗ್ಯೂ, ಮಣ್ಣಿನ ಮೂರ್ತಿಗಳಿಗಿಂತ ಪಿಒಪಿ ಮೂರ್ತಿಗಳ ತಯಾರಿ ಸುಲಭ. ಹೀಗಾಗಿ ಬೆಲೆಯೂ ಕಡಿಮೆಯಾಗಿರುವುದರಿಂದ ಗಣೇಶ ಮೂರ್ತಿಗಳ ತಯಾರಿಕರು ಹಾಗೂ ಸಾರ್ವಜನಿಕರಿಗೆ ಅಚ್ಚುಮೆಚ್ಚಾಗಿ ಪರಿಣ ಮಿಸಿದೆ. ಜತೆಗೆ ಮಣ್ಣಿ ಮೂರ್ತಿಗಳು ತಯಾರಾದ ಸ್ಥಳದಿಂದ ಸಾಗಾಣೆ ಮಾಡುವಾಗಲೇ ಬಹುತೇಕ ಹಾಳಾಗುತ್ತವೆ. ಪಿಒಪಿ ಮೂರ್ತಿಗಳು ಊನ ಆಗುವ ಸಾಧ್ಯತೆ ತೀರಾ ಕಡಿಮೆ ಎಂದು ಗಣೇಶ ಮೂರ್ತಿ ತಯಾರಕರೊಬ್ಬರು ತಿಳಿಸುತ್ತಾರೆ.

ಕ್ರೇಜ್‌ನಿಂದಾಗಿ ಪಿಒಪಿಗೆ ಡಿಮ್ಯಾಂಡ್: ಇನ್ನು ಮಣ್ಣಿನ ಗಣೇಶಮೂರ್ತಿಗಳನ್ನು ಹೆಚ್ಚು ಎತ್ತರದ ಮೂರ್ತಿಗಳಾಗಿ ತಯಾರಿಸುವುದು ಕಷ್ಟ. ಮಣ್ಣಿನ ಮೂರ್ತಿಗಳಾದರೆ 4 ಅಡಿವರೆಗೆ ಮಾತ್ರ ಮಾಡಬಹುದಾಗಿದ್ದು, ಯುವಕರು ಹಾಗೂ ಗಣೇಶ ಉತ್ಸವ ಸಮಿತಿಗಳಲ್ಲಿ ಹೆಚ್ಚು ಎತ್ತರದ  ಗಣೇಶ ಮೂರ್ತಿಗಳನ್ನು ಇಡುವುದು ಕ್ರೇಜ್ ಆಗಿ ಬದಲಾಗಿದೆ. ವಿವಿಧ ಗಣೇಶ ಉತ್ಸವ ಸಮಿತಿಗಳು ಹಾಗೂ ವಿನಾಯಕ ಗೆಳೆಯರ ಬಳಗ ಗಳು ಪೈಪೋಟಿ ಮೇಲೆ ಬಿದ್ದು ಹೆಚ್ಚು ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮುಂದಾಗುತ್ತಿವೆ. ಕನಿಷ್ಠ 7 ರಿಂದ  15 ಅಡಿವರೆಗೆ
ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. 

ಹೀಗಾಗಿ ಅನಿವಾರ್ಯವಾಗಿ ಯುವಕರು ಪಿಒಪಿ ಪರ ವಾಲುತ್ತಿದ್ದಾರೆ. ಟ್ರೆಂಡ್‌ಗೆ ತಕ್ಕ ಗಣೇಶಮೂರ್ತಿಗಳು: ಪ್ರತಿ ವರ್ಷ ತರೇಹವಾರಿ ಗಣೇಶ ಮೂರ್ತಿ ಸಿನಿಮಾ ನಟರ ಶೈಲಿಯಲ್ಲಿ ಸಿದ್ಧಗೊಳಿಸಲು ಮುಂಗಡ ಬುಕ್ಕಿಂಗ್ ಮಾಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಯುವಕರ ಕ್ರೇಜ್ ಹಾಗೂ ಟ್ರೆಂಡ್‌ಗೆ ತಕ್ಕಂತೆ ಗಣೇಶ ಮೂರ್ತಿಗಳನ್ನು ಸಿದ್ಧಗೊಳಿಸಲಾಗುತ್ತದೆ. ಕಳೆದ ಬಾರಿ ಬಾಹುಬಲಿ ಗಣೇಶ, ಉಪ್ಪಿಟ್ಟು ಸಿನಿಮಾ ಶೈಲಿ ಗಣೇಶ, ಕಬಾಲಿ, ಕ್ರಿಶ್, ಸ್ಪೈಡರ್ ಮ್ಯಾನ್, ಶಕ್ತಿಮಾನ್, ಕಾರ್ಗಿಲ್ ಗಣಪತಿ ಹೀಗೆ ಹತ್ತಾರು ಶೈಲಿಯಲ್ಲಿ  ಗಣಪತಿಗಳನ್ನು ತಯಾರಿಸಿರುವ ಉದಾಹರಣೆಗಳಿವೆ.  ಇಂತಹ ಮೂರ್ತಿಗಳನ್ನು ತಯಾರಿಸಲು ಪಿಒಪಿ ಹೆಚ್ಚು ಸಹಕಾರಿಯಾಗುತ್ತದೆ. ಹೆಚ್ಚು ಎತ್ತರದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಕೆಲವು ಸಂಘಟನೆಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ ಎನ್ನುತ್ತಾರೆ ತಯಾರಕರು. 

ಮಾರಾಟಗಾರರಿಗೂ ಪಿಒಪಿಯೇ ಪ್ರಿಯ: ಮಣ್ಣಿನ ಮೂರ್ತಿಗಳನ್ನು 5 - 6 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಮಾಡುವುದು ಕಷ್ಟಕರ. ಒಂದು ವೇಳೆ ಮಣ್ಣು ಬಿರುಕು ಬಿಟ್ಟರೆ ಅಥವಾ ಯಾವುದಾದರೂ ಒಂದು ಅಂಗ ಸ್ವಲ್ಪ ಭಿನ್ನವಾದರೆ (ಮುರಿದರೆ) ಯಾರೊಬ್ಬರು ಮೂರ್ತಿಗಳನ್ನು ಖರೀದಿಸುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೂರ್ತಿಗಳ ತಯಾರಕರು ಮತ್ತು ಮಾರಾಟಗಾರರು ಪಿಒಪಿ ಗಣೇಶ ಗಳನ್ನೇ ಕೊಂಡುಕೊಳ್ಳುವಂತೆ ಜನರನ್ನು ಓಲೈಸುತ್ತಿದ್ದಾರೆ. 

ಮೂರ್ತಿ ಮಾರಾಟಗಾರರು ಒಂದು ವೇಳೆ ರಚನೆ ಮಾಡಿರುವ ಅಷ್ಟೂ ಮೂರ್ತಿಗಳು ಮಾರಾಟವಾಗದಿದ್ದರೆ, ಮುಂದಿನ ವರ್ಷಕ್ಕೆ ಮಾರಾಟ ಮಾಡಲು ಅಂಗಡಿಗಳಲ್ಲಿಯೇ ಇರಿಸಿರುತ್ತಾರೆ. ಮಣ್ಣಿನ ಮೂರ್ತಿ ಗಳಾದರೆ, ವರ್ಷ ಪೂರ್ತಿ ಇರುವುದಿಲ್ಲ. ಈ ಕಾರಣಗಳಿಂದಲೂ ಪಿಒಪಿ ವ್ಯಾಪಾರದ ದೃಷ್ಟಿಯಿಂದಲೂ ಪ್ರಿಯವಾಗಿದೆ. ಹೀಗಾಗಿಯೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಎಷ್ಟೇ ಹರಸಾಹಸ ಮಾಡಿದರೂ ಪಿಒಪಿ ಜನಪ್ರಿಯತೆ ಕುಗ್ಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

loader