ಬೆಂಗಳೂರು :  ನಗರದ ಹೊರವಲಯದ ವಿಭೂತಿಪುರದಲ್ಲಿ ನಡೆದಿದ್ದ ತಾಯಿ-ಮಗನ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ಸಂಬಂಧ ಮೃತರ ಕುಟುಂಬಕ್ಕೆ ಹಣಕಾಸು ವಿಚಾರವಾಗಿ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಮೂವರು ಮಹಿಳೆಯರು ಸೇರಿದಂತೆ ಐವರನ್ನು ಸೋಮವಾರ ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಭೂತಿಪುರದ ಸುಧಾ, ಕೆ.ಮಂಜುನಾಥ, ಡೈಸಿ, ಪ್ರಭಾವತಿ ಮತ್ತು ರಾಮ್‌ ಬಹುದ್ದೂರ್‌ ಬಂಧಿತರು. ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಬೇಸರಗೊಂಡು ವಿಭೂತಿಪುರದಲ್ಲಿ ತಾಯಿ ಗೀತಾ ಆತ್ಮಹತ್ಯೆಗೆ ಶರಣಾಗಿದ್ದರೆ, ವರುಣ್‌ ತನ್ನ ತಂದೆಯಿಂದಲೇ ಹತ್ಯೆಗೀಡಾಗಿದ್ದ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಹುಟ್ಟು ಹಾಕಿತ್ತು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ತಾಯಿ-ಮಗನ ಸಾವಿನ ಹಿಂದಿನ ಕಾರಣ ಶೋಧಿಸಿದಾಗ ಬಡ್ಡಿ ಮಾಫಿಯಾದ ದೌರ್ಜನ್ಯ ಸಂಗತಿ ಬೆಳಕಿಗೆ ಬಂದಿದೆ. ಈ ಮಾಹಿತಿ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಲ ತೀರಿಸಿಲ್ಲ ಎಂದು ಸುರೇಶ್‌ ಬಾಬು ಮನೆ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಆರೋಪಿಗಳು ಗಲಾಟೆ ಮಾಡಿದ್ದರು. ಈ ಪೈಕಿ ರಾಮ್‌ ಬಹುದ್ದೂರ್‌ ಸಾಲ ಕೊಡದಿದ್ದರೂ ಮೃತರ ಕುಟುಂಬಕ್ಕೆ ಬ್ಲ್ಯಾಕ್‌ಮೇಲ್‌ ಮಾಡಿದ್ದ ಎಂಬುದು ಗೊತ್ತಾಗಿದೆ. ಬಡ್ಡಿ ದಂಧೆಯಲ್ಲಿ ತೊಡಗಿರುವ ಮಂಜುನಾಥ್‌ ವಿರುದ್ಧ ರೌಡಿಪಟ್ಟಿತೆರೆಯಲು ನಿರ್ಧರಿಸಲಾಗಿದೆ.

ಚೀಟಿ ವ್ಯವಹಾರದಲ್ಲಿ ನಷ್ಟಮತ್ತು ಸಾಲಗಾರರ ಕಿರುಕುಳ ಸಹಿಸಲಾರದೆ ಸುರೇಶ್‌ ಬಾಬು ಮತ್ತು ಗೀತಾ ಬಾಯಿ ದಂಪತಿ, ಮಕ್ಕಳೊಂದಿಗೆ ಸಾಮೂಹಿಕ ಆತ್ಮಹತ್ಯೆ ನಿರ್ಧರಿಸಿದ್ದರು. ಶನಿವಾರ ರಾತ್ರಿ 12.45ರಲ್ಲಿ ಗೀತಾ ಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಮಗನಿಗೆ ನೇಣು ಬಿಗಿದು ಕೊಂದ ಸುರೇಶ್‌ ಬಾಬು, ನಂತರ ತಾವು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಆದರೆ ತಂದೆಗೆ ಪ್ರಾಣ ಕಳೆದುಕೊಳ್ಳದಂತೆ ಪುತ್ರಿ ತಡೆದಿದ್ದಳು.

ವರದಿಗಾರನಿಂದ ಕೊಲೆ ರಹಸ್ಯ ಬಯಲು!

ತಾಯಿ-ಮಗ ಆತ್ಮಹತ್ಯೆ ಎಂದೇ ಭಾವಿಸಿದ್ದ ಪೊಲೀಸರು ಮತ್ತು ಸ್ಥಳೀಯರಿಗೆ, ಅಂತ್ಯಸಂಸ್ಕಾರದ ವೇಳೆ ಮೃತ ವರುಣ್‌ ಸಾವಿನ ಸತ್ಯ ಬಯಲಾಗಿತ್ತು.

ಅಂತ್ಯ ಸಂಸ್ಕಾರದ ವೇಳೆ ಖಾಸಗಿ ಸುದ್ದಿವಾಹಿನಿಯೊಂದರ ವರದಿಗಾರೊಬ್ಬರು ಸುರೇಶ್‌ ಅವರ ಬಳಿ ನಿಮ್ಮ ಪತ್ನಿ ಮತ್ತು ಮಗನ ಪೋಟೋ ಕೊಡುವಂತೆ ಕೇಳಿದ್ದ. ಆಗ ತಮ್ಮ ಮೊಬೈಲ್‌ನ್ನು ವರದಿಗಾರನಿಗೆ ಕೊಟ್ಟಅವರು, ನೀವೇ ಶೇರ್‌ ಇಟ್‌ ಮೂಲಕ ಪಡೆದುಕೊಳ್ಳಿ ಎಂದಿದ್ದರು. ಆ ವೇಳೆ ತಾಯಿ-ಮಗನ ಸಾವಿನ ದೃಶ್ಯಾವಳಿಗಳು ವರದಿಗಾರನಿಗೆ ಸಿಕ್ಕಿವೆ.

ಮನೆಯಲ್ಲಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದ ನಂತರ ಶನಿವಾರ ರಾತ್ರಿ ತಂದೆಗೆ ಗೊತ್ತಾಗದಂತೆ ಸುರೇಶ್‌ ಪುತ್ರಿ, ಇಡೀ ದುರಂತದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಳು. ಈ ವಿಡಿಯೋ ನೋಡಿದ ವರದಿಗಾರ, ತಕ್ಷಣವೇ ತನ್ನ ಮೊಬೈಲ್‌ಗೆ ಸೆಂಡ್‌ ಮಾಡಿಕೊಂಡು ವಾಹಿನಿಯಲ್ಲಿ ಪ್ರಸಾರ ಮಾಡಿಸಿದ್ದ. ಆತ್ಮಹತ್ಯೆ ಕೃತ್ಯ ಬೆಳಕಿಗೆ ಬಂದ ಕ್ಷಣದಿಂದಲೂ ಪೊಲೀಸರಿಗೆ ಅನುಮಾನವಿತ್ತು. ವಿಡಿಯೋ ಬಗ್ಗೆ ತಿಳಿದ ತಕ್ಷಣವೇ ತಂದೆ ಮತ್ತು ಆತನ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ಕಣ್ಮಂದೆಯೇ ಪತ್ನಿ ಮತ್ತು ಮಗನ ಸಾವನ್ನಪ್ಪಿದ್ದನ್ನು ಕಂಡು ಆಘಾತಕ್ಕೊಳಗಾಗಿರುವ ಸುರೇಶ್‌ ಬಾಬು ಮತ್ತು ಅವರ ಪುತ್ರಿಯನ್ನು ಮನಶಾಸ್ತ್ರಜ್ಞರ ಕೌನ್ಸಲಿಂಗ್‌ ನಡೆಸಲಾಗುತ್ತದೆ. ಈ ಪ್ರಕರಣದಲ್ಲಿ ಮೃತರ ಪುತ್ರಿಯನ್ನು ಪ್ರತ್ಯಕ್ಷ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

5 ಲಕ್ಷ ಸಾಲ, 40 ಸಾವಿರಕ್ಕೆ ಗಲಾಟೆ

ಮಲ್ಲೇಶ್ವರ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್‌, ಮನೆ ಹತ್ತಿರದ ಗಿರಾಣಿ ಅಂಗಡಿ ಸಹ ಇಟ್ಟಿದ್ದರು. ಈ ಅಂಗಡಿ ವಹಿವಾಟು ನೋಡಿಕೊಳ್ಳುತ್ತಿದ್ದ ಅವರ ಪತ್ನಿ ಗೀತಾ, ಚೀಟಿ ವ್ಯವಹಾರದಲ್ಲಿ ಸಹ ತೊಡಗಿದ್ದರು. ಚೀಟಿ ಮತ್ತು ಅಂಗಡಿ ವ್ಯವಹಾರದಲ್ಲಿ ಅವರಿಗೆ ನಷ್ಟವಾಗಿ, 5 ಲಕ್ಷ ಸಾಲ ಮಾಡಿದ್ದರು. ಅದರಲ್ಲಿ ಸುಧಾ ಬಳಿ 40 ಸಾವಿರ ಪಡೆದಿದ್ದರು. ಆದರೆ ಈ ಸಾಲ ತೀರಿಸದ ಕಾರಣಕ್ಕೆ ಸುಧಾ, ಮೇ 30ರಂದು ಸುರೇಶ್‌ ಮನೆ ಬಳಿ ಬಂದು ಗಲಾಟೆ ಮಾಡಿದ್ದಳು. ಆಕೆಗೆ ಇನ್ನುಳಿದ ಆರೋಪಿಗಳು ಸಾಥ್‌ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನಾವು ಸಾಲ ಪಡೆದಿದ್ದ ಎಲ್ಲರಿಗೂ ಕಂತಿನ ರೂಪದಲ್ಲಿ ಮರಳಿಸುತ್ತಿದ್ದೇವು. ಅದರಂತೆ ಸುಧಾಳಿಗೆ ಸಹ ಹಣ ಸಂದಾಯವಾಗಿದೆ. ಆದರೆ ಆಕೆ 40 ಸಾವಿರಕ್ಕೆ ಬಡ್ಡಿ ಸೇರಿ 60 ಸಾವಿರ ನೀಡುವಂತೆ ತಾಕೀತು ಮಾಡಿದ್ದಳು. ಇದಕ್ಕೊಪ್ಪದ ಕಾರಣಕ್ಕೆ ಕೋಪಗೊಂಡ ಸುಧಾ, ನಮ್ಮ ಮನೆ ಬಳಿ ಗಲಾಟೆ ಮಾಡಿದ್ದಳು ಎಂದು ಸುರೇಶ್‌ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.