ಏಕಕಾಲಕ್ಕೆ ಬೃಹತ್ ಸ್ವಚ್ಛತಾ ಕಾರ್ಯಕ್ರಮ | ಯುನೈಟೆಡ್ ಬೆಂಗಳೂರು ಸಂಘಟನೆಯಿಂದ ಆಯೋಜನೆ | ಪೌರ ಕಾರ್ಮಿಕರು ಭಾಗಿ

ಬೆಂಗಳೂರು: ನಗರದ ಪರಿಸರ, ಕೆರೆ ಸಂರಕ್ಷಣೆ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ‘ಯುನೈಟೆಡ್ ಬೆಂಗಳೂರು’ ಸಂಘಟನೆ ಗಾಂಧಿ ಜಯಂತಿ ದಿನವಾದ ಅಕ್ಟೋಬರ್ ೨ರಂದು ನಗರದ 72 ವಾರ್ಡ್‌’ಗಳಲ್ಲಿ ಏಕ ಕಾಲಕ್ಕೆ ‘ಮೆಗಾ ಕ್ಲಿನ್’ಥಾನ್’ ಹೆಸರಿನಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಸ್ಥಾಪಕ ಅನಿರುದ್ಧ ಎಸ್.ದತ್ತಾ, ಸ್ವಚ್ಛತಾ ಅಭಿಯಾನವು ಅ.2ರ ಬೆಳಗ್ಗೆ 7ಕ್ಕೆ ಆರಂಭಗೊಳ್ಳಲಿದೆ. 72 ವಾರ್ಡ್‌ಗಳಲ್ಲಿ ನಡೆಯಲಿರುವ ಸ್ವಚ್ಛತಾ ಅಭಿಯಾನದಲ್ಲಿ ಆಯಾ ವಾರ್ಡ್‌ಗಳ ಪಾಲಿಕೆ ಸದಸ್ಯರು ಭಾಗವಹಿಸಲಿದ್ದಾರೆ. ಸ್ವಯಂಸೇವಕರು, ಸ್ಥಳೀಯರು, ಪೌರ ಕಾರ್ಮಿಕರು ಮೆಗಾ ಕ್ಲಿನ್‌ಥಾನ್ ನಡೆಸಲಿದ್ದಾರೆ ಎಂದು ಹೇಳಿದರು.

72 ವಾರ್ಡ್‌ಗಳ ಜತೆಗೆ 9 ಕೆರೆಗಳಲ್ಲಿಯೂ ಸ್ವಚ್ಛತಾ ಕಾರ್ಯಕ್ರಮ ಜರುಗಲಿದೆ. ಸಂಸದ ರಾಜೀವ್ ಚಂದ್ರಶೇಖರ್ ಅವರು ಕೋರಮಂಗಲದಿಂದ ನಾಗರಬಾವಿವರೆಗೆ ನಡೆಯುವ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ಸ್ವಚ್ಛತೆ ಕಾರ್ಯದಲ್ಲಿ ತೊಡಗಲಿದ್ದಾರೆ. ಸ್ವಚ್ಛಗೊಳಿಸಿದ ಬಳಿಕ ಮತ್ತೆ ಆ ಸ್ಥಳದಲ್ಲಿ ಕಸ ಹಾಕದಂತೆ ಖ್ಯಾತ ಕಲಾವಿದರು ಆಕರ್ಷಕ ಚಿತ್ರಗಳನ್ನು ಬಿಡಿಸಲಿದ್ದಾರೆ. ಸ್ವಚ್ಛತಾ ಅಭಿಯಾನದ ಜತೆಗೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಡೆಂಘಿ ಜ್ವರ, ಚಿಕೂನ್‌ಗುನ್ಯಾ ಜ್ವರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಕಾಯಿಲೆಗಳಿಂದ ದೂರ ಇರಬಹುದು ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ ಎಂದರು.

ಸ್ವಚ್ಛತಾ ಕಾರ್ಯದ ವೇಳೆ ಸ್ವಯಂ ಸೇವಕರಿಗೆ, ನಾಗರಿಕರಿಗೆ ಉತ್ತೇಜನ ನೀಡುವ ಸಂಬಂಧ ಸ್ವರಾಂತಮ್ ತಂಡದಿಂದ ವಾದ್ಯಗೋಷ್ಠಿ ನಡೆಯಲಿದೆ. ಸಾರ್ವಜನಿಕರು ಸಹ ನಮ್ಮೊಂದಿಗೆ ಸ್ವಚ್ಛತೆಯಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಮೊ.ಸಂ.9986377989 ಗೆ ಸಂಪರ್ಕಿಸಬಹುದಾಗಿದೆ.

ಅಭಿಯಾನದಲ್ಲಿ ಭಾಗವಹಿಸಿ: ಸಂಸದ ರಾಜೀವ್ ಚಂದ್ರಶೇಖರ್ ಮನವಿ

ಯುನೈಟೆಡ್ ಬೆಂಗಳೂರು ಆಯೋಜಿಸಿರುವ ಮೆಗಾ ಕ್ಲಿನ್‌ಥಾನ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ನಗರದ ಜನತೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಮನವಿ ಮಾಡಿಕೊಂಡಿದ್ದಾರೆ.

ನಗರದ ಜನತೆಯನ್ನು ಉದ್ದೇಶಿಸಿ ಪತ್ರ ಬರೆದಿರುವ ಅವರು, ಲಕ್ಷಾಂತರ ಜನರ ಜೀವನಾಡಿಯಾಗಿರುವ ಬೆಂಗಳೂರನ್ನು ಪರಿಸರ ಸ್ನೇಹಿಯಾಗಿ ಮತ್ತು ನಗರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಹೆಮ್ಮೆ ನಗರ ಬೆಂಗಳೂರನ್ನು ಸ್ವಚ್ಛತೆಯಿಂದ ಕಾಪಾಡಲು ಜನತೆ ಕೈಜೋಡಿಸಬೇಕು. ಅ.2ರಂದು ಜರುಗುವ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಲಾಗಿದೆ.

ಬೆಂಗಳೂರು ನಗರದ ಸ್ವಚ್ಛತೆ ಕಾಪಾಡುವಲ್ಲಿ ಜನತೆಯ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ. ನಗರ ಅಭಿವೃದ್ಧಿಗೆ ಸಂಬಂಧಪಟ್ಟ ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡುವುದು, ನಿರ್ಣಯಗಳನ್ನು ಕೈಗೊಳ್ಳುವುದು ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳಬೇಕಾದರೆ ನಾಗರಿಕರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡಬೇಕು.

ಸರ್ಕಾರವು ಸಾರ್ವಜನಿಕರ ಹಣ ಬಳಕೆ ಮಾಡುವುದರಿಂದ ಪ್ರತಿ ಯೋಜನೆಯಲ್ಲಿ ಹೊಣೆಗಾರಿಕೆ ಇರಲಿದೆ. ಮಾತ್ರವಲ್ಲ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೆಟ್ರೋ ರೈಲು ಯೋಜನೆಯಡಿ ರೈಲ್ವೆ ನಿಲ್ದಾಣವನ್ನು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಶಿವಾಜಿನಗರದ ಬಂಬೂ ಬಜಾರ್‌ಗೆ ಸ್ಥಳಾಂತರ ಮಾಡಲಾಗಿದೆ. ಆದರೆ, ಸ್ಥಳಾಂತರಕ್ಕೆ ಸಮರ್ಪಕವಾದ ಕಾರಣವನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡಿಲ್ಲ.

ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ ಇರುವುದೇ ತಪ್ಪು ನಿರ್ಣಯ ಕೈಗೊಳ್ಳಲು ಕಾರಣವಾಗಿದೆ. ಹೀಗಾಗಿ ಸಾರ್ವಜನಿಕರ ಭಾಗವಹಿಸುವಿಕೆಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.