ಬೆಂಗಳೂರು : ಮದುವೆ ಬಳಿಕ ಕೌಟುಂಬಿಕ ಬದುಕಿನ ರಹಸ್ಯ ತಿಳಿಸುವೆ ಎಂದು ಹೇಳಿ ತನ್ನ ಮಗಳನ್ನು ಲೈಂಗಿಕವಾಗಿ ದುರುಳ ಆಟೋ ಚಾಲಕನೊಬ್ಬ ಶೋಷಿಸುತ್ತಿದ್ದ ಅಮಾನವೀಯ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಐದು ಹೆಣ್ಣು ಮಕ್ಕಳ ತಂದೆಯಾಗಿರುವ ಆ ಕಿರಾತಕನ ವಿರುದ್ಧ ಠಾಣೆಯೊಂದರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಕೃತ್ಯ ಬೆಳಕಿಗೆ ಬಂದ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ. 

ಎರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದರೂ ಜೀವ ಭಯದಿಂದ ಬಾಯ್ಬಿಟಿರಲಿಲ್ಲ. ಕೊನೆಗೆ ತಂದೆ ಕಿರುಕುಳ ಸಹಿಸಲಾರದೆ ಅಮ್ಮನ ಬಳಿ ಹೇಳಿಕೊಂಡೆ ಎಂದು ಸಂತ್ರಸ್ತೆ ಅಲವತ್ತುಕೊಂಡಿದ್ದಾರೆ.

ಸಂತ್ರಸ್ತೆ ನೋವಿನ ನುಡಿಗಳು:  ನಮ್ಮ ತಂದೆ-ತಾಯಿಗೆ ಐವರು ಹೆಣ್ಣು ಮಕ್ಕಳಿದ್ದು, ನಾನೇ ಎರಡನೇ ಮಗಳು. ಅಮ್ಮ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ನನ್ನ ತಾಯಿ ಬೆಳಗ್ಗೆ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದರೆ, ಶಾಲಾ-ಕಾಲೇಜುಗಳಿಗೆ ಸೋದರಿಯರು ತೆರಳುತ್ತಿದ್ದರು. ಆ ವೇಳೆ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಅಪ್ಪನ ಲೈಂಗಿಕ ದೌರ್ಜನ್ಯಕ್ಕೆ ನಾನು ತುತ್ತಾಗುತ್ತಿದ್ದೆ.

‘ನೀನು ಅಂದರೆ ನನಗೆ ಇಷ್ಟ. ನನಗೆ ನೀನು ಬೇಕು. ಮುಂದೆ ಮದುವೆ ಆಗುವ ನಿನಗೆ ಸಂಸಾರದ ಕೆಲವೊಂದು ಪಾಠಗಳನ್ನು ತಿಳಿಸಿಕೊಡುತ್ತೇನೆ’ ಎಂದು ಹೇಳಿ ಲೈಂಗಿಕವಾಗಿ ಹಿಂಸೆ ನೀಡುತ್ತಿದ್ದರು. ಕೆಲ ದಿನಗಳ ಹಿಂದೆ ಅನಾರೋಗ್ಯ ತುತ್ತಾಗಿ ತಾಯಿ ಆಸ್ಪತ್ರೆ ಸೇರಿದ್ದಾಗಲೂ ನನ್ನ ಮೇಲೆ ತಂದೆಯಿಂದ ಶೋಷಣೆ ನಡೆಯಿತು.

ನಾನು ಅಮ್ಮ ಬಳಿ ಅಪ್ಪನ ನೀಚನ ಕೃತ್ಯ ಹೇಳಿದೆ. ಅಮ್ಮನಿಗೆ ಆಘಾತವಾಯಿತು. ಹಾಗೆ ಮನೆಯಲ್ಲಿ ದೊಡ್ಡ ರದ್ಧಾಂತವಾಯಿತು. ಇದರಿಂದ ಕೋಪಗೊಂಡ ಅಪ್ಪ, ನನ್ನ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದರು. ಅದೇ ಸಮಯಕ್ಕೆ ಸೋದರಿಯರು ಮನಗೆ ಬಂದಿದ್ದರಿಂದ ನನ್ನ ಜೀವ ಉಳಿಯಿತು. ಆದರೆ ಕೆಲಸ ಮುಗಿಸಿ ಅಮ್ಮ ಸಂಜೆ ಮನೆಗೆ ಬರುವಷ್ಟರಲ್ಲಿ ಅಪ್ಪ ಮನೆ ತೊರೆದಿದ್ದರು. ಹೀಗಾಗಿ ತಂದೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಂತ್ರಸ್ತೆ ಹೇಳಿದ್ದಾರೆ.

ದೂರಿನನ್ವಯ ಪೋಕ್ಸೊ, ಅತ್ಯಾಚಾರ (ಐಪಿಸಿ 376) ಹಾಗೂ ಬೆದರಿಕೆ (506) ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೋಪ್ಯತೆ ಕಾಪಾಡುವ ದೃಷ್ಟಿಯಿಂದ ತನಿಖೆಯನ್ನು ಬೇರೊಂದು ಠಾಣೆಗೆ ವರ್ಗಾಯಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.