ಸಂಬಂಧ ಮುಂದುವರಿಸದ್ದಕ್ಕೆ ಮಹಿಳೆಯ ಹತ್ಯೆ

First Published 11, Jan 2018, 10:47 AM IST
Bengaluru Lady Murder Case
Highlights

ಸುಂಕದಕಟ್ಟೆಯ ಕೆಬ್ಬೆಹಳ್ಳದಲ್ಲಿ ಮನೆಗೆ ನುಗ್ಗಿ ಮಹಿಳೆ ಹತ್ಯೆ ಮಾಡಿದ್ದ ಪ್ರಕರಣ ಭೇದಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ‘ಅಕ್ರಮ ಸಂಬಂಧ ಮುಂದುವರಿಸಲು ನಿರಾಕರಿಸಿದ್ದಕ್ಕೆ ಮಹಿಳೆಯ ಹತ್ಯೆ’ ನಡೆದಿದೆ ಎಂಬುದನ್ನು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

ಬೆಂಗಳೂರು (ಜ.11):  ಸುಂಕದಕಟ್ಟೆಯ ಕೆಬ್ಬೆಹಳ್ಳದಲ್ಲಿ ಮನೆಗೆ ನುಗ್ಗಿ ಮಹಿಳೆ ಹತ್ಯೆ ಮಾಡಿದ್ದ ಪ್ರಕರಣ ಭೇದಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ‘ಅಕ್ರಮ ಸಂಬಂಧ ಮುಂದುವರಿಸಲು ನಿರಾಕರಿಸಿದ್ದಕ್ಕೆ ಮಹಿಳೆಯ ಹತ್ಯೆ’ ನಡೆದಿದೆ ಎಂಬುದನ್ನು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಪ್ರಕರಣದ ಆರೋಪಿ ಪರಿಚಯಸ್ಥ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮುಬೀನ್ ಶೇಕ್ (31) ಎಂಬಾತನನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಮುಬೀನ್ ಶೇಕ್, ಡಿಸೆಂಬರ್ 26ರಂದು ಸುಂಕದಕಟ್ಟೆಯ ಕೆಬ್ಬೆಹಳ್ಳದಲ್ಲಿರುವ ಅಬ್ದುಲ್ ರಜಾಕ್ ಎಂಬುವರ ಪತ್ನಿ ತಸ್ಲೀಮಾಬಾನು (29) ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಲೆಗೆ ಕೆಡವಿದ್ದಾರೆ.

ಏನಿದು ಘಟನೆ?: ಮೃತ ತಸ್ಲೀಮಾಬಾನು ಮತ್ತು ಬಂಧಿತ ಮುಬೀನ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನರಾಗಿದ್ದರು. ಒಂದೇ ಊರಿನವರೇ ಆದ ತಸ್ಲೀಮಾಬಾನು ಮತ್ತು ಮುಬೀನ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು.

ಬಳಿಕ ಮುಬೀನ್ ದುಬೈಗೆ ಹೋಗಿ ಹಣ ಸಂಪಾದಿಸಿ ತಸ್ಲೀಮಾ ಬಾನುನನ್ನು ವಿವಾಹವಾಗಲು ನಿರ್ಧರಿಸಿದ್ದ. ಈ ವಿಚಾರವನ್ನು ಆಕೆ ಬಳಿ ಹೇಳಿಕೊಂಡಿದ್ದ ಮುಬೀನ್ ಶೇಕ್, ತಸ್ಲೀಮಾ ಜತೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದ. ಈ ನಡುವೆ ಸುಮಾರು ಎಂಟು ವರ್ಷಗಳ ಹಿಂದೆಯೇ ತಸ್ಲೀಮಾಳನ್ನು ಅವರ ಮನೆಯವರು ಅಬ್ದುಲ್ ರಜಾಕ್ ಎಂಬುವರಿಗೆ ಕೊಟ್ಟು ವಿವಾಹ ಮಾಡಿದ್ದರು.

ದಂಪತಿಗೆ ಏಳು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳಿದ್ದು, ಕೆಲ ವರ್ಷಗಳಿಂದ ನಗರದಲ್ಲೇ ವಾಸವಿದ್ದರು. ವಿವಾಹವಾದ ಬಳಿಕ ತಸ್ಲೀಮಾ, ಮುಬೀನ್ ಜತೆ ಸಂಪರ್ಕದಲ್ಲಿದ್ದರು. ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು. ಆರೋಪಿ ಜತೆ ಮಹಿಳೆ ಮೊಬೈಲ್ ಸಂಭಾಷಣೆ ನಡೆಸುತ್ತಿದ್ದರು.

ಮುಬೀನ್ ಮತ್ತು ತಸ್ಲೀಮಾ ಬಾನು ಕಳೆದ ಹದಿನೈದು ವರ್ಷಗಳ ಹಿಂದ ಪ್ರೀತಿಸುತ್ತಿದ್ದರು. ತಸ್ಲೀಮಾ ಅವರನ್ನೇ ವಿವಾಹವಾಗದಿದ್ದಕ್ಕೆ ನೊಂದಿದ್ದ ಆರೋಪಿ ಆಕೆಯ ಸಂಪರ್ಕ ಮುಂದುವರಿಸಿದ್ದ. ಮುಬೀನ್ ಅವಿವಾಹಿತನಾಗಿದ್ದು, ಆತನ ಪೋಷಕರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲೇ ವಾಸವಿದ್ದಾರೆ ಎಂದು ಅಧಿಕಾರಿ ಹೇಳಿದರು. ಮೃತ ಮಹಿಳೆಯ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಿದಾಗ ಮುಬೀನ್ ಜತೆ ಹೆಚ್ಚು ಸಂಭಾಷಣೆ ನಡೆಸಿರುವುದು ಬೆಳಕಿಗೆ ಬಂತು. ಹೀಗಾಗಿ ಆತನ ಚಲನವಲನದ ಮೇಲೆ ನಿಗಾ ಇಡಲಾಗಿತ್ತು.

ಮಹಿಳೆ ಕೊಲೆ ಬಳಿಕ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಹೈದರಾಬಾದ್‌ಗೆ ಹೋಗಿ ತಲೆ ಮರೆಸಿಕೊಂಡಿದ್ದ. ಬಳಿಕ ಹೈದರಾಬಾದ್‌ನಿಂದ ಗೋವಾಗೆ ಬಂದು, ನಂತರ ಕಾರವಾರಕ್ಕೆ ಬಂದು ತಲೆಮರೆಸಿಕೊಂಡಿದ್ದ. ಬಳಿಕ ದುಬೈಗೆ ತೆರಳಲು ಸಿದ್ಧತೆ ನಡೆಸಿದ್ದ. ಆರೋಪಿ ಮೊಬೈಲ್ ಟವರ್ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಕಾರವಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ದುಬೈನಿಂದ ಕರ್ನಾಟಕಕ್ಕೆ ಬಂದಾಗಲೆಲ್ಲಾ ಮಹಿಳೆಯನ್ನು ಭೇಟಿಯಾಗುತ್ತಿದ್ದ.

ಬೆಂಗಳೂರಿಗೆ ಬಂದು ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಿದ್ದ ಆರೋಪಿ ತಸ್ಲೀಮಾ ಬಾನು ಪತಿ ಕೆಲಸಕ್ಕೆ ತೆರಳಿದ ಬಳಿಕ ಮಹಿಳೆಯ ಮನೆಗೆ ಹೋಗುತ್ತಿದ್ದ. ಹೀಗೆ ಇಬ್ಬರ ಅನೈತಿಕ ಸಂಬಂಧ ಮುಂದುವರಿದಿತ್ತು ಎಂದು ತನಿಖಾಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಅಂತರ ಕಾಯ್ದುಕೊಂಡಿದ್ದ ಮಹಿಳೆ: ತನ್ನ ಕುಟುಂಬದ ಬಗ್ಗೆ ಯೋಚಿಸಿದ್ದ ತಸ್ಲೀಮಾ, ಮುಬೀನ್ ಜತೆ ಸಂಪರ್ಕ ಕಡಿದುಕೊಳ್ಳಲು ನಿರ್ಧರಿಸಿದ್ದರು. ಹೀಗಾಗಿ ಕಳೆದ ಆರು ತಿಂಗಳಿಂದ ಮಹಿಳೆ ಮುಬೀನ್ ಜತೆ ಅಂತರ ಕಾಯ್ದುಕೊಂಡಿದ್ದರು. ಆತನ ಕರೆ ಸ್ವೀಕರಿಸುತ್ತಿರಲಿಲ್ಲ. ಆದರೂ ಪಟ್ಟು ಬಿಡದ ಆರೋಪಿ ಮಹಿಳೆಯ ಹಿಂದೆ ಬಿದ್ದಿದ್ದ. ಈ ನಡುವೆ ಕಳೆದ ನಾಲ್ಕು ತಿಂಗಳ ಹಿಂದೆ ತಸ್ಲೀಮಾ ಕುಟುಂಬ ಸುಂಕದಕಟ್ಟೆಯಲ್ಲಿರುವ ಕೆಬ್ಬೆಹಳ್ಳದಲ್ಲೇ ಬೇರೆಡೆಗೆ ಮನೆ ಸ್ಥಳಾಂತರಿಸಿದ್ದರು. ಡಿ.26 ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ ಸುಂಕದಕಟ್ಟೆಯಲ್ಲಿರುವ ‘ಬಾಲಾಜಿ’ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ.

ಸ್ಥಳೀಯರ ಬಳಿ ವಿಚಾರಿಸಿ ತಸ್ಲೀಮಾ ಅವರ ಮನೆ ಪತ್ತೆ ಹಚ್ಚಿದ್ದ. ಮುಬೀನ್ ಅಂದು ಬೆಳಗ್ಗೆ ತಸ್ಲೀಮಾ ಅವರ ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಮಹಿಳೆಯ ಮನೆಗೆ ನುಗ್ಗಿದ್ದ ಮುಬೀನ್ ಮಹಿಳೆ ಜತೆ ಮಾತುಕತೆ ನಡೆಸಿದ್ದ.ಈ ವೇಳೆ ಮಹಿಳೆ, ಮುಬೀನ್ ಜತೆ ಸಂಬಂಧ ಮುಂದುವರಿಸಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ ಮನೆಯಲ್ಲಿಯೇ ಇದ್ದ ಚಾಕುವಿನಿಂದ ಮಹಿಳೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಮಹಿಳೆಯ ಮಕ್ಕಳು ಡಿ.26ರಂದು ಶಾಲೆಯಿಂದ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದರು.

loader