ನಮ್ಮ  ಹೆಮ್ಮೆ | ಮಕ್ಕಳ ಹಕ್ಕುಗಳು ಕುರಿತು ಭಾಷಣ ಮಾಡುವ ಅಪರೂಪದ ಅವಕಾಶ | ನ.20ರಂದು ಅಂತಾರಾಷ್ಟ್ರೀಯ ಮಕ್ಕಳ ಹಕ್ಕು ದಿನಾಚರಣೆ

ಬೆಂಗಳೂರು: ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆ ಪ್ರಯುಕ್ತ ಸಂಸತ್‌ನಲ್ಲಿ ಮಕ್ಕಳ ಹಕ್ಕುಗಳ ಕುರಿತು ಭಾಷಣ ಮಾಡುವ ಅಪರೂಪ ಹಾಗೂ ಹೆಮ್ಮೆ ಪಡುವ ಅವಕಾಶ ರಾಜ್ಯದ ವಿದ್ಯಾರ್ಥಿನಿಗೆ ಬಂದಿದೆ.

ಬೆಂಗಳೂರಿನ ರಾಜಾಜಿನಗರದ ಕೊಳೆಗೇರಿ ನಿವಾಸಿ ವಿ.ಕನಕಾ ಎಂಬುವರಿಗೆ ಈ ಸುವರ್ಣಾವಕಾಶ ಒದಗಿ ಬಂದಿದೆ. ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಸಂಸತ್ತಿನಲ್ಲಿ ಭಾಷಣ ಮಾಡುವ ವಿಶಿಷ್ಟ ಅವಕಾಶಕ್ಕೆ ಈಕೆ ಭಾಜನ ಆಗಿದ್ದಾರೆ.

‘ಸ್ಪರ್ಶ’ ಸಂಸ್ಥೆ ದತ್ತು ಪಡೆದಿರುವ ಕನಕಾ ಸದ್ಯ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೂ ಹಾಗೂ ಸಮಸ್ಯೆಗಳನ್ನು ಸಂಸತ್‌ನಲ್ಲಿ ಮಾತನಾಡಲಿದ್ದಾರೆ.

ಬಾಲಕಾರ್ಮಿಕ ಮಕ್ಕಳನ್ನು ಕಂಡಾಗ ಮರುಗಿದರೆ ಸಾಲದು. ಅವರಿಗೆ ಅನ್ನ ಬಟ್ಟೆ ಕೊಟ್ಟು ಸಾಕಬೇಕೆಂದಿಲ್ಲ, ಅಂತಹವರನ್ನು ನೋಡಿಕೊ ಳ್ಳುವ ಸಂಸ್ಥೆಗಳಿವೆ ಅವುಗಳಿಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ನೀವು ಒಂದು ಮಗುವಿನ ಭವಿಷ್ಯ ರೂಪಿಸಿದಂತಾಗುತ್ತದೆ.

ವಿ. ಕನಕಾ

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಲವಾರು ಕಾಯಿದೆಗಳಿವೆ. ಆದರೂ ದಿನದಿಂದ ದಿನಕ್ಕೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ರಾಜ್ಯದಲ್ಲಿ ಶೇ.23.2 ಬಾಲ್ಯ ವಿವಾಹ ನಡೆಯುತ್ತಿದೆ. ಹಾಗಾದರೆ ಕಾಯಿದೆಗಳು ಏನು ಮಾಡುತ್ತಿವೆ? ಹೆಸರಿಗೆ ಮಾತ್ರ ಕಾಯಿದೆಗಳಿರಬಾರದು. ಅವು ಸದಾ ಕಾರ್ಯನಿರ್ವಹಿಸಬೇಕು ಎಂದರು.

ನವೆಂಬರ್ 20ರಂದು ನಡೆಯುವ ಸಭೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ‘ಪಾರ್ಲಿಮೆಂಟರಿ ಗ್ರೂಪ್ಸ್ ಫಾರ್ ಚಿಲ್ಡ್ರನ್’ ಜತೆ ಚರ್ಚೆ ನಡೆಸಲಿದ್ದೇನೆ. ರಾಜ್ಯದಲ್ಲಿ ಮಕ್ಕಳ ಮೇಲೆ ನಡೆಯುವ ಪ್ರತಿಯೊಂದು ದೌರ್ಜನ್ಯದ ಕುರಿತು ಮಾತನಾಡಲು ರಾಜ್ಯವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದಳು.

ಇದಕ್ಕೂ ಮುನ್ನ ಮಾತನಾಡಿದ ‘ಸ್ಪರ್ಶ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥ್, ತಂದೆ ಅಂಗವಿಕಲನಾಗಿದ್ದು, ತಾಯಿಯನ್ನು ಕಳೆದುಕೊಂಡ ಕನಕ ಬಾಲ್ಯದಲ್ಲೇ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದಳು. ಸಹೋದರಿ, ಸಹೋದರನನ್ನು ಸಾಕುವ ಸಲುವಾಗಿ ಕನಕ ಮನೆಗೆಲಸಕ್ಕೆ ಹೋಗುತ್ತಿದ್ದಳು. ಸ್ಪರ್ಶ ಸಂಸ್ಥೆಯು ಆಕೆಯನ್ನು ಬಾಲಕಾರ್ಮಿಕ ಸಮೀಕ್ಷೆಯ ಸಮಯದಲ್ಲಿ ಗುರುತಿಸಿ ಆಶ್ರಯ ನೀಡಿತು. ಬಿಜಿಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ಕನಕ ವಿಜ್ಞಾನಿಯಾಗಬೇಕೆಂಬ ಕನಸಿನೊಂದಿಗೆ ಓದು ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾಳೆ. ಭಾಷಣ ಹಾಗೂ ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಒಂದು ದಿನಕ್ಕೆ ಸಂಸತ್ತಿನ ಸದಸ್ಯೆಯಾಗಿಯೇ ಗುರುತಿಸಿಕೊಳ್ಳುತ್ತಾಳೆ ಎಂದರು.