ಬೆಂಗಳೂರು (ಜು. 26): ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ವಾಟ್ಸಪ್‌, ಟ್ವಿಟ್ಟರ್‌ಗಳಲ್ಲಿ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿದ್ದ ಬೆಂಗಳೂರು ನಗರ ಪೊಲೀಸರು ಇದೀಗ ‘ಶೇರ್‌ಚಾಟ್‌’ನಲ್ಲಿ ಖಾತೆ ತೆರೆಯುವ ಮೂಲಕ ಇನ್ನಷ್ಟುಜನಸ್ನೇಹಿಯಾಗಲು ಮುಂದಾಗಿದ್ದಾರೆ.

ಇನ್ಫೆಂಟ್ರಿ ರಸ್ತೆಯಲ್ಲಿರುವ ಆಯುಕ್ತರ ಕಚೇರಿಯಲ್ಲಿ ಗುರುವಾರ ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ‘ಶೇರ್‌ಚಾಟ್‌’ ಖಾತೆಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಆಯುಕ್ತರು, ರಾಜಧಾನಿ ಜನತೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌, ಯುಟ್ಯೂಬ್‌, ಇನ್‌ಸ್ಟ್ರಾಗ್ರಾಂ ಹಾಗೂ ವಾಟ್ಸಪ್‌ ದೂರು ಸಲ್ಲಿಸುತ್ತಿದ್ದರು. ಆದರೆ, ಈ ದೂರನ್ನು ರಾಜ್ಯದ ಆಡಳಿತ ಭಾಷೆ ಕನ್ನಡದಲ್ಲಿ ವ್ಯವಹರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕನ್ನಡದಲ್ಲಿಯೇ ಆಯ್ಕೆ ಒದಗಿಸುವ ‘ಶೇರ್‌ಚಾಟ್‌’ನಲ್ಲಿ @blrcitypolice# ಎಂಬ ಖಾತೆಗೆ ತೆರೆದು ನಗರದ ಜನರಿಗೆ ಇನ್ನಷ್ಟುಹತ್ತಿರವಾಗುತ್ತಿದ್ದೇವೆ ಎಂದು ಹೇಳಿದರು.

ಸಾರ್ವಜನಿಕರು ತಮ್ಮ ದೂರುಗಳು ಅಥವಾ ನಗರದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಯನ್ನು ಸಂದೇಶ, ವಿಡಿಯೋ, ಆಡಿಯೋ ಚಿತ್ರ ಅಥವಾ ಈ ಅಪ್ಲಿಕೇಷನ್‌ನಲ್ಲಿ ಲಭ್ಯವಿರುವ ರೂಪದಲ್ಲಿ ನೇರವಾಗಿ ಬೆಂಗಳೂರು ನಗರ ಪೊಲೀಸ್‌ ಘಟಕಕ್ಕೆ ಸಲ್ಲಿಸಬಹುದು. ದೂರು ಸ್ವೀಕರಿಸುವ ಸಿಬ್ಬಂದಿ ಸಹ ಕನ್ನಡದಲ್ಲೇ ಸ್ಪಂದಿಸಲಿದ್ದಾರೆ ಎಂದು ತಿಳಿಸಿದರು.

ವೈಯಕ್ತಿಕ ವಿವರ ಗೌಪ್ಯ: ಅಲೋಕ್‌

ಶೇರ್‌ಚಾಟ್‌ ಆ್ಯಪ್‌ ಅನ್ನು ಪ್ಲೇರ್‌ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡು ಖಾತೆ ತೆರೆಯಬೇಕು. ನಂತರ ‘ಃಚ್ಝ್ಟ್ಚಿಜಿಠಿypಟ್ಝಜ್ಚಿಛಿ ್ಫ ಬೆಂಗಳೂರು ನಗರ ಪೊಲೀಸ್‌’ ಖಾತೆಯನ್ನು ಫಾಲೋ ಮಾಡಬೇಕು. ಬಳಿಕ ವೈಯಕ್ತಿಕ ಹಾಗೂ ಸಾರ್ವಜನಿಕವಾಗಿಯೂ ದೂರು ಅಥವಾ ಸಲಹೆ, ಸೂಚನೆಗಳನ್ನು ನೀಡಬಹುದು.

ಪ್ರಮುಖವಾಗಿ ಸಾರ್ವಜನಿಕರು ತಮ್ಮ ಕಣ್ಣೆದುರ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಫೋಟೋ ಅಥವಾ ವಿಡಿಯೋ ಚಿತ್ರೀಕರಣ ಮಾಡಿ, ಸ್ಥಳ ನಮೂದಿಸಿ ಬೆಂಗಳೂರು ನಗರ ಪೊಲೀಸ್‌ ಖಾತೆಗೆ ಟ್ಯಾಗ್‌ ಮಾಡಬೇಕು.

ಈ ಆಧಾರದ ಮೇಲೆ ಖಾತೆ ನಿರ್ವಹಿಸುವ ಸಿಬ್ಬಂದಿ ಕೂಡಲೇ ನಿಮಗೆ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಲಿದ್ದಾರೆ. ವೈಯಕ್ತಿಕವಾಗಿ ದೂರು ಅಥವಾ ಮಾಹಿತಿ ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಆಲೋಕ್‌ ಕುಮಾರ್‌ ಮಾಹಿತಿ ನೀಡಿದರು.