ನವದೆಹಲಿ (ಮಾ. 22):  2018ರ ವಾಸಯೋಗ್ಯ ನಗರಗಳ ಪಟ್ಟಿಯನ್ನು ‘ಮರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌’ ಸಂಸ್ಥೆ ಪ್ರಕಟಿಸಿದ್ದು, ಸತತ 4ನೇ ವರ್ಷವೂ ಹೈದರಾಬಾದ್‌ ‘ಭಾರತದ ಅತಿ ವಾಸಯೋಗ್ಯ ನಗರ’ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೈದರಾಬಾದ್‌ ವಿಶ್ವದಲ್ಲಿ 142ನೇ ಸ್ಥಾನ ಹೊಂದಿದ್ದರೆ ಭಾರತದ ನಗರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ ಕಳೆದ ಬಾರಿ 151ನೇ ಸ್ಥಾನದಲ್ಲಿದ್ದ ಪುಣೆ 144ನೇ ಸ್ಥಾನಕ್ಕೇರಿದ್ದು, ಭಾರತದ ನಗರಗಳ ಪೈಕಿ ಎರಡನೇ ಸ್ಥಾನದಲ್ಲಿದೆ.

ಇನ್ನು ವಿಶ್ವದಲ್ಲಿ ಬೆಂಗಳೂರು 149ನೇ ಸ್ಥಾನದಲ್ಲಿದ್ದು, ಭಾರತದ ನಗರಗಳ ಪೈಕಿ ಮೂರನೇ ಸ್ಥಾನ ಪಡೆದಿದೆ. ಇನ್ನುಳಿದಂತೆ ನಂತರದ ಸ್ಥಾನಗಳಲ್ಲಿ ಚೆನ್ನೈ (151), ಮುಂಬೈ (154), ಕೋಲ್ಕತಾ (160) ಹಾಗೂ ನವದೆಹಲಿ (162) ಇವೆ. ಕಳೆದ ವರ್ಷ ಬೆಂಗಳೂರು 177ನೇ ಸ್ಥಾನದಲ್ಲಿತ್ತು. ಈಗ ಅದರ ಸ್ಥಾನ ಸುಮಾರು 28 ಸ್ಥಾನಗಳಷ್ಟುಸುಧಾರಿಸಿದೆ.

ವಿಶ್ವದಲ್ಲಿ ವಿಯೆನ್ನಾ ನಂ.1:ಆಸ್ಟ್ರಿಯಾದ ವಿಯೆನ್ನಾ ವಿಶ್ವದಲ್ಲೇ ಅತಿ ವಾಸಯೋಗ್ಯ ನಗರ ಎಂಬ ಹೆಗ್ಗಳಿಕೆಗೆ ಸತತ 9ನೇ ವರ್ಷ ಪ್ರಾಪ್ತಿಯಾಗಿದೆ. ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಆಕ್ಲಂಡ್‌, ಜರ್ಮನಿಯ ಮ್ಯೂನಿಕ್‌ ಇವೆ. ಪ್ಯಾರಿಸ್‌ 39, ಲಂಡನ್‌ 41, ನ್ಯೂಯಾರ್ಕ್ 45, ವಾಷಿಂಗ್ಟನ್‌ 48 ಹಾಗೂ ದುಬೈ 74ನೇ ಸ್ಥಾನ ಪಡೆದಿವೆ. ಪಾಕಿಸ್ತಾನದ ಇಸ್ಲಾಮಾಬಾದ್‌ 195, ಲಾಹೋರ್‌ 202, ಕರಾಚಿ 205ನೇ ಸ್ಥಾನದಲ್ಲಿವೆ. ಬಾಗ್ದಾದ್‌ 231ನೇ ಸ್ಥಾನದಲ್ಲಿದ್ದು ವಿಶ್ವದ ಅತಿ ಕಳಪೆ ವಾಸಯೋಗ್ಯ ನಗರ ಎನ್ನಿಸಿಕೊಂಡಿದೆ. ಬಾಂಗ್ಲಾದೇಶದ ಢಾಕಾ 216 ಹಾಗೂ ಸಿರಿಯಾದ ಡಮಾಸ್ಕಸ್‌ 225ನೇ ಶ್ರೇಯಾಂಕ ಪಡೆದಿದ್ದು ವಾಸಿಸಲು ಯೋಗ್ಯವಲ್ಲ ಎನ್ನಿಸಿವೆ.

ಮಾನದಂಡ ಏನು?

ಸಾಮಾಜಿಕ ಪರಿಸರ, ರಾಜಕೀಯ ಪರಿಸ್ಥಿತಿ, ಆರ್ಥಿಕತೆ, ಸಂಸ್ಕೃತಿ, ವೈದ್ಯಕೀಯ ವ್ಯವಸ್ಥೆ, ಶಿಕ್ಷಣ, ಸಾರ್ವಜನಿಕ ಸೇವೆ, ವಸತಿ ವ್ಯವಸ್ಥೆ, ಮೂಲಸೌಕರ್ಯ ಇತ್ಯಾದಿ 39 ಮಾನದಂಡಗಳನ್ನು ಇಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ.