Asianet Suvarna News Asianet Suvarna News

ಬೆಂಗಳೂರಿಗರೇ ಎಚ್ಚರ : ಇಲ್ಲಿವೆ ಮಾರಣಾಂತಿಕ ಸೊಳ್ಳೆಗಳು!

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮಾರಣಾಂತಿಕ ರೋಗಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಕಾರಣವಾಗುತ್ತಿರುವುದು ಡೇಂಜರಸ್ ಸೊಳ್ಳೆಗಳು. 

Bengalureans Be Aware Of This Dangerous Mosquitoes
Author
Bengaluru, First Published Oct 21, 2018, 10:16 AM IST

ಬೆಂಗಳೂರು :  ಎಚ್‌1ಎನ್‌1 (ಹಂದಿ ಜ್ವರ) ನಗರದಲ್ಲಿ ಮರಣ ಮೃದಂಗ ಮೊಳಗಿಸಿದ ಬಳಿಕ ಡೆಂಘಿ, ಚಿಕೂನ್‌ಗುನ್ಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳ ಭೀತಿ ತೀವ್ರಗೊಳ್ಳುತ್ತಿದೆ. ಇದೀಗ ಸತತ ಮಳೆ, ತ್ಯಾಜ್ಯ ಸಮಸ್ಯೆಯಿಂದ ಸೊಳ್ಳೆಗಳ ಕಾಟ ಮತ್ತಷ್ಟುಹೆಚ್ಚಾಗಲಿದ್ದು, ರೋಗಗಳ ಭೀತಿ ಮತ್ತಷ್ಟುತೀವ್ರಗೊಂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 99 ಹಂದಿಜ್ವರ ಪ್ರಕರಣಗಳು ದೃಢಪಟ್ಟಿದ್ದು, ಹಂದಿಜ್ವರ ಮೂರು ಮಂದಿಯನ್ನು ಬಲಿ ಪಡೆದಿದೆ. ಇದಕ್ಕೆ ಸೊಳ್ಳೆಗಳು ಪ್ರಮುಖ ಕಾರಣ ಅಲ್ಲದಿದ್ದರೂ, ಸೊಳ್ಳೆಗಳಿಂದಲೇ ಹರಡುವ ಸಾಂಕ್ರಾಮಿಕ ಕಾಯಿಲೆಗಳೂ ಸಹ ನಗರದಲ್ಲಿ ಹೆಚ್ಚಾಗುತ್ತಿರುವುದು ಮತ್ತಷ್ಟುಭೀತಿ ಉಂಟು ಮಾಡಿದೆ.

ಕಳೆದ ಎರಡು ತಿಂಗಳಿಂದ ನಗರಾದ್ಯಂತ ಸೊಳ್ಳೆಗಳ ಸಮಸ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡೆಂಘಿ, ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಆದರೂ, ಬಿಬಿಎಂಪಿ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಮಳೆ ಬಂದಾಗ ಖಾಲಿ ಪ್ರದೇಶದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಸೃಷ್ಟಿಯಾಗುತ್ತವೆ. ಹಬ್ಬದ ಹಿನ್ನೆಲೆಯಲ್ಲಿ ಕಸದ ಸಮಸ್ಯೆಯೂ ಹೆಚ್ಚಾಗಿರುವುದು ಸೊಳ್ಳೆಗಳ ಉತ್ಪಾದನೆಗೆ ಮತ್ತಷ್ಟುಪೂರಕ ವಾತಾವರಣ ಸೃಷ್ಟಿಸಿದಂತಾಗಿದೆ.

ಅದರಲ್ಲೂ ಸಿಹಿ ನೀರಿನಲ್ಲಿ ಸೃಷ್ಟಿಯಾಗುವ ಸೊಳ್ಳೆಗಳು ಈಗ ಡೆಂಘಿ, ಚಿಕೂನ್‌ಗುನ್ಯಾ, ವೈರಲ್‌ ಫಿವರ್‌, ಆರ್ಥರೈಟೀಸ್‌ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಈ ಮಾದರಿಯ ಸೊಳ್ಳೆಗಳು ಪ್ರಸ್ತುತ ನಗರದಲ್ಲಿ ಹೆಚ್ಚಾಗಿದ್ದು, ಜನರು ಆತಂಕದಲ್ಲಿ ಜೀವನ ಮಾಡುವಂತಾಗಿದೆ. ಜನವರಿಯಿಂದ ಅ.16ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2,753 ಪ್ರಕರಣಗಳ ರಕ್ತ ಪರೀಕ್ಷೆ ನಡೆಸಿದ್ದು, 620 ಮಂದಿಗೆ ಡೆಂಘಿ ಖಚಿತಪಟ್ಟಿದೆ. 2177 ಮಂದಿಗೆ ಚಿಕೂನ್‌ಗುನ್ಯಾ ಪರೀಕ್ಷೆ ನಡೆಸಿದ್ದು, 146 ಮಂದಿಗೆ ಚಿಕೂನ್‌ಗುನ್ಯಾ ಖಚಿತಪಟ್ಟಿದೆ. ಇವುಗಳ ಸಂಖ್ಯೆ ಮತ್ತಷ್ಟುದುಪ್ಪಟ್ಟಾಗುತ್ತಿವೆ.

ನಗರಾದ್ಯಂತ ಸಮಸ್ಯೆ:

ಕಟ್ಟಡ ನಿರ್ಮಾಣ ಪ್ರದೇಶ, ಖಾಲಿ ನಿವೇಶನಗಳು, ಚರಂಡಿ, ತ್ಯಾಜ್ಯ ವಿಂಗಡಣಾ ಘಟಕ ಸುತ್ತಮುತ್ತಲ ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಇದೆ. ಇಂಥ ಕಡೆ ಜನರು ಸೊಳ್ಳೆ ಪರದೆ, ಬತ್ತಿ, ಸ್ಪ್ರೇಗಳ ನಡುವೆ ಜೀವನ ಮಾಡುವಂತಾಗಿದೆ. ಕೆ.ಆರ್‌.ಪುರ, ಕೆಂಗೇರಿ, ಉಲ್ಲಾಳ, ಮಾಗಡಿ ರಸ್ತೆ ಸುಂಕದಕಟ್ಟೆಪ್ರದೇಶದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇಲ್ಲಿನ ಸಾರ್ವಜನಿಕರು ಅನೇಕರು ಸೊಳ್ಳೆ ಕಚ್ಚಿಸಿಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಲಗ್ಗೆರೆ ಮಾರ್ಗದಲ್ಲಿನ ಪೈಪ್‌ಲೈನ್‌ ರಸ್ತೆ ಪ್ರದೇಶದಲ್ಲೂ ಇದೇ ಪರಿಸ್ಥಿತಿ ಇದೆ.

ಜತೆಗೆ ನಾಯಂಡಹಳ್ಳಿ, ಆರ್‌.ಆರ್‌.ನಗರ, ಕೆ.ಆರ್‌.ಪುರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಪ್ರದೇಶದಲ್ಲಿ ಸೊಳ್ಳೆಗಳು ಭಾರಿ ಹಾವಳಿ ಸೃಷ್ಟಿಸುತ್ತಿವೆ. ಇಲ್ಲೆಲ್ಲ ರಿಯಲ್‌ ಎಸ್ಟೆಟ್‌ ಕಾಮಗಾರಿ ಜೋರಾಗಿ ನಡೆಯುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ಜಾಸ್ತಿ ಇದೆ.

ನಗರದೊಳಗಿನ ಆರ್‌.ಟಿ.ನಗರ, ಗಂಗಾನಗರ, ಸಂಜಯ್‌ ನಗರ, ವೈಯಾಲಿಕಾವಲ್‌ ಪ್ರದೇಶದ ಜನರೂ ಸೊಳ್ಳೆಗಳು ನಮ್ಮನ್ನು ಕಾಡುತ್ತಿದೆ ಎಂದು ದೂರುತ್ತಿದ್ದಾರೆ. ಲಗ್ಗೆರೆ ಬಳಿಯ ಚೌಡೇಶ್ವರಿನಗರ, ಕೆಂಪೇಗೌಡನಗರ, ವಿಜಯನಗರ ಬಳಿಯ ಪಟ್ಟೆಗಾರಪಾಳ್ಯ ಮುಖ್ಯರಸ್ತೆ, ಸುಮ್ಮನಹಳ್ಳಿಯ ಮೇಲುರಸ್ತೆ ಜನರಿಗೂ ಸೊಳ್ಳೆ ನಿರಂತರವಾಗಿ ಬಾಧಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಜತೆಗೆ, ಈ ಭಾಗದಲ್ಲಿ ಹೆಚ್ಚು ಡೆಂಘಿ ಪ್ರಕರಣಗಳು ವರದಿಯಾಗಿರುವುದು ಆರೋಪಕ್ಕೆ ಪುಷ್ಠಿ ನೀಡಿದೆ.

ಪ್ರಸ್ತುತ ಫಾಗಿಂಗ್‌ ಮಾಡುತ್ತಿಲ್ಲ!

ಮಳೆಗಾಲದಲ್ಲಿ ಕೊಳೆಗೇರಿ ಪ್ರದೇಶ ಹಾಗೂ ಸೊಳ್ಳೆ ಉತ್ಪತ್ತಿ ಹೆಚ್ಚಿರುವ ಪ್ರದೇಶದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡುವುದು ಬಿಬಿಎಂಪಿಯ ಕರ್ತವ್ಯ. ಆದರೆ, ಈ ವರ್ಷ ಆ ಕೆಲಸವನ್ನು ಬಿಬಿಎಂಪಿ ಮರೆತು ಬಿಟ್ಟಿದೆ. ಹೀಗಾಗಿ ಸೊಳ್ಳೆಗಳ ಪ್ರಮಾಣ ವಿಪರೀತ ಜಾಸ್ತಿಯಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಈ ಬಗ್ಗೆ ಬಿಬಿಎಂಪಿಗೆ ಪ್ರಶ್ನಿಸಿದದರೆ, ಸೊಳ್ಳೆಗಳ ನಿಯಂತ್ರಣಕ್ಕಾಗಿ ಬಿಬಿಎಂಪಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ಔಷಧ ಸಿಂಪಡಣೆ, ಫಾಗಿಂಗ್‌ ಮಾಡಲಾಗುತ್ತಿದೆ. ಪ್ರತಿ ವಾರ್ಡ್‌ಗೆ ಮೂವರು ಸಿಬ್ಬಂದಿ ಇದ್ದು, ಪ್ರತಿ ಉಪವಿಭಾಗಗಳಲ್ಲಿ ಒಂದೊಂದು ಫಾಗಿಂಗ್‌ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಪಾಲಿಕೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ದೂರು ಬಂದ ಕಡೆಗಳಲ್ಲಿ ಸಮೀಕ್ಷೆ ನಡೆಸಿ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುತ್ತಾರೆ.

ಸೊಳ್ಳೆಗಳ ಉತ್ಪತ್ತಿ ತಾಣ ಗುರುತಿಸಿ ಅವುಗಳ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕಾಗಿಯೇ .8 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರಿಂದ ಔಷಧಗಳನ್ನು ಖರೀದಿಸಿ ಅಗತ್ಯ ಇರುವ ಕಡೆಗಳಲ್ಲಿ ಸಿಂಪಡಿಸಲಾಗುತ್ತಿದೆ.

-ಡಾ.ಮನೋರಂಜನ್‌ ಹೆಗಡೆ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ.

ಎಚ್ಚರಿಕಾ ಕ್ರಮಗಳು

* ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ, ಮನೆಯಲ್ಲಿ ನೀರಿನ ಮೂಲಗಳ ಶುಭ್ರತೆಗೆ ಒತ್ತು ನೀಡಬೇಕು

* ಮನೆ ತಾರಸಿ ಮೇಲೆ, ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು

* ಬೆಳಗ್ಗೆ ಹಾಗೂ ಸಂಜೆ ವೇಳೆ ಸೊಳ್ಳೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕು

* ಮೈ ತುಂಬಾ ಬಟ್ಟೆಧರಿಸುವುದು, ಸೊಳ್ಳೆ ಪರದೆ ಮತ್ತಿತರ ವ್ಯವಸ್ಥೆಗಳಿಂದ ಸೊಳ್ಳೆಗಳ ಕಡಿತದಿಂದ ಪಾರಾಗಬೇಕು

* ಟೈರ್‌, ಟ್ಯೂಬ್‌, ತೆಂಗಿನ ಚಿಪ್ಪು, ಪ್ಲಾಸ್ಟಿಕ್‌ ವಸ್ತುಗಳಲ್ಲಿ ಮಳೆ ನೀರು ಶೇಖರಣೆಗೊಳ್ಳದಂತೆ ಕ್ರಮ

* ತಿಳಿ ನೀರಿನಲ್ಲಿ ಡೆಂಘಿ ಹರಡುವ ಸೊಳ್ಳೆ ಮೊಟ್ಟೆಇಡುವುದರಿಂದ ನೀರು ನಿಲ್ಲದಂತೆ ಎಚ್ಚರವಹಿಸಿ

Follow Us:
Download App:
  • android
  • ios