ಬೇನಾಮಿ ಪ್ರಕರಣಗಳು ಬಿದ್ದು ಹೋಗುವ ಆತಂಕದಲ್ಲಿವೆ

Benami Property Case may fall down
Highlights

ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಸಹಸ್ರಾರು ಕೋಟಿ ರು. ಮೌಲ್ಯದ ನೂರಾರು ಬೇನಾಮಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲೇನೋ ಸಫಲವಾಗಿದೆ. ಆದರೆ ಮುಂದಿನ ಹಂತದ ಪ್ರಕ್ರಿಯೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳದ ಕಾರಣ 780 ಪ್ರಕರಣಗಳು ಬಿದ್ದು ಹೋಗುವ ಆತಂಕ ವ್ಯಕ್ತವಾಗತೊಡಗಿದೆ.

ನವದೆಹಲಿ (ಜೂ. 04): ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಸಹಸ್ರಾರು ಕೋಟಿ ರು. ಮೌಲ್ಯದ ನೂರಾರು ಬೇನಾಮಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲೇನೋ ಸಫಲವಾಗಿದೆ. ಆದರೆ ಮುಂದಿನ ಹಂತದ ಪ್ರಕ್ರಿಯೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳದ ಕಾರಣ 780 ಪ್ರಕರಣಗಳು ಬಿದ್ದು ಹೋಗುವ ಆತಂಕ ವ್ಯಕ್ತವಾಗತೊಡಗಿದೆ.

1988 ರ ಬೇನಾಮಿ ಆಸ್ತಿ ವಹಿವಾಟು ಕಾಯ್ದೆಗೆ 2016 ರ ನ.1 ರಂದು ಕೇಂದ್ರ ಸರ್ಕಾರ ತಿದ್ದುಪಡಿ ತಂದಿತ್ತು. ಅದಾದ ಏಳೇ ದಿನದಲ್ಲಿ ಅಪನಗದೀಕರಣದಂತಹ ಕ್ರಾಂತಿಕಾರಕ ನಿರ್ಧಾರ ಕೈಗೊಂಡು ಬೇನಾಮಿ ಆಸ್ತಿ ಹೊಂದಿದವರ ಬೇಟೆ ನಡೆಸಿತ್ತು. ಬೇನಾಮಿ ಕಾಯ್ದೆಯ ಸೆಕ್ಷನ್ 7 ರ ಪ್ರಕಾರ, ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾದರೆ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಿ, ಆಸ್ತಿಯ ಮಾರುಕಟ್ಟೆಯ ಮೌಲ್ಯದ ಶೇ.25 ರಷ್ಟು ದಂಡ ವಿಧಿಸಲು ಅವಕಾಶವಿದೆ. ಆದರೆ ಆ ಪ್ರಕ್ರಿಯೆಗೆ ಹೋಗುವ ಮುನ್ನ ಪ್ರಕರಣದ ವಿಚಾರಣೆ ನಡೆಸಲು ತ್ರಿಸದಸ್ಯ ಪ್ರಾಧಿಕಾರ ರಚಿಸಬೇಕು. ಕೇಂದ್ರ ಸರ್ಕಾರ ಇಲ್ಲೇ ಎಡವಿದೆ.

ನೂರಾರು ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಿ ಒಂದೂವರೆ ವರ್ಷವಾಗಿದ್ದರೂ, ಅವುಗಳ ವಿಚಾರಣೆಗೆ ಯಾವುದೇ ಪ್ರಾಧಿಕಾರ ರಚಿಸಿಲ್ಲ. ತಾತ್ಕಾಲಿಕ ವ್ಯವಸ್ಥೆಯಾಗಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ನಿಯೋಜನೆಗೊಂಡಿರುವ ಪ್ರಾಧಿಕಾರಕ್ಕೇ ಪ್ರಕರಣಗಳನ್ನು ರವಾನಿಸುತ್ತಿದೆ. ಆ ಪ್ರಾಧಿಕಾರದಲ್ಲಿ ಈಗಾಗಲೇ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಜತೆಗೆ ಪ್ರಕರಣಗಳ ಹೊರೆಯೂ ದೊಡ್ಡದಿದೆ.

ತೆರಿಗೆ ಇಲಾಖೆ ರವಾನಿಸಿದ್ದ 860 ಪ್ರಕರಣಗಳ ಪೈಕಿ 80  ಪ್ರಕರಣಗಳನ್ನಷ್ಟೇ ಈ ಪ್ರಾಧಿಕಾರ ವಿಚಾರಣೆ ನಡೆಸಿದೆ. ಇನ್ನೂ ೭೮೦ ಪ್ರಕರಣಗಳ ವಿಚಾರಣೆ ನಡೆಯಬೇಕಿದೆ. ಈ ಪ್ರಕರಣಗಳಲ್ಲಿ ಸಿಲುಕಿರುವ ಬೇನಾಮಿ ಆಸ್ತಿಯ ಮೌಲ್ಯ ಸಹಸ್ರಾರು ಕೋಟಿ ರು. ಲೆಕ್ಕದಲ್ಲಿದೆ. ಖ್ಯಾತನಾಮರು, ರಾಜಕಾರಣಿಗಳು, ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿದೆ. ಬೇನಾಮಿ ಕಾಯ್ದೆಯಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಒಂದು ವರ್ಷದೊಳಗೆ ಆ ಕುರಿತ ಆದೇಶವನ್ನು ತೆರಿಗೆ ಇಲಾಖೆ ಕಾಯಗೊಂಳಿಸಬೇಕು.

ಇಲ್ಲದೇ ಹೋದರೆ ಅವಧಿ ಮೀರಿದ ಪ್ರಕರಣವಾಗುವ ಅಥವಾ ಪ್ರಕರಣದ ಸಿಂಧುತ್ವವೇ ರದ್ದಾಗುವ ಅಪಾಯವಿದೆ. ಅಲ್ಲದೆ ಈ ಸಂಬಂಧ ಕಾನೂನು ಹೋರಾಟಗಳು ಆರಂಭವಾಗಿ, ಸರ್ಕಾರ ಮುಜುಗರ ಎದುರಿಸಬೇಕಾದ ಸನ್ನಿವೇಶವೂ ಸೃಷ್ಟಿಯಾಗುವ ಸಂಭವವೂ ಇದೆ.

loader