ರಾಜ್ಯದಲ್ಲೇ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಗಡಿ ಭಾಗದ ಬೆಳಗಾವಿ ಜಿಲ್ಲೆಯ ರಾಜಕಾರಣ ವಿಶಿಷ್ಟವಾದದ್ದು. ಜಿದ್ದಾಜಿದ್ದಿಯ ಕುಟುಂಬ ರಾಜಕಾರಣ. ಆ ರಾಜಕಾರಣವನ್ನೂ ಮೀರಿದ ಸ್ನೇಹವನ್ನು ಇಲ್ಲಿ ಕಾಣಬಹುದು. ಈ ಬಾರಿ ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳಲ್ಲಿ ಆಕಾಂಕ್ಷಿಗಳ ರೇಸ್ ದೊಡ್ಡದಿದೆ. ಒಟ್ಟು 18 ವಿಧಾನಸಭೆ ಕ್ಷೇತ್ರಗಳಿದ್ದು, ಬೆಳಗಾವಿ, ಚಿಕ್ಕೋಡಿ 2 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿವೆ.

ಬೆಳಗಾವಿ(ಎ.29): ರಾಜ್ಯದಲ್ಲೇ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಗಡಿ ಭಾಗದ ಬೆಳಗಾವಿ ಜಿಲ್ಲೆಯ ರಾಜಕಾರಣ ವಿಶಿಷ್ಟವಾದದ್ದು. ಜಿದ್ದಾಜಿದ್ದಿಯ ಕುಟುಂಬ ರಾಜಕಾರಣ. ಆ ರಾಜಕಾರಣವನ್ನೂ ಮೀರಿದ ಸ್ನೇಹವನ್ನು ಇಲ್ಲಿ ಕಾಣಬಹುದು. ಈ ಬಾರಿ ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳಲ್ಲಿ ಆಕಾಂಕ್ಷಿಗಳ ರೇಸ್ ದೊಡ್ಡದಿದೆ. ಒಟ್ಟು 18 ವಿಧಾನಸಭೆ ಕ್ಷೇತ್ರಗಳಿದ್ದು, ಬೆಳಗಾವಿ, ಚಿಕ್ಕೋಡಿ 2 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿವೆ.

ಬೆಳಗಾವಿ ಉತ್ತರದಲ್ಲಿ ಟಿಕೆಟ್ ಫೈಟ್

ಸತತವಾಗಿ 3 ಬಾರಿ ಗೆಲುವು ಸಾಧಿಸಿರುವ ಕಾಂಗ್ರೆಸ್‌'ನ ಫಿರೋಜ್‌ ಸೇಠ್‌ ಮತ್ತೆ ಕಣಕ್ಕಳಿಯಲಿದ್ದಾರೆ. ಆದರೆ, ಈ ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಸಹೋದರ, ಉದ್ಯಮಿ ಲಖನ್‌ ಜಾರಕಿಹೊಳಿ ಹೆಸರು ಕೂಡ ಕೇಳಿಬರುತ್ತಿದೆ. ಮಾಜಿ ಸಚಿವ ಉಮೇಶ ಕತ್ತಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಜೊತೆಗೆ ಅನಿಲ ಬೆನಕೆ, ಕಿರಣ ಜಾಧವ ಹೆಸರು ಕೂಡ ಹರಿದಾಡುತ್ತಿವೆ. ಬಿಜೆಪಿ ಕೈಕೊಟ್ಟರೆ ಅನಿಲ ಬೆನಕೆ ಎಂಇಎಸ್‌ ಅಭ್ಯರ್ಥಿಯಾಗುವುದನ್ನು ಅಲ್ಲಗಳೆಯುವಂತಿಲ್ಲ. ಎಂಇಎಸ್‌ನ ರೇಣು ಕಿಲ್ಲೇಕರ್ ಕೂಡ ಚುನಾವಣಾ ಕಣಕ್ಕಿಳಿಯಲಿದ್ದಾರೆ.

ಬೆಳಗಾವಿ ದಕ್ಷಿಣದಲ್ಲಿ ಟಿಕೆಟ್ ಫೈಟ್

ಕಳೆದ ಬಾರಿ ಪಕ್ಷೇತರರಾಗಿ ಗೆದ್ದ ಸಂಭಾಜಿ ಪಾಟೀಲ ಎಂಇಎಸ್‌ ಬೆಂಬಲಿತ ಅಭ್ಯರ್ಥಿಯಾಗಲಿದ್ದಾರೆ. ಕಳೆದ ಬಾರಿ ಸೋತ ಮಾಜಿ ಶಾಸಕ ಅಭಯ ಪಾಟೀಲ ಬಿಜೆಪಿಯಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಕೈ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಎಂಇಎಸ್‌ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಯಿದ್ದು, ಇದು ಎಂಇಎಸ್‌ಗೆ ಮುಳುವಾಗಲಿದೆ. 

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್ ಫೈಟ್

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸತತ 2 ಬಾರಿ ಗೆದ್ದಿರುವ ಬಿಜೆಪಿಯ ಸಂಜಯ ಪಾಟೀಲ ಮತ್ತೆ ಅದೃಷ್ಟಪರೀಕ್ಷೆಗೆ ಇಳಿಯ ಲಿದ್ದಾರೆ. ಕಳೆದ ಬಾರಿ ಸೋಲನುಭವಿಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಎಂಇಎಸ್‌ನಿಂದ ಮಾಜಿ ಶಾಸಕ ಮನೋಹರ ಕಿಣೇಕರ ಸ್ಪರ್ಧಿಸಲಿದ್ದಾರೆ. ಇಲ್ಲಿ ಮರಾಠಿ ಭಾಷಿಕರೇ ನಿರ್ಣಾಯಕರು.

ಖಾನಾಪುರ ಕ್ಷೇತ್ರದ ಟಿಕೆಟ್ ಫೈಟ್

ಕಳೆದ ಬಾರಿ ಪಕ್ಷೇತರ ರಾಗಿ ಗೆಲುವು ಸಾಧಿಸಿ ಹಾಲಿ ಶಾಸಕರಾಗಿರುವ ಅರವಿಂದ ಪಾಟೀಲ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ. ಬಿಜೆಪಿ ಟಿಕೆಟ್‌ ದೊರೆಯದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗುವುದು ಖಚಿತ. ಕಳೆದ ಬಾರಿ ಕಾಂಗ್ರೆಸ್‌ ಬಂಡುಕೋರ ಅಭ್ಯರ್ಥಿಯಾಗಿದ್ದ ಬಾಲಭವನ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳಕರ ಕಾಂಗ್ರೆಸ್‌ನ ಪ್ರಮುಖ ಆಕಾಂಕ್ಷಿಯಾಗಿದ್ದರೆ, ಅವರ ಜೊತೆಗೆ ರಫಿಕ್‌ ಖಾನಾಪುರಿ ಹೆಸರು ಕೂಡ ಕೇಳಿಬರುತ್ತಿದೆ. ಬಿಜೆಪಿಯಿಂದ ಮಾಜಿ ಶಾಸಕ ಪ್ರಹ್ಲಾದ ರೇಮಾನಿ ಸ್ಪರ್ಧಿಸುವ ಸಾಧ್ಯತೆಗಳಿವೆ.

ಕಿತ್ತೂರು ಕ್ಷೇತ್ರದ ಟಿಕೆಟ್ ಫೈಟ್

ಎಸ್‌.ಎಂ.ಕೃಷ್ಣ ಆಪ್ತರಾಗಿರುವ ಕಾಂಗ್ರೆಸ್‌ ಶಾಸಕ ಡಿ.ಬಿ.ಇನಾಮದಾರ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ಬಿಜೆಪಿ ಕೈಕೊಟ್ಟರೆ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಆದ್ರೆ ಬಿಜೆಪಿ ಮಾಜಿ ಶಾಸಕ ಸುರೇಶ ಮಾರಿಹಾಳ ಇಲ್ಲಿ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿಯಾಗಿದ್ದಾರೆ.

ಗೋಕಾಕ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ

ಸಚಿವ ರಮೇಶ ಜಾರಕಿಹೊಳಿ ಅವರೇ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ. ಕಳೆದ ಬಾರಿ ಪರಾಜಿತಗೊಂಡಿದ್ದ ಜೆಡಿಎಸ್‌ ಅಭ್ಯರ್ಥಿ ಅಶೋಕ ಪೂಜಾರಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಅವರಿಗೆ ಟಿಕೆಟ್‌ ಬಹುತೇಕ ಖಚಿತ ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಯಾರು ಎಂಬ ಊಹೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಅರಬಾವಿ ಕ್ಷೇತ್ರದ ಟಿಕೆಟ್ ಫೈಟ್

ಇನ್ನೂ ಅರಬಾವಿಯಲ್ಲಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಎದುರಿಸಲು ಕಾಂಗ್ರೆಸ್‌ ಸಜ್ಜಾಗುತ್ತಿದೆ. ಬೆಳಗಾವಿ ಕೆಎಂಎಫ್‌ ಅಧ್ಯಕ್ಷ, ಎಂಎಲ್ಸಿ ವೀರಕುಮಾರ ಪಾಟೀಲ್ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯಾಗಿದ್ದಾರೆ. ಅಲ್ಲದೇ ಕಳೆದ ಬಾರಿ ಸೋತ ಕಾಂಗ್ರೆಸ್‌ ಅಭ್ಯರ್ಥಿ ರಮೇಶ ಉಟಗಿ ಕೈ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ.

ಬೈಲಹೊಂಗಲ ಟಿಕೆಟ್ ಫೈಟ್

ಹಾಲಿ ಶಾಸಕ ಡಾ.ವಿಶ್ವನಾಥ ಪಾಟೀಲ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಬಿಜೆಪಿ ಮಾಜಿ ಶಾಸಕ ಜಗದೀಶ ಮೇಟಗುಡ್ಡ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಮಹಾಂತೇಶ ಕೌಜಲಗಿ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ.ವಿ.ಎಸ್‌. ಸಾಧುನವರ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ಸವದತ್ತಿ ಕ್ಷೇತ್ರದ ಟಿಕೆಟ್ ಫೈಟ್

ಹಾಲಿ ಶಾಸಕ ವಿಶ್ವನಾಥ ಮಾಮನಿ ಇಲ್ಲಿ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು ಪಂಚನಗೌಡ ದ್ಯಾಮನಗೌಡರ, ಆನಂದ ಛೋಪ್ರಾ, ಎಸ್‌.ಎಸ್‌.ಕೌಜಲಗಿ ನಡುವೆ ತೀವ್ರ ಪೈಪೋಟಿಯಿದೆ. ಬಸನಗೌಡ ದೊಡ್ಡಗೌಡ ಪಾಟೀಲ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.