Asianet Suvarna News Asianet Suvarna News

ಬಿಇ ಪದವೀಧರರು ಸರ್ಕಾರಿ ಹಾಸ್ಟೆಲ್‌ ಬಾಣಸಿಗರು!

ಕಲಿತದ್ದು ಒಂದು, ಹೊಟ್ಟೆಪಾಡಿಗಾಗಿ ನೆಚ್ಚಿಕೊಂಡಿರುವ ಉದ್ಯೋಗ ಮತ್ತೊಂದು. ಜಿಲ್ಲೆಯ ಹಾಸ್ಟೆಲ್‌ಗಳಲ್ಲೀಗ ಅಡುಗೆ ಮಾಡುತ್ತಿರುವ ಬಾಣಸಿಗರಲ್ಲಿ ನಾಲ್ಕು ಮಂದಿ ಎಂಜಿನಿಯರಿಂಗ್‌ ಪದವೀಧರರು, 18 ಮಂದಿ ಬಿಎಸ್ಸಿ ಓದಿದವರು. ಇನ್ನುಳಿದಂತೆ ಬಹಳಷ್ಟುಮಂದಿ ಬಿಕಾಂ, ಬಿಇಡಿ, ಎಂಇಡಿ ಪದವೀಧರರಿದ್ದಾರೆಂದರೆ ನಂಬಲೇಬೇಕು.

BE Graduates Work As cooks in government hostel

ಸೋಮರಡ್ಡಿ ಅಳವಂಡಿ

ಕೊಪ್ಪಳ : ಕಲಿತದ್ದು ಒಂದು, ಹೊಟ್ಟೆಪಾಡಿಗಾಗಿ ನೆಚ್ಚಿಕೊಂಡಿರುವ ಉದ್ಯೋಗ ಮತ್ತೊಂದು. ಜಿಲ್ಲೆಯ ಹಾಸ್ಟೆಲ್‌ಗಳಲ್ಲೀಗ ಅಡುಗೆ ಮಾಡುತ್ತಿರುವ ಬಾಣಸಿಗರಲ್ಲಿ ನಾಲ್ಕು ಮಂದಿ ಎಂಜಿನಿಯರಿಂಗ್‌ ಪದವೀಧರರು, 18 ಮಂದಿ ಬಿಎಸ್ಸಿ ಓದಿದವರು. ಇನ್ನುಳಿದಂತೆ ಬಹಳಷ್ಟುಮಂದಿ ಬಿಕಾಂ, ಬಿಇಡಿ, ಎಂಇಡಿ ಪದವೀಧರರಿದ್ದಾರೆಂದರೆ ನಂಬಲೇಬೇಕು.

ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ಅಂಕವನ್ನೇ ಮಾನದಂಡವಾಗಿಟ್ಟು ನೇಮಕ ಮಾಡಿಕೊಳ್ಳಲ್ಪಡುವ ಅಡುಗೆ ಮಾಡುವವರು, ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಲಾಗುತ್ತದೆ. ಈ ಹುದ್ದೆಗೆ ವೃತ್ತಿಪರ ಶಿಕ್ಷಣ, ಸ್ನಾತಕ ಪದವೀಧರರು, ಸ್ನಾತಕೋತ್ತರ ಪದವೀಧರರೂ ಅರ್ಜಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡದ್ದು ಅಚ್ಚರಿಗೆ ಕಾರಣವಾಗಿದೆ. ನಿರುದ್ಯೋಗಿಯಾಗಿ ಅಲೆಯುವುದಕ್ಕಿಂತ ಸಿಕ್ಕ ಸರ್ಕಾರಿ ನೌಕರಿ ಸಾಕೆಂದು ಕೆಲಸ ಗಿಟ್ಟಿಸಿಕೊಂಡ ಈ ಕಾಲೇಜು ಕಲಿತವರು ಹಾಸ್ಟೆಲುಗಳಲ್ಲಿ ಅಕ್ಕಿ ಹಸನು ಮಾಡುತ್ತಾರೆ, ತರಕಾರಿ ಹಚ್ಚುತ್ತಾರೆ, ಹಿಟ್ಟು ರುಬ್ಬುತ್ತಾರೆ. ಒಗ್ಗರಣೆ ಸೌಟೂ ಹಿಡಿಯುತ್ತಾರೆ. ಇದೇ ವೇಳೆ ಹತ್ತು ಹದಿನೈದು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಅಡುಗೆ ಕೆಲಸಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದವರು ಮೆರಿಟ್‌ ಮೇಲಾಟದಲ್ಲಿ ಮನೆ ಹಾದಿ ಹಿಡಿದಿದ್ದಾರೆ.

ಮೆರಿಟ್ಟೇ ಮೆಟ್ಟಿಲಾಯ್ತು:

ಜಿಲ್ಲೆಯಾದ್ಯಂತ ವಿವಿಧ ಇಲಾಖೆಗಳ ಅಡಿ ಕಾರ್ಯ ನಿರ್ವಹಿಸುವ ಹಾಸ್ಟೆಲ್‌ಗಳಲ್ಲಿ 137 ಅಡುಗೆ ಮಾಡುವವರು ಹಾಗೂ ಅಡುಗೆ ಸಹಾಯಕರ ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗಿತ್ತು. ಈ ವೇಳೆ ಅರ್ಜಿ ಸಲ್ಲಿಸಿ, ಅಡುಗೆ ಪರೀಕ್ಷೆಯಲ್ಲಿ ಪಾಸಾದವರಲ್ಲಿ ಬಹುತೇಕ ಮಂದಿ ಪದವೀಧರರಿರುವ ಅಂಶ ಬೆಳಕಿಗೆ ಬಂದಿದೆ. ನೇಮಕಾತಿ ವೇಳೆ ಕೇವಲ ಎಸ್ಸೆಸ್ಸೆಲ್ಸಿ ಅಂಕಗಳನ್ನಷ್ಟೇ ಪರಿಗಣಿಸುವ ಕಾರಣ ಇವರಲ್ಲಿ ಎಷ್ಟುಮಂದಿ ಪದವೀಧರರಿದ್ದಾರೆ ಎಂಬ ಅಂಕಿ-ಅಂಶ ನಿಖರವಾಗಿ ದೊರೆತಿಲ್ಲ. ಆದರೆ, ಕಳೆದ ವರ್ಷ ನೇಮಕಗೊಂಡ ಅಡುಗೆ ಸಿಬ್ಬಂದಿಯಲ್ಲಿ ಬಹಳಷ್ಟುಮಂದಿ ಎಂಜಿನಿಯರಿಂಗ್‌, ಎಂಎ, ಬಿಎಸ್ಸಿ, ಬಿಕಾಂ, ಬಿಇಡಿ ಸೇರಿದಂತೆ ವಿವಿಧ ಪದವಿ ಪಡೆದವರು ಇದ್ದಾರೆ ಎಂದು ತಾಲೂಕು ಬಿಸಿಎಂ ಅಧಿಕಾರಿ ಎಸ್‌.ವಿ. ಕರವೀರಮಠ ತಿಳಿಸಿದ್ದಾರೆ.

ನೇಮಕಾತಿ ವೇಳೆ ಮೆರಿಟ್‌ ಅನ್ನು ಆಧಾರವಾಗಿಟ್ಟುಕೊಂಡು ಅಭ್ಯರ್ಥಿಗಳಿಗೆ ಅಡುಗೆ ಬಗ್ಗೆ ಪರೀಕ್ಷೆ ನಡೆಸಲಾಗಿತ್ತು. ಈ ಸಂದರ್ಭ ಎಸ್ಸೆಸ್ಸೆಲ್ಸಿ ಅಂಕಗಳ ಕಟ್‌ ಆಫ್‌ ಶೇ.81.5 ಆಗಿತ್ತು. ಎಸ್ಸೆಸ್ಸೆಲ್ಸಿಯಲ್ಲಿ ಭರಪೂರ ಅಂಕ ಗಳಿಸಿದ್ದ ಈ ಪದವೀಧರರು ಅಡುಗೆ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ಸಹಜವಾಗಿಯೇ ನೇಮಕಗೊಂಡಿದ್ದಾರೆ. ಕಳೆದ ಜೂ.18ರಿಂದ ಇವರೆಲ್ಲ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಕೂಡ.

ಬೀದಿಗೆ ಬಿದ್ದ ಹೊರಗುತ್ತಿಗೆ ಸಿಬ್ಬಂದಿ

ಈ ಪದವೀಧರರ ಭರಾಟೆ ನಡುವೆ ಹೊಡೆತ ಬಿದ್ದದ್ದು ಈ ಹಿಂದೆ ಹೊರಗುತ್ತಿಗೆ ಆಧಾರದಲ್ಲಿ ಅಡುಗೆ ಕಾರ್ಯ ನಿರ್ವಹಿಸುತ್ತಿದ್ದ ಬಾಣಸಿಗರಿಗೆ. 15-20 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇವರು ಈಗ ಕೆಲಸ ಕಳೆದುಕೊಳ್ಳುವಂತಾಗಿದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರನ್ನು ಕಾಯಂ ಮಾಡಿದಂತೆ ನಮ್ಮನ್ನು ಮಾಡಬೇಕಾಗಿತ್ತು. ಅದನ್ನು ಬಿಟ್ಟು ಈಗ ಏಕಾಏಕಿ ಕಿತ್ತು ಹಾಕಿದರೆ ನಾವು ಎಲ್ಲಿ ಹೋಗಬೇಕು? ಎಂದು ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಡುಗೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಕೆಲಸ ಯಾವುದಾದರೇನು? ಸಿಕ್ಕಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು ಮುಖ್ಯ. ಅದರಲ್ಲಿಯೇ ನಾವು ಸಂತೋಷವನ್ನು ಪಡೆಯಬೇಕು. ಸರ್ಕಾರಿ ಕೆಲಸವಾಗಿದ್ದರಿಂದ ಸೇರಿಕೊಂಡಿದ್ದೇವೆ.

-ಗಂಗಾಧರ, ಬಿಕಾಂ ಪದವೀಧರ, ಅಡುಗೆ ಸಹಾಯಕ

ಸರ್ಕಾರದ ನಿಯಮಾನುಸಾರ ನೇಮಕಗೊಂಡ ಅಡುಗೆ ಮಾಡುವವರು, ಸಹಾಯಕರು ಈಗ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರಲ್ಲಿ ಅನೇಕರು ಎಂಜಿನಿಯರಿಂಗ್‌, ಬಿಎಸ್ಸಿ, ಬಿಇಡಿ ಪದವೀಧರರು ಇರುವುದು ಸತ್ಯ.

-ಎಸ್‌.ವಿ.ಕರವೀರಮಠ, ತಾಲೂಕು ಬಿಸಿಎಂ ಅಧಿಕಾರಿ

Follow Us:
Download App:
  • android
  • ios