ಹೊಸದಿಲ್ಲಿ: ಯಾರಾದ್ರೂ ಬೇನಾಮಿ ಆಸ್ತಿ ಮಾಡಿರೋ ಬಗ್ಗೆ ನಿಮ್ಮ ಹತ್ತಿರ ಇನ್‌ಫಾರ್ಮೇಷನ್ ಇದೆಯಾ? ಇದ್ದರೆ ತೆರಿಗೆ ಇಲಾಖೆಗೆ ನಿರ್ದಿಷ್ಟ ಮಾದರಿಯಲ್ಲಿ ತಿಳಿಸಿ, ಬರೋಬ್ಬರಿ 1 ಕೋಟಿ ರೂ. ಗಳಿಸಿ. ಅಷ್ಟೇ ಅಲ್ಲ ವಿದೇಶದಲ್ಲಿಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿದರೆ, ಇಲಾಖೆ 5 ಕೋಟಿ ಬಹುಮಾನ ನೀಡುತ್ತೆ.

ಕ್ರಮ ಕೈಗೊಳ್ಳಬಹುದಾದಂಥ ಮಾಹಿತಿಯನ್ನು ಐಟಿ ಇಲಾಖೆಯೊಂದಿಗೆ ಹಂಚಿಕೊಂಡವರಿಗೆ 50 ಲಕ್ಷ ರೂ. ಬಹುಮಾನ ನೀಡುವ ತೆರಿಗೆ ಇಲಾಖೆ ಮಾಹಿತಿಗಾರರಿಗೆ ಬಹುಮಾನ ಯೋಜನೆಗೆ ತಿದ್ದುಪಡಿ ತಂದಿದ್ದು, ಬಹುಮಾನ ಮೊತ್ತವನ್ನು ಕೋಟಿಗೆ ಹಾಗೂ 5 ಕೋಟಿ ರೂ.ವರೆಗೂ ಹೆಚ್ಚಿಸಲಾಗಿದೆ.

ಬೇನಾಮಿ ವ್ಯವಹಾರ (ತಡೆ) ತಿದ್ದುಪಡಿ ಕಾಯ್ದೆ, 2016ರ ಅಡಿಯಲ್ಲಿ ವಿಚಾರಣೆಗ ಒಳಪಡಿಸಬಹುದಾದ ಆಸ್ತಿಯ ಬೇನಾಮಿ ವ್ಯವಹಾರದ ಬಗ್ಗೆ ವಿದೇಶಿ ಪ್ರಜೆ ಸೇರಿ ಯಾವುದೇ ವ್ಯಕ್ತಿ ಜಂಟಿ ಅಥವಾ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತರೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು, ಎಂದು ನೇರ ತೆರಿಗೆ ಕೇಂದ್ರ ಮಂಡಳಿ ಘೋಷಿಸಿದೆ. ಬೇನಾಮಿ ಆಸ್ತಿ ಅಥವಾ ಕದ್ದು ಮುಚ್ಚಿ ವ್ಯವಹಾರ ಮಾಡುವವರ ವಿರುದ್ಧ ಸೂಕ್ತ ಮಾಹಿತಿ ನೀಡುವವರನ್ನು ಉತ್ತೇಜಿಸಲು ಇಲಾಖೆ ಇಂಥ ಕ್ರಮಕ್ಕೆ ಮುಂದಾಗಿದೆ.

ಬೇನಾಮಿ ತಡೆ ಘಟಕ್ಕೆ ಈ ಕಾಯ್ದೆಯಡಿ ವ್ಯಕ್ತಿಯೊಬ್ಬ ನಿಗಧಿತ ಮಾದರಿಯಲ್ಲಿ ಕಪ್ಪು ಹಣ ಹಾಗೂ ಬೇನಾಮಿ ಆಸ್ತಿ ಹಾಗೂ ಬಂಡವಾಳ ಹೂಡಿಕೆ ಬಗ್ಗೆ ಮಾಹಿತಿ ನೀಡಬೇಕು. ವ್ಯಕ್ತಿ ನೀಡಿರುವ ಮಾಹಿತಿಯಿಂದ ಆ ನಿರ್ದಿಷ್ಟ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಇರುವ ಸಾಧ್ಯ ಸಾಧ್ಯತೆಗಳನ್ನು ಪರಿಶೀಲಿಸಿ, ಮಾಹಿತಿ ನೀಡಿದವರಿಗೆ ಒಂದು ಕೋಟಿ ರೂ.ವರೆಗೂ ಬಹುಮಾನ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಮಾಹಿತಿ ನೀಡಿದವರ ವಿವರವನ್ನು ಇಲಾಖೆ ಬಹಿರಂಗ ಪಡಿಸದೇ, ಗೌಪ್ಯವಾಗಿಡಲಿದೆ.

ಅಲ್ಲದೇ ವಿದೇಶದಲ್ಲಿಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿದರೆ 5 ಕೋಟಿವರೆಗೂ ಬಹುಮಾನ ಪಡೆಯಬಹುದಾಗಿದೆ.