ಬೆಂಗಳೂರು[ಸೆ.10]: ಅವಧಿ ಮುಗಿದ ನಂತರವೂ ಸರ್ಕಾರಿ ನಿವಾಸ ಖಾಲಿ ಮಾಡದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ವಾರದೊಳಗೆ ನಿವಾಸ ಖಾಲಿ ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೋಟಿಸ್‌ ಜಾರಿಗೊಳಿಸಿದೆ.

ರಾಜ್‌ಮಹಲ್‌ ವಿಲಾಸ 2ನೇ ಹಂತದ ಸದಾಶಿವನಗರದಲ್ಲಿ ಬಿಡಿಎ ನಿರ್ಮಿಸಿರುವ ವಸತಿ ಗೃಹ (94/ಎ)ವನ್ನು ಬಾಡಿಗೆ ಆಧಾರದ ಮೇಲೆ ಸರ್ಕಾರಕ್ಕೆ ಹಂಚಿಕೆ ಮಾಡಲಾಗಿದೆ. ಸದರಿ ವಸತಿ ಗೃಹವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಕಚೇರಿ ಉಪಯೋಗಕ್ಕಾಗಿ ನೀಡಲಾಗಿದೆ. ಆದ್ದರಿಂದ ನಿವಾಸವನ್ನು ಕೂಡಲೇ ಖಾಲಿ ಮಾಡಿ ಎಂದು ಪರಮೇಶ್ವರ್‌ ಅವರಿಗೆ ಸೂಚನೆ ನೀಡಲಾಗಿದೆ.

ತಮ್ಮ ಅಧಿಕಾರಾವಧಿಯಲ್ಲಿ ಉಪಯೋಗಿಸಿದ ವಿದ್ಯುಚ್ಛಕ್ತಿ ವೆಚ್ಚ ಮತ್ತು ನೀರಿನ ವೆಚ್ಚ ಪಾವತಿಸಿರುವ ಬಿಲ್ಲುಗಳ ವಿವರಗಳೊಂದಿಗೆ ವಸತಿ ಗೃಹವನ್ನು ಒಂದು ವಾರದೊಳಗೆ ಪ್ರಾಧಿಕಾರಕ್ಕೆ ಹಿಂದಿರುಗಿಸುವಂತೆ ಬಿಡಿಎ ಆಯುಕ್ತರು ಸೂಚಿಸಿದ್ದಾರೆ.

ಮೈತ್ರಿ ಸರ್ಕಾರ ಪತನವಾಗಿ ಒಂದೂವರೆ ತಿಂಗಳು ಕಳೆದರೂ ಪರಮೇಶ್ವರ್‌ ಅವರು ಸದಾಶಿವನಗರದ ಬಿಡಿಎ ವಸತಿ ಗೃಹವನ್ನು ಖಾಲಿ ಮಾಡದ ಕಾರಣ ನೋಟಿಸ್‌ ನೀಡಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.