ಮಲಿನಗೊಂಡಿರುವ ಬೆಳ್ಳಂದೂರು ಕೆರೆಯನ್ನು ಪುನರುಜ್ಜೀವನಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೊದಲ ಹೆಜ್ಜೆ ಇಟ್ಟಿದ್ದು, ಕೆರೆ ಸುತ್ತಮುತ್ತಲಿನ ಜನರಲ್ಲಿ ಖುಷಿ ತಂದಿತ್ತು. ಆದರೆ ಕಳೆದ ಎರಡು ತಿಂಗಳಿಂದ ಬಿಡಿಎ ಎಲ್ಲರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಕಾಮಗಾರಿ ಹೆಸರಿನಲ್ಲಿ  ಬಿಡಿಎ ಕಾಲ ಹರಣ ಮಾಡುತ್ತಿದೆ.

ಬೆಂಗಳೂರು (ಜು.23): ಮಲಿನಗೊಂಡಿರುವ ಬೆಳ್ಳಂದೂರು ಕೆರೆಯನ್ನು ಪುನರುಜ್ಜೀವನಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೊದಲ ಹೆಜ್ಜೆ ಇಟ್ಟಿದ್ದು, ಕೆರೆ ಸುತ್ತಮುತ್ತಲಿನ ಜನರಲ್ಲಿ ಖುಷಿ ತಂದಿತ್ತು. ಆದರೆ ಕಳೆದ ಎರಡು ತಿಂಗಳಿಂದ ಬಿಡಿಎ ಎಲ್ಲರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಕಾಮಗಾರಿ ಹೆಸರಿನಲ್ಲಿ ಬಿಡಿಎ ಕಾಲ ಹರಣ ಮಾಡುತ್ತಿದೆ.

ಬೆಳ್ಳಂದೂರು ಕೆರೆ ಸ್ವಚ್ಛತೆ ವಿಚಾರವಾಗಿ ಹಸಿರು ನ್ಯಾಯಾಧಿಕರಣ, ಬಿಡಿಎ, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಬೆಂಡ್​ ಎತ್ತಿತ್ತು. ಇದರಿಂದ ಎಚ್ಚೆತ್ತ ಬಿಡಿಎ, ಬೆಳ್ಳಂದೂರು ಕೆರೆಯ ಪುನರುಜ್ಜೀವನಗೊಳಿಸುವ ಜವಾಬ್ದಾರಿ ಹೊತ್ತುಕೊಂಡಿತ್ತು. ಮೂರು ತಿಂಗಳ ಕಾಲಾವಕಾಶವನ್ನು ಪಡೆದುಕೊಂಡಿತ್ತು. ಆದರೆ ಕಾಮಗಾರಿ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಬೆಳ್ಳಂದೂರು ಕೆರೆಯ ಕಳೆ ತೆಗೆಯುವ ಕೆಲಸವೇ ಮುಗಿದಿಲ್ಲ. ಕೆರೆಯಲ್ಲಿ ಇದ್ದ ಕೊಳೆ ಮತ್ತು ನೊರೆ ಮೊದಲಿನಂತೆಯೇ ಇದೆ.

ಬೆಳ್ಳಂದೂರು ಕೆರೆಯ ಪುನರುಜ್ಜೀವನದ ಮುಖ್ಯ ಉದ್ದೇಶ, ಕೆರೆಯನ್ನ ಸಹಜ ಸ್ಥಿತಿಗೆ ಮರಳಿಸುವುದು. ಕೆರೆಯಲ್ಲಿರುವ ಜೈವಿಕ ಸಂಕುಲಗಳ ಸಂರಕ್ಷಣೆ ಮಾಡಲು,ಕೆರೆಯಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸುವುದು. ಹಾಗೂ ಕೆರೆಯ ಪರಿಸರವನ್ನು ಸುಂದರಗೊಳಿಸುವುದು ಮತ್ತು ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ ಎರಡು ತಿಂಗಳಿಂದ ಇದ್ಯಾವ​ ಕೆಲಸಗಳು ಬೆಳ್ಳಂದೂರು ಕೆರೆಯಲ್ಲಿ ನಡೆಯುತ್ತಿಲ್ಲ.

ಕೆರೆಯ ಕಳೆ ತೆಗೆಯುವ ಟೆಂಡರ್​ನ ಪಡೆದಿರುವ ಹೈದರಾಬಾದ್​ನ ಹಾರ್ವಿನ್ಸ್‌ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್‌, ಆಮೆ ವೇಗದಲ್ಲಿ ಕೆಲಸ ಮಾಡುತ್ತಿದೆ. ಶೇ.20 ರಷ್ಟು ಮಾತ್ರ ಕೆರೆಯ ಕಳೆ ತೆಗೆಯಲಾಗಿದೆ. ಇನ್ನು ಕೆರೆಗೆ ಯಾರು ಕಸ ಹಾಕುತ್ತಾರೋ ಅವರ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ಕೆರೆಯ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನ ಅಳವಡಿಸಿತ್ತು.. ಆದರೆ ಬಿಬಿಎಂಪಿಯ ಯಾವುದೇ ಕ್ಯಾಮರಾಗಳು ವರ್ಕ್​ ಆಗುತ್ತಿಲ್ಲ. ಇನ್ನೂ ಕೆಲ ಕ್ಯಾಮರಾಗಳು ಕೆರೆ ಪಕ್ಕದಲ್ಲಿರುವ ಅರ್ಪಾಟಮೆಂಟ್​ನ ಕಾಯುತ್ತಿವೆ. ಇದರಿಂದ ಕೆರೆಯಲ್ಲಿ ಕಸ ಹಾಕುವ ಜನರಿಗೆ ಮುಕ್ತ ಆಹ್ವಾನ ನೀಡಿದಂತಾಗಿದೆ.

ಒಟ್ಟಿನಲ್ಲಿ, ಬಿಡಿಎ ಕೆರೆಯ ಕಳೆ ತೆಗೆಯುವ ಕೆಲಸವನ್ನೇ ಒಂದು ವರ್ಷ ಪಡೆಯುವ ಯೋಚನೆಯಲ್ಲಿದೆ ಅನ್ನುವ ಅನುಮಾನ ಶುರುವಾಗಿದೆ. ನ್ಯಾಯಾಧಿಕರಣದ ಒತ್ತಡಕ್ಕೆ ಬಿಡಿಎ ಬೇಜವಾಬ್ದಾರಿ ಕೆಲಸ ಮಾಡುತ್ತಿರುವುದಂತೂ ನಿಜ.