ಬೆಂಗಳೂರು (ಜೂ.19) : ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅತೃಪ್ತರ ಭಿನ್ನಮತೀಯ ಚಟುವಟಿಕೆ ತೀವ್ರಗೊಂಡಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಯತ್ನ ನಡೆಯುತ್ತಿರುವಾಗಲೇ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ನೇತೃತ್ವದಲ್ಲಿ ಮತ್ತೊಂದು ಅತೃಪ್ತರ ತಂಡ ರೂಪುಗೊಳ್ಳುತ್ತಿರುವ ಲಕ್ಷಣ ಕಂಡುಬಂದಿದೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡದ ಪಕ್ಷದ ನಿಲುವಿನ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿರುವ ಬಿ.ಸಿ. ಪಾಟೀಲ್, ತೆರೆಮರೆಯಲ್ಲಿ ಅತೃಪ್ತರನ್ನು ಒಗ್ಗೂಡಿಸುವ ಯತ್ನ ತೀವ್ರಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಬಿ.ಸಿ. ಪಾಟೀಲ್ ನೇತೃತ್ವದಲ್ಲಿ ಸದ್ಯದಲ್ಲೇ ಅತೃಪ್ತ ಶಾಸಕರು ಒಂದು ಕಡೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಬಿ.ಸಿ. ಪಾಟೀಲ್ ಅವರು ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಸೇರಿ ಹಲವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಒಂದು ಹಂತದ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿ.ಸಿ. ಪಾಟೀಲ್ ಸಚಿವ ಸ್ಥಾನ ಕೇಳಿ, ಕೇಳಿ ಸಾಕಾಗಿದೆ. ಇನ್ನು ಸಚಿವ ಸ್ಥಾನ ನೀಡಿದರೂ ಅದು ನನಗೆ ಬೇಕಾಗಿಲ್ಲ.