ಬಿಜೆಪಿ ಇದೀಗ ಹೊಸ ಹೈ ಡ್ರಾಮ ಒಂದನ್ನು ಮಾಡಿದೆ. ಬಿಜೆಪಿ ಮುಖಂಡರು ತಮ್ಮ ಬೆಂಬಲವನ್ನು ಬಂಡಾಯ ಸದಸ್ಯರಿಗೆ ನೀಡಲು ಮುಂದಾದ ಘಟನೆ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯಿತು. ಈ ಎಲ್ಲಾ ಗೊಂದಲಗಳಿಂದ ಕೊನೆಗೆ ಚುನಾವಣೆಯನ್ನು ಮುಂದೂಡಲಾಯಿತು. 

ಬೆಂಗಳೂರು : ಬಿಬಿಎಂಪಿಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಶುಕ್ರವಾರ ನಡೆಯಬೇಕಿದ್ದ ಚುನಾವಣೆ, ಆಡಳಿತ ಮತ್ತು ಪ್ರತಿಪಕ್ಷಗಳ ಬೃಹನ್ನಾಟಕಗಳೊಂದಿಗೆ ಮುಂದೂಡಲ್ಪಟ್ಟಿತು. ಇದರಿಂದ ಸ್ಥಾಯಿ ಸಮಿತಿಗಳ ಅಧ್ಯಕ್ಷ ಗಾಧಿಯ ಆಕಾಂಕ್ಷಿಗಳಿಗೆ ಭಾರೀ ನಿರಾಸೆ ಉಂಟಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷಗಾಧಿ ಆಕಾಂಕ್ಷಿಗಳಾಗಿದ್ದ ಕೆಲ ಜೆಡಿಎಸ್‌ ಸದಸ್ಯರು ಮೈತ್ರಿ ಆಡಳಿತ ಅಂತಿಮಗೊಳಿಸಿದ್ದ ಹೆಸರುಗಳಿಗೆ ತಮ್ಮ ಸಹಮತ ವ್ಯಕ್ತಪಡಿಸಲು ಒಪ್ಪದ ಕಾರಣ ಚುನಾವಣಾ ಸಮಯ ಹತ್ತಿರವಾದರೂ ಕಗ್ಗಂಟು ಬಗೆಹರಿಯಲಿಲ್ಲ. ಹಾಗಾಗಿ ಮಧ್ಯಾಹ್ನ 12 ಗಂಟೆಗೆ ಆರಂಭವಾಗಬೇಕಿದ್ದ ಸ್ಥಾಯಿ ಸಮಿತಿ ಚುನಾವಣೆ ಮಧ್ಯಾಹ್ನ 1.30 ಗಂಟೆಯಾದರೂ ಆರಂಭವಾಗಲಿಲ್ಲ. ಇದರಿಂದ ನಂಬರ್‌ಗೇಮ್‌ ದಾಳ ಉರುಳಿಸಿ ಕೆಲ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಮೈತ್ರಿ ಆಡಳಿತದ ಕೈತಪ್ಪಿಸಿ ಮುಖಭಂಗ ಉಂಟುಮಾಡಲು ಪ್ರಯತ್ನಿಸಿದ್ದ ಬಿಜೆಪಿ ಸದಸ್ಯರು, ಚುನಾವಣೆ ಆರಂಭಿಸುವಂತೆ ಆಗ್ರಹಿಸಿ ಕೌನ್ಸಿಲ್‌ ಸಭೆಯೊಳಗೆ ಪ್ರತಿಭಟನೆ ಆರಂಭಿಸಿದರು.

ಬಿಜೆಪಿ ಪ್ರತಿಭಟನೆಯನ್ನೇ ಅಸ್ತ್ರವಾಗಿ ಬಳಸಿಕೊಂಡ ಆಡಳಿತ ಪಕ್ಷ ಚುನಾವಣೆ ನಡೆಸಲು ಬಿಜೆಪಿಯವರು ಬಿಡುತ್ತಿಲ್ಲ ಎಂದು ಆರೋಪಿಸಿ ಸಭೆಯನ್ನು ಸುವ್ಯವಸ್ಥೆಗೆ ತರಲು ಪ್ರಯತ್ನವನ್ನೂ ಮಾಡದೆ ಏಕಾಏಕಿ ಚುನಾವಣೆ ಮುಂದೂಡುವಲ್ಲಿ ಯಶಸ್ವಿಯಾಯಿತು. ಸುಮಾರು 1.35ರ ಸುಮಾರಿಗೆ ಕೌನ್ಸಿಲ್‌ ಸಭೆಗೆ ಆಗಮಿಸಿದ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಬಿಜೆಪಿ ಸದಸ್ಯರ ಪ್ರತಿಭಟನೆ ನಡೆಸುತ್ತಿದ್ದುದರಿಂದ ಕ್ಷಣಾರ್ಧದಲ್ಲೇ ಚುನಾವಣೆ ಮುಂದೂಡಿರುವುದಾಗಿ ಘೋಷಿಸಿ ಹೊರನಡೆದರು.

ಮೂರು ಸಮಿತಿ ಅಧ್ಯಕ್ಷ ಆಯ್ಕೆ ಕಗ್ಗಟ್ಟು: ಮೈತ್ರಿ ಸೂತ್ರದಂತೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಕೆಲ ಪಕ್ಷೇತರರ ನಡುವೆ 12 ಸ್ಥಾಯಿ ಸಮಿತಿಗಳ ಅಧ್ಯಕ್ಷಸ್ಥಾನಗಳನ್ನು ಕ್ರಮವಾಗಿ ಐದು, ನಾಲ್ಕು ಮತ್ತು ಮೂರು ಸಮಿತಿಗಳ ಹಂಚಿಕೆಗೆ ಆಂತರಿಕವಾಗಿ ತೀರ್ಮಾನವಾಗಿತ್ತು. ಆದರೆ, ಜೆಡಿಎಸ್‌ನ ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ ಮತ್ತು ಬಿಡಿಎಂ ಲೇಔಟ್‌ ವಾರ್ಡ್‌ ಸದಸ್ಯ ದೇವದಾಸ್‌ ಕ್ರಮವಾಗಿ ತಾವು ಸದಸ್ಯರಾಗಿರುವ ಸಾಮಾಜಿಕ ಸ್ಥಾಯಿ ಸಮಿತಿ ಮತ್ತು ವಾರ್ಡ್‌ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಆದರೆ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ನ ಸೌಮ್ಯ ಶಿವಕುಮಾರ್‌ ಅವರಿಗೆ ಮತ್ತು ವಾರ್ಡ್‌ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ನ ಉಮೇಸಲ್ಮಾ ಅವರಿಗೆ ನೀಡಲು ನಿರ್ಧರಿಸಲಾಗಿತ್ತು. ಇದನ್ನು ಒಪ್ಪದ ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್‌ ತಮಗೆ ಅಧ್ಯಕ್ಷ ಸ್ಥಾನ ನೀಡುವಂತೆ ಕೋರಿದ್ದಾರೆ. ಇದಕ್ಕೆ ನಾಯಕರು ಒಪ್ಪದಿದ್ದಾಗ ವಾಗ್ವಾದ ನಡೆಸಿ ಸಭೆಯಿಂದ ಹೊರಬಂದು ಕೌನ್ಸಿಲ್ ಸಭಾಂಗಣದಲ್ಲಿ ಕುಳಿತರು.

ಈ ವೇಳೆ ಪಾಲಿಕೆ ಜೆಡಿಎಸ್‌ ನಾಯಕಿ ಓಡಿಬಂದು ಮಂಜುಳಾ ಅವರನ್ನು ವಾಪಸ್‌ ಕರೆದೊಯ್ಯುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದರ ಜೊತೆಗೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಯಾರಾಗಬೇಕೆಂಬುದು ಇನ್ನೂ ಅಂತಿಮವಾಗಿಲ್ಲ. ಅಸಮಾಧಾನನಿತ ಪಕ್ಷೇತರ ಸದಸ್ಯರಿಗೆ ಬೆಂಬಲ ನೀಡಿ ಅಧ್ಯಕ್ಷರನ್ನಾಗಿಸುವ ಮೂಲಕ ಮೈತ್ರಿ ಆಡಳಿತಕ್ಕೆ ಮುಖಂಭಂಗ ಉಂಟುಮಾಡಲು ಬಿಜೆಪಿ ಮುಂದಾಗಿತ್ತು. ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್‌ ಮತ್ತೆ ಬಿಜೆಪಿ ಜೊತೆ ಸೇರಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇನ್ನು, ನಗರ ಯೋಜನೆ ಸ್ಥಾಯಿ ಸಮಿತಿಯನ್ನು ಪಕ್ಷೇತರರಾದ ಮಮತಾ ಶರವಣಗೆ ನೀಡಬೇಕೆಂದು ಬಿಜೆಪಿ ಹಟ ಹಿಡಿದಿದೆ. ಇದಕ್ಕೆ ಕಾಂಗ್ರೆಸ್‌ ನಾಯಕರು ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.

ಮೊಗಸಾಲೆಯಲ್ಲಿ ಶಾಸಕರ ಸಭೆ

ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಕಗ್ಗಟ್ಟು ಬಗೆಹರಿಸಿ ಚುನಾವಣೆ ಸರಾಗವಾಗಿ ನಡೆಸುವ ಬಿಡುವಂತೆ ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಮೇಯರ್‌ ಮೊಗಸಾಲೆಯಲ್ಲಿ ನಗರದ ವಿವಿಧ ಬಿಜೆಪಿ ಶಾಸಕರು ನಾಯಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ಸತೀಶ್‌ ರೆಡ್ಡಿ, ಮಾಜಿ ಶಾಸಕ ಮುನಿರಾಜು, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಪಾಲಿಕೆ ಬಿಜೆಪಿ ನಾಯಕ ಪದ್ಮನಾಭರೆಡ್ಡಿ ಮತ್ತಿತರರು ಭಾಗಿಯಾಗಿದ್ದರು. ಮೇಯರ್‌ ಗಂಗಾಂಬಿಕೆ, ಶಾಕಸ ಮುನಿರತ್ನ, ಆಡಳಿತ ಪಕ್ಷದ ನಾಯಕ ಶಿವರಾಜು, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌ ಕೂಡ ಇದ್ದರು. ಸಭೆ ವಿಫಲವಾಗಿಯಿತು ಎಂದು ತಿಳಿದು ಬಂದಿದ್ದು, ಬಿಜೆಪಿ ಸದಸ್ಯರು ಕೌನ್ಸಿಲ್‌ಗೆ ತೆರಳಿ ಪ್ರತಿಭಟನೆ ಆರಂಭಿಸಿದರು.

ಕೆಲ ಸ್ಥಾಯಿ ಸಮಿತಿಗಳು ನಮ್ಮ ಕೈತಪ್ಪುತ್ತಿದ್ದವೆಂಬ ಕಾರಣಕ್ಕೆ ಚುನಾವಣೆ ಮುಂದೂಡಲಾಗಿದೆ ಎಂಬ ಬಿಜೆಪಿ ಆರೋಪ ಸುಳ್ಳು. ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಸಭೆ ಆರಂಭಕ್ಕೂ ಮೊದಲೇ ಬಿಜೆಪಿಯವರು ಪ್ರತಿಭಟನೆ ಆರಂಭಿಸಿ, ರಾಷ್ಟ್ರಗೀತೆ ಆರಂಭಿಸಲೂ ಬಿಡದಿದ್ದರಿಂದ ಅನಿವಾರ್ಯವಾಗಿ ಚುನಾವಣೆ ಮುಂದೂಡಬೇಕಾಯಿತು. ಬಿಜೆಪಿಯವರ ಮನವಿ ಮೇರೆಗೆ 12 ಗಂಟೆಗಿದ್ದ ಚುನಾವಣೆಯನ್ನು 1.30ಕ್ಕೆ ಮುಂದೂಡಲಾಗಿತ್ತು.

-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮೇಯರ್‌.

ಕಾಂಗ್ರೆಸ್‌ ಜೆಡಿಎಸ್‌ನಲ್ಲೇ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ಒಮ್ಮತ ಇಲ್ಲದ ಕಾರಣ ಚುನಾವಣೆ ನಡೆಸಿದರೆ ಕೆಲ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೈತಪ್ಪುವ ಭಯದಿಂದ ಚುನಾವಣೆ ಮುಂದೂಡಿದ್ದಾರೆ. ನಾವು ಚುನಾವಣೆಯನ್ನು ಒಂದು ಕ್ಷಣವೂ ಮುಂದೂಡುವಂತೆ ಹೇಳಿಲ್ಲ. ಈ ಬಗ್ಗೆ ಯಾವುದೇ ದೇವಾಲಯದ ಮುಂದೆ ಪ್ರಮಾಣ ಮಾಡಲು ಸಿದ್ಧ. ಮೇಯರ್‌ ಕೂಡ ಇದಕ್ಕೆ ಸಿದ್ಧರಿದ್ದರೆ ತಾವೇ ದೇವಾಲಯವನ್ನು ಸೂಚಿಸಲಿ.

- ಪದ್ಮನಾಭರೆಡ್ಡಿ, ಪಾಲಿಕೆ ಪ್ರತಿಪಕ್ಷ ನಾಯಕ.