ಇಲ್ಲಿಯವರೆಗೂ ಶೇ.98ರಷ್ಟು ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ ಶೇ.ಎರಡರಷ್ಟು ಗುಂಡಿಗಳನ್ನು ಮುಚ್ಚಬೇಕಾಗಿದೆ. ನಗರಾದ್ಯಂತ ಅಂದಾಜು 800ಕ್ಕೂ ಹೆಚ್ಚಿನ ರಸ್ತೆ ಗುಂಡಿ ಮುಚ್ಚುವ ಕಾರ್ಯ ಬಾಕಿ ಇದೆ. ಪ್ರತಿ ದಿನ ಸುಮಾರು 150 ಗುಂಡಿ ಮುಚ್ಚಲಾಗುತ್ತಿದೆ. ನ.4ರ ವರೆಗೆ ಪಾಲಿಕೆ ಅಧಿಕಾರಿಗಳ ಪ್ರಕಾರ 696 ಗುಂಡಿ ಬಾಕಿ ಉಳಿದಿದ್ದವು.

ಬೆಂಗಳೂರು(ನ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಗಡುವು ಭಾನುವಾರಕ್ಕೆ (ನ. 5) ಕೊನೆಗೊಂಡಿದ್ದರೂ ನಗರದ ರಸ್ತೆಗಳು ಇನ್ನು ಗುಂಡಿ ಮುಕ್ತ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣ ಯಶಸ್ವಿಯಾಗಿಲ್ಲ. ಅಂದಾಜು 800ಕ್ಕೂ ಹೆಚ್ಚಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ ಎಂದು ಬಿಬಿಎಂಪಿಯೇ ಹೇಳುತ್ತದೆ.

ಆದರೆ, ನಿತ್ಯ ನಗರದ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮಾತ್ರ ಸಾವಿರ ಗಟ್ಟಲೇ ರಸ್ತೆ ಗುಂಡಿಗಳ ದರ್ಶನವಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಒಂದು ತಿಂಗಳ ಹಿಂದೆ ನಗರದಲ್ಲಿ ಅಂದಾಜು 25 ಸಾವಿರಕ್ಕೂ ಹೆಚ್ಚಿನ ರಸ್ತೆ ಗುಂಡಿಗಳಿದ್ದವು. ಅಂದಿನಿಂದ ನಿರಂತರವಾಗಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಆದರೂ, ಪ್ರತಿ ದಿನ ಹೊಸದಾಗಿ ನೂರಾರು ಗುಂಡಿಗಳು ಸೃಷ್ಟಿಯಾಗುತ್ತಿರುವುದರಿಂದ ಸಂಪೂರ್ಣವಾಗಿ ಮುಚ್ಚುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಸರ್ಕಾರಕ್ಕೆ ಸಂಪೂರ್ಣ ವರದಿ ನೀಡಲು ಸಾಧ್ಯವಾಗುತ್ತಿಲ್ಲ.

ಶೇ.98ರಷ್ಟು ಪೂರ್ಣ

ಇಲ್ಲಿಯವರೆಗೂ ಶೇ.98ರಷ್ಟು ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ ಶೇ.ಎರಡರಷ್ಟು ಗುಂಡಿಗಳನ್ನು ಮುಚ್ಚಬೇಕಾಗಿದೆ. ನಗರಾದ್ಯಂತ ಅಂದಾಜು 800ಕ್ಕೂ ಹೆಚ್ಚಿನ ರಸ್ತೆ ಗುಂಡಿ ಮುಚ್ಚುವ ಕಾರ್ಯ ಬಾಕಿ ಇದೆ. ಪ್ರತಿ ದಿನ ಸುಮಾರು 150 ಗುಂಡಿ ಮುಚ್ಚಲಾಗುತ್ತಿದೆ. ನ.4ರ ವರೆಗೆ ಪಾಲಿಕೆ ಅಧಿಕಾರಿಗಳ ಪ್ರಕಾರ 696 ಗುಂಡಿ ಬಾಕಿ ಉಳಿದಿದ್ದವು. ಮೂರು ದಿನಗಳಲ್ಲಿ ಮತ್ತೇ 300 ಹೊಸ ಗುಂಡಿಗಳು ಸೃಷ್ಟಿಯಾಗಿವೆ. ಈ ಪೈಕಿ ನ.4ರಂದು 150 ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 800ಕ್ಕೂ ಹೆಚ್ಚಿನ ಗುಂಡಿಗಳು ಬಾಕಿ ಉಳಿದಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮುಖ್ಯಮಂತ್ರಿಗಳ ಆದೇಶಕ್ಕೆ ತಿಂಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.9ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಅ.25ರೊಳಗೆ ಗುಂಡಿಮುಕ್ತ ಮಾಡುವಂತೆ ಗಡುವು ನೀಡಿದ್ದರು. ಸಿಎಂ ಗಡುವು ಪಾಲನೆ ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಮೇಯರ್ ಸಂಪತ್‌ರಾಜ್ ಮತ್ತೆ 10 ದಿನಗಳ ಕಾಲಾವಕಾಶಕ್ಕೆ ಕೋರಿದ್ದರು. ನ.5ಕ್ಕೆ ಆ ಗಡುವು ಕೂಡ ಮುಗಿದಿದ್ದು, ಇಂದಿಗೂ ನಗರ ಮಾತ್ರ ಗುಂಡಿ ಮುಕ್ತವಾಗಿಲ್ಲ. ಗಡುವಿನ ನಂತರ ತಾವೇ ಖುದ್ದಾಗಿ ರಸ್ತೆ ಗುಂಡಿ ಮುಚ್ಚಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ, ರಸ್ತೆಗುಂಡಿ ಕಾಣಿಸಿಕೊಂಡರೆ ಸಂಬಂಧಪಟ್ಟ ಮುಖ್ಯ ಎಂಜಿನಿಯರ್‌ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದರು.