ಬಿಬಿಎಂಪಿಗೆ ದೂರು ಸಲ್ಲಿಸುವುದು ವ್ಯರ್ಥ! ಯಾಕೆಂದರೆ ದೂರು ಸಲ್ಲಿಸಿ ತಿಂಗಳುಗಳು ಕಳೆದರೂ ಪರಿಹಾರ ಸಿಗೋದಿಲ್ಲ. ಅಷ್ಟೇ ಅಲ್ಲ, ಸಮಸ್ಯೆ ಪರಿಹರಿಸದೆಯೇ ನಿಮ್ಮ ದೂರಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸುಳ್ಳು ಸಂದೇಶ ಬರುತ್ತದೆ.
ಬೆಂಗಳೂರು (ಡಿ.23): ಬಿಬಿಎಂಪಿಗೆ ದೂರು ಸಲ್ಲಿಸುವುದು ವ್ಯರ್ಥ! ಯಾಕೆಂದರೆ ದೂರು ಸಲ್ಲಿಸಿ ತಿಂಗಳುಗಳು ಕಳೆದರೂ ಪರಿಹಾರ ಸಿಗೋದಿಲ್ಲ. ಅಷ್ಟೇ ಅಲ್ಲ, ಸಮಸ್ಯೆ ಪರಿಹರಿಸದೆಯೇ ನಿಮ್ಮ ದೂರಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸುಳ್ಳು ಸಂದೇಶ ಬರುತ್ತದೆ.
ಆರ್.ಟಿ. ನಗರದ ಪಾರ್ಕ್‌ವೊಂದರ ದುರಸ್ತಿಗಾಗಿ ಸ್ಥಳೀಯರು ಸಲ್ಲಿಸಿದ್ದ ದೂರಿಗೆ ಬಂದಿರುವ ಸಂದೇಶ ಇದಕ್ಕೆ ಸಾಕ್ಷಿಯಾಗಿದೆ. ಆರ್.ಟಿ.ನಗರ ಅಂಚೆ ಕಚೇರಿ ಹಿಂಭಾಗದ ರವೀಂದ್ರನಾಥ ಠ್ಯಾಗೋರ್ ಪಾರ್ಕ್ ಸಂಪೂರ್ಣ ಹಾಳಾಗಿದ್ದು ದುರಸ್ತಿಗೊಳಿಸುವಂತೆ ನಾಲ್ಕು ತಿಂಗಳ ಹಿಂದೆ ಸ್ಥಳೀಯರೊಬ್ಬರು ದೂರು ದಾಖಲಿಸಿದ್ದಾರೆ (ದೂರು ಸಂಖ್ಯೆ 10659342).
ಕೆಲ ದಿನಗಳ ಹಿಂದೆ ದೂರುದಾರರಿಗೆ ಬಿಬಿಎಂಪಿಯಿಂದ ನಿಮ್ಮ ದೂರು ಆಧರಿಸಿ ಪಾರ್ಕ್ ಅನ್ನು ದುರಸ್ತಿಗೊಳಿಸಲಾಗಿದೆ ಎಂದು ಬಿಬಿಎಂಪಿ ಸಹಾಯ ವಿಭಾಗದಿಂದ ಸಂದೇಶ ಕಳುಹಿಸಲಾಗಿದೆ. ಆದರೆ, ಅಸಲಿಯತ್ತು ನೋಡಿದರೆ ದೂರು ನೀಡುವ ಮೊದಲು ಪಾರ್ಕ್ ಹೇಗೆ ಹಾಳಾಗಿತ್ತೋ ಈಗಲೂ ಹಾಗೇ ಇದೆ. ಪಾರ್ಕ್ ನರಲ್ಲಿನ ಮಕ್ಕಳ ಆಟಿಕೆಗಳ ಜಾಗ ಸಂಪೂರ್ಣ ಗುಂಡಿಮಯವಾಗಿದೆ. ಆಟವಾಡಲು ಬಂದ ಮಕ್ಕಳು ಕೈಕಾಲು ಮುರಿದುಕೊಳ್ಳುವ ಸ್ಥಿತಿ ಇದೆ. ಅಲ್ಲದೆ,
ಜೋಕಾಲಿಯಲ್ಲಿ ಕೂರುವ ಕಬ್ಬಿಣ ತಗಡಿನ ಶೀಟುಗಳು ಮುರಿದು ಮುಟ್ಟಿದರೆ ಗಾಯ ಉಂಟು ಮಾಡುವ ಸ್ಥಿತಿ ತಲುಪಿವೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಮಾತ್ರ ಪಾರ್ಕ್‌ಅನ್ನು ಸಂಪೂರ್ಣ ದುರಸ್ತಿಗೊಳಿಸಲಾಗಿದೆ ಎಂದು ಸಂದೇಶ ಕಳುಹಿಸಿದ್ದಾರೆ ಎನ್ನುತ್ತಾರೆ ದೂರುದಾರರು.
ಅನುಮಾನ: ಈ ಪಾರ್ಕ್ ಸಮಸ್ಯೆಯ ದೂರು ಬಿಬಿಎಂಪಿ ಆಯುಕ್ತರ ಗಮನಕ್ಕೂ ಹೋಗಿತ್ತು. ಆಯುಕ್ತರು ಸಂಬಂಧಪಟ್ಟ ವಲಯ ಅಧಿಕಾರಿಗಳಿಗೆ ದೂರು ವರ್ಗಾಯಿಸಿದ್ದರು. ಆದರೂ, ಸ್ಥಳೀಯ ಅಧಿಕಾರಿಗಳು ಸ್ಪಂದಿಸದೆ ದೂರು ಪರಿಹರಿಸಿರುವುದಾಗಿ ತಪ್ಪು ಸಂದೇಶ ಕಳುಹಿಸಿದ್ದಾರೆ. ಸಮಸ್ಯೆ ಪರಿಹರಿಸದೆ ಈ ರೀತಿ ಸಂದೇಶ ಕಳುಹಿಸುತ್ತಿರುವುದರ ಹಿಂದೆ ಗೋಲ್‌ಮಾಲ್ ನಡೆಯುತ್ತಿದೆಯಾ? ಎಂಬ ಅನುಮಾನ ಕಾಡುತ್ತಿದೆ ಎನ್ನುತ್ತಾರೆ ದೂರುದಾರರು.ಇದು ಉದಾಹರಣೆಯಷ್ಟೆ. ‘ಬಿಬಿಎಂಪಿ ಸಹಾಯ’ದ ಮೂಲಕ ನೀಡಿದ ಇನ್ನೂ ಅನೇಕ ಜನರಿಗೆ ಇಂತಹದ್ದೇ ಸಂದೇಶಗಳು ಬಂದಿವೆ ಎಂಬ ದೂರುಗಳಿವೆ.
ಆ್ಯಪ್ ದೂರುಗಳಲ್ಲೂ ಇದೇ ಉತ್ತರ: ಸಾರ್ವಜನಿಕರ ದೂರುಗಳಿಗೆ ತುರ್ತಾಗಿ ಸ್ಪಂದಿಸಲು ಇತ್ತೀಚೆಗಷ್ಟೆ ಬಿಬಿಎಂಪಿ ಬಿಡುಗಡೆ ಮಾಡಿರುವ ‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್‌ನಲ್ಲಿ ನೀಡಲಾಗಿರುವ ಅನೇಕ ದೂರುಗಳಿಗೂ ಇದೇ ರೀತಿಯ ಉತ್ತರ ಬಂದಿದೆಯಂತೆ. ಆ್ಯಪ್ ಮೂಲಕ ದೂರು ದಾಖಲಿಸಿರುವ ಸಾರ್ವಜನಿಕರು ಈ ಬಗ್ಗೆ ಗೂಗಲ್‌ಪ್ಲೇ ಸ್ಟೋರ್‌ನಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಲಸುಬ್ರಹ್ಮಣ್ಯ ಎನ್ನುವವರು ನನ್ನ ದೂರಿಗೆ ಹತ್ತು ದಿನ ಕಳೆದರೂ ಯಾವ ಪರಿಹಾರವೂ ಸಿಕ್ಕಿಲ್ಲ (ದೂರು ಸಂಖ್ಯೆ 3990). ಆದರೆ, ಸಮಸ್ಯೆ ಬಗೆಹರಿಸಿರುವುದಾಗಿ ಬಿಬಿಎಂಪಿ ಹಿಮ್ಮಾಹಿತಿ ಮಾಹಿತಿ ಕಳುಹಿಸಿದೆ ಎಂದಿದ್ದರೆ, ರವೀಂದ್ರ ಪಾಂಡೆ ಎನ್ನುವವರು ‘ಆ್ಯಪ್ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳಲ್ಲ’ ಎಂದು ಟೀಕಿಸಿದ್ದಾರೆ.
ಮನ್‌ಜೀತ್ ಎನ್ನುವವರು ತಮ್ಮ ಮನೆಗೆ ಸಾಗುವ ರಸ್ತೆಯಲ್ಲಿ ಬೀದಿ ದೀಪಗಳಿಲ್ಲ. ಈ ಬಗ್ಗೆ ದೂರು ದಾಖಲಿಸಿದರೆ ಬಿಬಿಎಂಪಿ ಅಧಿಕಾರಿಗಳು ಒಂದು ಬೀದಿ ದೀಪವನ್ನೂ ಅಳವಡಿಸದೆ ನಿಮ್ಮ ದೂರನ್ನು ಪರಿಹರಿಸಲಾಗಿದೆ ಎಂದು ಸಂದೇಶ ಕಳುಹಿಸಿದ್ದಾರೆ ಎಂದು ದೂರಿದ್ದಾರೆ.
ಅದೇ ರೀತಿ ಪ್ರಭಾಕರ್ ಸುವರ್ಣ ಎನ್ನುವವರು ಬಿಬಿಎಂಪಿ ಸಹಾಯವಾಣಿ ಮೂಲಕ ದೂರು ಸಲ್ಲಿಸಿದರೆ ಪ್ರಯೋಜನವಾಗಲಿಲ್ಲ. ಈಗ ಆ್ಯಪ್ ಮೂಲಕವಾದರೂ ಪರಿಹಾರ ದೊರೆಯಬಹುದು ಎಂದುಕೊಂಡು ಆ್ಯಪ್ ಬಿಡುಗಡೆ ಮಾಡಿದ ಎರಡನೇ ದಿನವೇ ಬೀದಿ ದೀಪ ಸಮಸ್ಯೆ ಬಗ್ಗೆ ದೂರು ದಾಖಲಿಸಿದ್ದೆ. ಕೆಲವೇ ದಿನಗಳಲ್ಲಿ ಅಧಿಕಾರಿಗಳಿಂದ ದೂರು ಪರಿಹರಿಸಲಾಗಿದೆ ಎಂಬ ಸಂದೇಶ ಬಂದಿದೆ. ಆದರೆ, ಸಮಸ್ಯೆಗೆ ಪರಿಹಾರ ಮಾತ್ರ ದೊರೆತಿಲ್ಲ. ಬಿಬಿಎಂಪಿ ಕೇವಲ ಪ್ರಚಾರಕ್ಕಾಗಿ ಆ್ಯಪ್ ಬಿಡುಗಡೆ ಮಾಡಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
