"ಪಾಲಿಕೆಯ ಅಧಿಕಾರಿಗಳ ಮೇಲೆ ಮಾಡಿರುವ ಅವ್ಯವಹಾರ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪಾಲಿಕೆಯ ಯಾವುದೇ ಪ್ರಾಮಾಣಿಕ ಅಧಿಕಾರಿಯ ಮೇಲೆ ಸುಳ್ಳು ಆರೋಪ ಮಾಡಿ ಮಸಿ ಬಳಿಯುವ ಕೆಲಸಕ್ಕೆ ಮುಂದಾದರೆ ಸಹಿಸುವುದಿಲ್ಲ."

ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡಿರುವ ಬಿಜೆಪಿ ನಗರ ವಕ್ತಾರ ಎನ್.ಆರ್. ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 182ಅಡಿಯಲ್ಲಿ ದೂರು ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಗುರುವಾರದಂದು ಸುದ್ಧಿಗೋಷ್ಠಿ ಯಲ್ಲಿ ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು. ಆ ಹಿನ್ನೆಲೆಯಲ್ಲಿ ಅವರಿಗೆ ವಕೀಲರಿಂದ ನೋಟಿಸ್ ನೀಡಲು ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಯುಕ್ತರು, ಎಸಿಬಿಯಲ್ಲಿ ತನಿಖೆ ನಡೆಸುವಂತೆ ಪಾಲಿಕೆಯಿಂದಲೂ ದೂರು ನೀಡಲಾಗುವುದು. ತನಿಖೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದು ಸ್ಪಷ್ಟವಾದ ನಂತರ ಐಪಿಸಿ ಸೆಕ್ಷನ್ 182 ಅಡಿಯಲ್ಲಿ ದೂರು ದಾಖಲು ಮಾಡಲಾಗುವುದು.

ಪಾಲಿಕೆಯ ಅಧಿಕಾರಿಗಳ ಮೇಲೆ ಮಾಡಿರುವ ಅವ್ಯವಹಾರ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪಾಲಿಕೆಯ ಯಾವುದೇ ಪ್ರಾಮಾಣಿಕ ಅಧಿಕಾರಿಯ ಮೇಲೆ ಸುಳ್ಳು ಆರೋಪ ಮಾಡಿ ಮಸಿ ಬಳಿಯುವ ಕೆಲಸಕ್ಕೆ ಮುಂದಾದರೆ ಸಹಿಸುವುದಿಲ್ಲ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡುವುದು ಪಾಲಿಕೆಯ ಆಯುಕ್ತನಾಗಿ ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.

ಸರ್ಕಾರಿ ಉದ್ಯೋಗಿ ವಿರುದ್ಧ ಯಾವುದೇ ಒಬ್ಬ ವ್ಯಕ್ತಿ ಸುಳ್ಳು ಆರೋಪ ಮಾಡಿದರೆ, ಸರ್ಕಾರಿ ಉದ್ಯೋಗಿಗಳು 182 ಐಪಿಸಿ ಸೆಕ್ಷನ್ ಅಡಿಯಲ್ಲಿ ರಕ್ಷಣೆ ದೂರು ದಾಖಲಿಸಬಹುದಾಗಿದೆ. ಒಂದೊಮ್ಮೆ ವ್ಯಕ್ತಿ ಮಾಡಿರುವ ಆರೋಪಗಳು ಸುಳ್ಳು ಎಂಬುದು ತನಿಖೆಯಿಂದ ಸಾಬೀತಾದರೆ, ಆರೋಪ ಮಾಡಿದ ವ್ಯಕ್ತಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ನಿಯಮದಲ್ಲಿ ಅವಕಾಶವಿದೆ.

ಕನ್ನಡಪ್ರಭ ವಾರ್ತೆ
epaperkannadaprabha.com