ಭೂ ಮಾಪಕರ ಕೊರತೆ ಕಾರಣದಿಂದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ.
ಬೆಂಗಳೂರು(ಡಿ. 09): ನಗರದಲ್ಲಿ ಕೆಲ ತಿಂಗಳ ಹಿಂದೆ ಭಾರಿ ಸಂಚಲನ ಮೂಡಿಸಿ ಸ್ಥಗಿತಗೊಂಡಿದ್ದ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮತ್ತೆ ಚಾಲನೆ ದೊರೆತಿದೆ. ಭೂ ಮಾಪಕರ ಕೊರತೆಯಿಂದಾಗಿ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಗುರುವಾರ ಮತ್ತೆ ಆರಂಭಿಸಿದ್ದು, ಇನ್ನಾದರೂ ಈವರೆಗೆ ಗುರುತಿಸಿರುವ ಎಲ್ಲ ಒತ್ತುವರಿಯನ್ನು ತೆರವುಗೊಳಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.
ತೆರವು ಕಾರ್ಯಾಚರಣೆ ಶುರುವಿನಲ್ಲಿ ವೇಗವಾಗಿ ನಡೆದರೂ ಒತ್ತುವರಿದಾರರ ಪಟ್ಟಿಯಲ್ಲಿ ಪ್ರಭಾವಿಗಳ ಹೆಸರು ಕೇಳಿಬರುತ್ತಿದ್ದಂತೆ ವೇಗ ತಗ್ಗಿತು. ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರವಷ್ಟೇ ಆಯುಕ್ತರನ್ನು ಪ್ರಶ್ನಿಸಿದ್ದರು. ಅದರಂತೆ ಆಯುಕ್ತರ ಸೂಚನೆ ಮೇರೆಗೆ ಮಳೆ ನೀರು ಕಾಲುವೆ ವಿಭಾಗದ ಅಧಿಕಾರಿಗಳು ಗುರುವಾರದಿಂದಲೇ ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಯಲಹಂಕ ಉತ್ತರ ವಲಯದ ದೊಡ್ಡಬೆಟ್ಟಹಳ್ಳಿ ಹಾಗೂ ಚಿಕ್ಕ ಬೆಟ್ಟಹಳ್ಳಿಯಲ್ಲಿ ಖಾಸಗಿ ಡೆವಲಪರ್‌ಗಳಿಂದ ಒತ್ತುವರಿಯಾಗಿದ್ದ .4 ಕೋಟಿ ಮೌಲ್ಯದ 2.28 ಎಕರೆ ಜಾಗವನ್ನು ಬಿಬಿಎಂಪಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬೆಟ್ಟಹಳ್ಳಿ ಶಿಡ್ಲಗುಂಟೆ ಗ್ರಾಮದ ಸರ್ವೆ ನಂ.49ರಲ್ಲಿ 2.20 ಎಕರೆ ಹಾಗೂ ದೊಟ್ಟಬೆಟ್ಟಹಳ್ಳಿಯಲ್ಲಿ 8 ಗುಂಟೆ ಜಾಗವನ್ನು ಉಮ್ರಾನ್ ಡೆವಲಪರ್ಸ್ ಸಂಸ್ಥೆ ಒತ್ತುವರಿ ಮಾಡಿಕೊಂಡಿತ್ತು. ಒತ್ತುವರಿ ಮಾಡಿದ ಜಾಗದಲ್ಲಿ ಅನಧಿಕೃತವಾಗಿ ಕಾಂಪೌಂಡ್ ಹಾಗೂ ಶೆಡ್’ಗಳನ್ನು ನಿರ್ಮಾಣ ಮಾಡಿತ್ತು. ಈ ಸಂಬಂಧ ಒತ್ತುವರಿದಾರರಾದ ಉಮ್ರಾನ್ ಡೆವಲಪರ್ಸ್’ಗೆ ನ.22ರಂದು ನೋಟಿಸ್ ಜಾರಿಗೊಳಿಸಿ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು.
ಹೀಗಿದ್ದರೂ ಒತ್ತುವರಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ತಂಡವು ಗುರುವಾರ ಬೆಳಗ್ಗೆ ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಸಿದ್ದೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿದೆ. ಸಂಬಂಧಪಟ್ಟಜಾಗವನ್ನು ಪಾಲಿಕೆ ವಶಕ್ಕೆ ಪಡೆದು ತಂತಿ ಬೇಲಿ ಅಳವಡಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
246 ಪೂರ್ಣ, 855 ಬಾಕಿ: ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿ ನಾಲ್ಕು ತಿಂಗಳು ಕಳೆದಿದೆ. ಆದರೆ, ಈವರೆಗೆ ಬಿಬಿಎಂಪಿ ಅಧಿಕಾರಿಗಳು ಕೇವಲ 246 ಪ್ರಕರಣಗಳಲ್ಲಿನ ಒತ್ತುವರಿ ಮಾತ್ರ ತೆರವುಗೊಳಿಸಿದ್ದು, ಇನ್ನೂ 855 ಪ್ರಕರಣಗಳು ಬಾಕಿ ಉಳಿದಿವೆ.
ಕೆಲ ತಿಂಗಳ ಹಿಂದೆ ನಗರದಲ್ಲಿ ಸುರಿದ ಭಾರಿ ಮಳೆಗೆ ಹಲವು ಭಾಗಗಳು ಜಲಾವೃತಗೊಂಡು ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲಿಕೆ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿಯನ್ನು ನಾಲ್ಕು ತಿಂಗಳೊಳಗೆ ತೆರವುಗೊಳಿಸುವಂತೆ ಆದೇಶಿದರು. ಅದರಂತೆ ಪಾಲಿಕೆಯ ಅಧಿಕಾರಿಗಳು ಆ.6ರಂದು ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿ ನಗರದಲ್ಲಿ ಕಾಲುವೆ ಮೇಲೆ ನಿರ್ಮಾಣವಾಗಿದ್ದ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ಆರಂಭಿಸಿದ್ದರು.
ಶುರುವಿನಲ್ಲಿ ಉತ್ಸಾಹದಲ್ಲಿ ಕಾರ್ಯಾಚರಣೆ ನಡೆಸಿದ್ದು, ಪ್ರಭಾವಿಗಳ ಹೆಸರುಗಳು ಕೇಳಿಬರುತ್ತಿದ್ದಂತೆ ದಿಢೀರ್ ಸ್ಥಗಿತಗೊಳಿಸಿತ್ತು. ಈ ನಡುವೆ ಹಲವು ಬಾರಿ ಕೆಲ ಭಾಗಗಳಲ್ಲಿ ಕಾರ್ಯಾಚರಣೆ ನಡೆದರೂ ಸರ್ವೆಯರ್‌ಗಳ ಕೊರತೆ, ಸರ್ಕಾರಿ ರಜೆಗಳು, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಸೇರಿದಂತೆ ಹತ್ತಾರು ಕಾರಣಗಳಿಂದ ಕಳೆದ ಎರಡು ತಿಂಗಳಿಂದ ಯಾವುದೇ ಭಾಗದಲ್ಲಿ ಕಾರ್ಯಾಚರಣೆ ಕೈಗೊಂಡಿರಲಿಲ್ಲ. ಇದು ಸಹಜವಾಗಿಯೇ ಜನರಲ್ಲಿ ಸಂದೇಹಗಳನ್ನು ಸೃಷ್ಟಿಸಿತ್ತು. ಇದೀಗ ತೆರವು ಕಾರ್ಯಾಚರಣೆ ಮತ್ತೆ ಶುರುವಾಗಿದ್ದು, ಬಾಕಿಯಿರುವ 855 ಒತ್ತುವರಿಯನ್ನು ತೆರವುಗೊಳಿಸುವ ದಿಟ್ಟತನವನ್ನು ಪಾಲಿಕೆ ತೋರುವುದೇ ಎಂಬ ಪ್ರಶ್ನೆ ಮೂಡಿದೆ.
(ಕನ್ನಡಪ್ರಭ ವಾರ್ತೆ – epaper.kannadaprabha.in)
