ಬೆಂಗಳೂರು (ಆ. 20):  ಬಿಬಿಎಂಪಿ ಮಂಡಿಸಿದ್ದ 13 ಸಾವಿರ ಕೋಟಿ ರು. ಬಜೆಟ್‌ಗೆ ಹಣಕಾಸು ಇಲಾಖೆ ಆಕ್ಷೇಪಣೆಯನ್ನು ಪರಿಗಣಿಸದೇ 11 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ, ಸಚಿವ ಸಂಪುಟದ ಅನುಮೋದನೆ ಪಡೆಯದೇ ಬಜೆಟ್‌ ಅನುಷ್ಠಾನ ಸಾಧ್ಯವಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ನಿಷೇಧದ ನಡುವೆಯೂ ಪಿಒಪಿ ಗಣೇಶನ ಅಬ್ಬರ!

ರಾಜ್ಯ ಸರ್ಕಾರ ಪಾಲಿಕೆಯ ಬಜೆಟ್‌ಗೆ ತಡೆ ಹಿಡಿದಿರುವ ಕುರಿತು ಸೋಮವಾರ ನಡೆದ ಬಿಬಿಎಂಪಿ ವಿಶೇಷ ಕೌನ್ಸಿಲ್‌ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಯುಕ್ತ ಮಂಜುನಾಥ್‌ ಪ್ರಸಾದ್‌, 2019-20ನೇ ಸಾಲಿನಲ್ಲಿ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಆಯುಕ್ತರು ನೀಡಿದ ಕರಡು ಬಜೆಟ್‌ ಆಧರಿಸಿ 12,961 ಕೋಟಿ ರು. ಮೊತ್ತದ ಬಜೆಟ್‌ ಮಂಡನೆ ಮಾಡಿ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು.

ಆಯುಕ್ತರಾಗಿ ತಾವು ಕಳೆದ ಎಂಟು ಹತ್ತು ವರ್ಷದ ಪಾಲಿಕೆ ಮಂಡಿಸಿದ ಬಜೆಟ್‌ ಮೊತ್ತ, ಪಾಲಿಕೆ ಆದಾಯ, ವೆಚ್ಚ, ಕಾಮಗಾರಿಗಳ ಬಾಕಿ ಬಿಲ್‌ ಪಾವತಿ ಮೊತ್ತ, ಬಜೆಟ್‌ ಅನುಷ್ಠಾನದ ಪ್ರಮಾಣ ಸೇರಿದಂತೆ ಪಾಲಿಕೆಯ ಒಟ್ಟಾರೆ ಆರ್ಥಿಕ ಸ್ಥಿತಿಗತಿಯ ಸಂಪೂರ್ಣ ಅಂಕಿ ಅಂಶ ನೀಡಿ 2019-20ನೇ ಸಾಲಿನ ಬಜೆಟ್‌ನ್ನು ಒಂಬತ್ತು ಸಾವಿರ ಕೋಟಿ ರು. ದಾಟದಂತೆ ನಗರಾಭಿವೃದ್ಧಿ ಇಲಾಖೆಗೆ ಶಿಫಾರಸು ಮಾಡಲಾಗಿತ್ತು.

ಅದರಂತೆ ನಗರಾಭಿವೃದ್ಧಿ ಇಲಾಖೆ ಬಜೆಟ್‌ ಪರಿಶೀಲನೆಗೆ ಹಣಕಾಸು ಇಲಾಖೆಗೆ ವರ್ಗಾವಣೆ ಮಾಡಿತ್ತು. ಹಣಕಾಸು ಇಲಾಖೆ ಪರಿಶೀಲನೆ ಮಾಡಿ 13 ಸಾವಿರ ಕೋಟಿ ರು. ಬಜೆಟ್‌ಗೆ ಅನುಮೋದನೆ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ.

ಪಾಲಿಕೆಯ ವರಮಾನ ಮತ್ತು ವೆಚ್ಚ ಆಧರಿಸಿ 9 ಸಾವಿರ ಕೋಟಿ ರು.ಗೆ ಅನುಮೋದನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಶಿಫಾರಸು ಮಾಡಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆ ಹಣಕಾಸು ಇಲಾಖೆಯ ಶಿಫಾರಸು ಕಡೆಗಣಿಸಿ, 11,648 ಕೋಟಿ ರು. ಬಜೆಟ್‌ಗೆ ಅನುಮೋದನೆ ನೀಡಿತ್ತು. ಉಳಿದಂತೆ 1,300 ಕೋಟಿ ರು. ಮೊತ್ತವನ್ನು ಪೂರಕ ಬಜೆಟ್‌ನಲ್ಲಿ ಸೇರಿಸಿಕೊಳ್ಳುವಂತೆ ಬಿಬಿಎಂಪಿಗೆ ಸೂಚಿಸಲಾಗಿತ್ತು.

ನಿಯಮ (ಟ್ರಾನ್ಸ್ಯಾಕ್ಷನ್‌ ಬ್ಯುಸಿನೆಸ್‌ ರೂಲ್ಸ್‌ )ದ ಪ್ರಕಾರ ಹಣಕಾಸು ಇಲಾಖೆಯ ಶಿಫಾರಸನ್ನು ಸಚಿವ ಸಂಪುಟ ಹೊರತು ಪಡಿಸಿ ಬೇರೆ ಇಲಾಖೆ ಕಡೆಗಣಿಸಲು ಸಾಧ್ಯವಿಲ್ಲ. ಆದರೂ, ನಗರಾಭಿವೃದ್ಧಿ ಇಲಾಖೆ ಆದೇಶದಂತೆ ಬಿಬಿಎಂಪಿ ಬಜೆಟ್‌ ಅನುಷ್ಠಾನದಲ್ಲಿ ತೊಡಗಿತ್ತು.

ರಾಜಭವನದಲ್ಲಿ ಪ್ರಮಾಣ ವಚನ: ಸಿಎಂ ಯಡಿಯೂರಪ್ಪ ಸಂಪುಟ ಸೇರಿದ ಸಚಿವರಿವರು!

ಆದರೆ, ಬಜೆಟ್‌ಗೆ ಸಚಿವ ಸಂಪುಟ ಅನುಮೋದನೆ ಕಡ್ಡಾಯವಾದ ಕಾರಣ, ಈಗ ಸರ್ಕಾರ ಅದನ್ನು ಸಂಪುಟದಲ್ಲಿ ಅನುಮೋದನೆ ಮಾಡಲು ಮುಂದಾಗಿದೆ. ಸರ್ಕಾರ ಅನುಮೋದನೆ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಸ್ಪಷ್ಟನೆ ನೀಡಿದರು.

ಹೊಸ ಸಂಪ್ರದಾಯಕ್ಕೆ ನಾಂದಿ:

ಇದಕ್ಕೂ ಮುನ್ನ ಮಾತನಾಡಿದ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಪಾಲಿಕೆ ಇತಿಹಾಸದಲ್ಲಿ ಯಾವುದೇ ಸರ್ಕಾರ ಬಜೆಟ್‌ಗೆ ತಡೆ ನೀಡಿರಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಮೊದಲ ಬಾರಿಗೆ ಬಜೆಟ್‌ ತಡೆ ಹಿಡಿಯುವ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದು ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ.

ಬಜೆಟ್‌ ತಡೆ ನೀಡಿದ್ದರಿಂದಾಗಿ ತ್ಯಾಜ್ಯ ನಿರ್ವಹಣೆಗೆ ಗುತ್ತಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳ ಅನುಷ್ಠಾನ, ಇಂದಿರಾ ಕ್ಯಾಂಟೀನ್‌ ನಿರ್ವಹಣೆ, ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ನೀಡುವುದು, ಗಣೇಶ ಹಬ್ಬಕ್ಕೆ ತಯಾರಿ ಮಾಡಲು ಹಣವಿಲ್ಲದಂತಾಗಿದೆ. ಆ ಎಲ್ಲ ಕಾರಣಗಳಿಂದ ಕೂಡಲೆ ಬಜೆಟ್‌ಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌-ಕಾಂಗ್ರೆಸ್‌ ವಚನಭ್ರಷ್ಟ

ಬಳಿಕ ಮಾತನಾಡಿದ ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಸಿದ್ದರಾಮಯ್ಯಸರ್ಕಾರದ ಅವಧಿಯಲ್ಲಿ 20 ಸಾವಿರ ಕೋಟಿ ರು.ಗೂ ಹೆಚ್ಚಿನ ಅನುದಾನವನ್ನು ಪಾಲಿಕೆಗೆ ನೀಡುವುದಾಗಿ ಘೋಷಿಸಿತ್ತು. ಆದರೆ, ಅದರಲ್ಲಿ ಶೇ.50 ಅನುದಾನವನ್ನು ನೀಡಿಲ್ಲ.

ಇನ್ನೂ 10 ಸಾವಿರ ಕೋಟಿ ರು.ಅನುದಾನ ಬರಬೇಕಿದೆ. ಕಳೆದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಎಂಟು ಸಾವಿರ ಕೋಟಿ ರು. ನೀಡುವುದಾಗಿ ಘೋಷಿಸಿತ್ತು. ಆದರೆ, ಈವರೆಗೆ ಎಂಟು ಪೈಸೆಯನ್ನು ನೀಡದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಚನಭ್ರಷ್ಟಆಡಳಿತ ನೀಡಿವೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಬಿಬಿಎಂಪಿ ಬಜೆಟ್‌ ತಡೆ ಹಿಡಿದಿರುವುದು ತಾಂತ್ರಿಕ ಕಾರಣಗಳಿಂದ. ಸಚಿವ ಸಂಪುಟ ಅನುಮೋದನೆ ಪಡೆಯದೆ ಬಜೆಟ್‌ ಅನುಷ್ಠಾನ ಸಾಧ್ಯವಿಲ್ಲ. ಹೀಗಾಗಿ ಬಜೆಟ್‌ಗೆ ತಡೆ ನೀಡಲಾಗಿದೆ. ಇನ್ನು ನಾಲ್ಕೈದು ದಿನದಲ್ಲಿ ಬಜೆಟ್‌ಗೆ ಅನುಮೋದನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಆಗ ಮಧ್ಯಪ್ರವೇಶಿಸಿದ ಮಾಜಿ ಮೇಯರ್‌ ಮಂಜುನಾಥರೆಡ್ಡಿ, ವಚನಭ್ರಷ್ಟಎಂಬ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಕಡತದಿಂದ ಅದನ್ನು ತೆಗೆದು ಹಾಕುವಂತೆ ಮೇಯರ್‌ರಲ್ಲಿ ಆಗ್ರಹಿಸಿದರು. ಮೇಯರ್‌ ಗಂಗಾಂಬಿಕೆ, ಆ ಮಾತುಗಳನ್ನು ಕಡತದಿಂದ ತೆಗೆಯುವಂತೆ ಸೂಚಿಸಿದರು.

ದುರಂತ ನಾಯಕ; ಅಯೋಗ್ಯ ಮೇಯರ್‌

ಬಜೆಟ್‌ ಬಗ್ಗೆ ಚರ್ಚೆ ವೇಳೆ ಮಾಜಿ ಮೇಯರ್‌ ಮಂಜುನಾಥ್‌ ರೆಡ್ಡಿ ಅವರು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಬಿಜೆಪಿಯ ದುರಂತ ನಾಯಕ. ಕಳೆದ ನಾಲ್ಕು ವರ್ಷದಿಂದ ಬಿಜೆಪಿ ಸದಸ್ಯರನ್ನು ಕತ್ತಲಲ್ಲಿಟ್ಟಿದ್ದಾರೆ ಎಂದರು. ಅದಕ್ಕೆ ಸಿಟ್ಟಿಗೆದ್ದ ಪದ್ಮನಾಭ ರೆಡ್ಡಿ, ನೀವು ಬಿಬಿಎಂಪಿ ಕಂಡ ಅಯೋಗ್ಯ ಮೇಯರ್‌ ಎಂದು ತಿರುಗೇಟು ನೀಡಿದರು.

ಪದ್ಮನಾಭರೆಡ್ಡಿ ಸರ್ಕಾರ ಬಜೆಟ್‌ ತಡೆ ಹಿಡಿದಿರುವುದನ್ನು ಸಮರ್ಥನೆ ಮಾಡಿಕೊಳ್ಳುವ ವೇಳೆ ಮಧ್ಯಪ್ರವೇಶ ಮಾಡಿದ ಆಡಳಿತ ಪಕ್ಷದ ಮಾಜಿ ನಾಯಕ ಶಿವರಾಜ್‌ ಅವರು ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಪದ್ಮನಾಭ ರೆಡ್ಡಿರನ್ನು ತಡೆಯುವುದಕ್ಕೆ ಮುಂದಾದರು. ಆಗ ಕೋಪಗೊಂಡ ಪದ್ಮನಾಭರೆಡ್ಡಿ ಏಕವಚನದಲ್ಲಿ ನೀನ್ಯಾರು ನಾನು ಮಾತನಾಡುವುದನ್ನು ತಡೆಯುವುದಕ್ಕೆ ಎಂದು ವಾಗ್ವಾದಕ್ಕೆ ಇಳಿದ ಘಟನೆ ನಡೆಯಿತು.

ಬಜೆಟ್‌ ಅನುಮೋದನೆಗೆ ಕೈ ಹೋರಾಟ

ಬಜೆಟ್‌ ಅನುಮೋದನೆ ನೀಡಿಕೆ ವಿಷಯದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ. ಬೆಂಗಳೂರಿನ ಜನರು ನಗರದ ಅಭಿವೃದ್ಧಿ ಉದ್ದೇಶದಿಂದ ಬಿಜೆಪಿಯ ನಾಲ್ವರು ಸಂಸದರನ್ನು ಆಯ್ಕೆ ಮಾಡಿ ಕೊಡುಗೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಬಜೆಟ್‌ಗೆ ಅನುಮೋದನೆ ನೀಡದ್ದರೆ ಕಾಂಗ್ರೆಸ್‌ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ಸದಸ್ಯ ಎಂ.ಶಿವರಾಜು ಎಚ್ಚರಿಕೆ ನೀಡಿದರು.

ಏಟು ಎದುರೇಟು

ಶಾಸಕ ಸತೀಶ್‌ ರೆಡ್ಡಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಅನುದಾನ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ. ಕಾಂಗ್ರೆಸ್‌ ಶಾಸಕರು, ಸದಸ್ಯರಿಗೆ ಕೋಟಿ ಲೆಕ್ಕದಲ್ಲಿ ಅನುದಾನ ಕೊಟ್ಟು, ಬಿಜೆಪಿ ಶಾಸಕರು ಮತ್ತು ಸದಸ್ಯರಿಗೆ ಲಕ್ಷದ ಲೆಕ್ಕದಲ್ಲಿ ಅನುದಾನ ನೀಡಲಾಗಿದೆ. ಈಗ ನಮ್ಮ ಸರ್ಕಾರ ಬಂದಿದೆ. ನಾವು ನಿಮ್ಮಂತೆ ಅನುದಾನಕ್ಕೆ ತಾರತಮ್ಯ ಮಾಡುವುದಿಲ್ಲ. ಎಲ್ಲರಿಗೂ ಸಮಾನವಾಗಿ ಅನುದಾನ ನೀಡುತ್ತೇವೆ ಎಂದರು.

ಇದಕ್ಕೆ ಪ್ರಕ್ರಿಯಿಸಿದ ಮಾಜಿ ಮೇಯರ್‌ ಪದ್ಮಾವತಿ, ಅತಿ ಹೆಚ್ಚು ಅನುದಾನ ತೆಗೆದುಕೊಂಡವರೆಲ್ಲ ನಿಮ್ಮ ಬಳಿಯೇ ಬಂದಿದ್ದಾರೆ. ಇಲ್ಲಿ ಅನುದಾನ ಪಡೆದು, ಅಲ್ಲಿಗೆ ಶಿಫ್ಟ್‌ ಆಗಿದ್ದಾರೆ ಎಂದು ತಿರುಗೇಟು ನೀಡಿದರು.