ಬೆಂಗಳೂರು (ಆ. 20):  ಗಣೇಶ ಚತುರ್ಥಿ ಉತ್ಸವಕ್ಕೂ ಮೊದಲು ಪ್ರತಿ ಬಾರಿಯೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿ ಮಾರಾಟ ಹಾಗೂ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡುತ್ತವೆ.

ಬಳಿಕ ಕೊನೆ ಕ್ಷಣದಲ್ಲಿ, ಪಿಒಪಿ ಮಾಫಿಯಾಗೆ ಮಣಿದು ನಿಷೇಧಿತ ಮೂರ್ತಿಗಳಿಗೆ ಮುಕ್ತ ಮಾರಾಟ ವ್ಯವಸ್ಥೆ ಕಲ್ಪಿಸುತ್ತವೆ. ಈ ಪ್ರವೃತಿ ಇತ್ತೀಚಿನ ವರ್ಷಗಳಲ್ಲಿ ‘ಸಂಪ್ರದಾಯ’ದಂತೆ ಬೆಳೆದುಬಂದಿದೆ.

ಪಿಒಪಿ ಗಣೇಶ ರಚನೆ, ಮಾರಾಟ ಮಾಡಿದ್ರೆ ಟ್ರೇಡ್‌ ಲೈಸೆನ್ಸ್‌ ರದ್ದು

- ಪ್ರತಿ ವರ್ಷದಂತೆ ಈ ಬಾರಿಯೂ ಉಭಯ ಸಂಸ್ಥೆಗಳ ಮುಖಸ್ಥರು ಇಂಥದ್ದೇ ಎಚ್ಚರಿಕೆಯನ್ನು ಮಾರಾಟಗಾರರು ಹಾಗೂ ಗಣೇಶ ಉತ್ಸವ ಆಚರಣಾ ಸಮಿತಿಗಳಿಗೆ ರವಾನಿಸಿದ್ದಾರೆ. ಆದರೆ, ಪ್ರಸಕ್ತ ವರ್ಷವಾದರೂ ಪಿಒಪಿ ಮೂರ್ತಿಗಳ ಮಾರಾಟಗಾರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪರಿಸರ ಕಾಳಜಿ ಮೆರೆಯುತ್ತಾರಾ? ಅಥವಾ ಕೊನೆ ಕ್ಷಣದಲ್ಲಿ ತಟಸ್ಥ ಧೋರಣೆ ಅನುಸರಿಸುವ ಮೂಲಕ ಪಿಒಪಿ ನಿಷೇಧದ ನಿಯಮಗಳನ್ನು ಗಾಳಿಗೆ ತೂರುತ್ತಾರಾ ಎಂಬ ಕುತೂಹಲ ಮೂಡಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ತೀರ್ಪಿನ ಅನ್ವಯ 2016ರಲ್ಲೇ ರಾಜ್ಯದಲ್ಲಿ ಪಿಒಪಿ ಮೂರ್ತಿಗಳನ್ನು ನಿಷೇಧಿಸಲಾಗಿದೆ. ಅಲ್ಲದೆ, ಬೆಂಗಳೂರು ನಗರದಲ್ಲಿ ಪಿಒಪಿ ಮೂರ್ತಿಗಳ ಮಾರಾಟ ಮಾಡುವವರ ವ್ಯಾಪಾರ ಪರವಾನಗಿ ರದ್ದುಪಡಿಸಿ, ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಬಿಬಿಎಂಪಿ ಆದೇಶ ಹೊರಡಿಸಿತ್ತು. ಹೀಗಿದ್ದರೂ ಕಳೆದ ಮೂರು ವರ್ಷಗಳಿಂದಲೂ ಪಿಒಪಿ ಮೂರ್ತಿಗಳ ಉತ್ಪಾದನೆ ಹಾಗೂ ಮಾರಾಟ ದಂಧೆ ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ಬೆಂಗಳೂರು ನಗರದ ಮಾರುಕಟ್ಟೆಗೆ ದೇಶದ ವಿವಿಧ ರಾಜ್ಯಗಳಿಂದಲೂ ಪಿಒಪಿ ಮೂರ್ತಿಗಳ ಬರುತ್ತಿವೆ. ಹೀಗಿದ್ದರೂ ಕ್ರಿಮಿನಲ್‌ ಪ್ರಕರಣ ದಾಖಲಿಸುವುದು ಇರಲಿ ಕನಿಷ್ಠ ಒಂದು ವ್ಯಾಪಾರ ಪರವಾನಿಗಿಯೂ ರದ್ದಾಗಿಲ್ಲ. ಇದು ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಎಷ್ಟರ ಮಟ್ಟಿಗೆ ಪಿಒಪಿ ಮೂರ್ತಿಗಳ ನಿಷೇಧದ ಪರವಾಗಿವೆ ಎಂಬುದಕ್ಕೆ ಕನ್ನಡಿ ಎನ್ನುತ್ತಾರೆ ಪರಿಸರ ತಜ್ಞರು.

ಪ್ರತಿ ವರ್ಷವೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಯಮ ರೂಪಿಸುವುದು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡುವುದಷ್ಟೇ ನಮ್ಮ ಕರ್ತವ್ಯ. ನಿಷೇಧಿತ ಪಿಒಪಿ ಬಳಕೆ ತಡೆಯಲು ನಮಗೆ ಅವಕಾಶವಿಲ್ಲ ಎಂದು ಕೈ ಕಟ್ಟಿಕೂರುತ್ತದೆ.

ಇದೀಗ ನೂತನವಾಗಿ ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಡಾ.ಕೆ. ಸುಧಾಕರ್‌, ಏಕಾಏಕಿ ದಾಳಿ ನಡೆಸಿ 2,450 ಪಿಒಪಿ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಬಾರಿಯಾದರೂ ಕಟ್ಟುನಿಟ್ಟಿನ ನಿಷೇಧ ಜಾರಿಯಾಗುತ್ತದೆ ಎಂಬ ಸಣ್ಣ ಆಸೆ ಮೊಳಕೆ ಹೊಡೆಯುವಂತೆ ಮಾಡಿದ್ದಾರೆ.

ಇನ್ನು ಮುಂದೆಯೂ ಇದೇ ರೀತಿ ಕ್ರಮ ಮುಂದುವರೆಸುತ್ತಾರಾ? ಅಥವಾ ಪಿಒಪಿ ಮೂರ್ತಿಗಳ ಉತ್ಪಾದಕರು ಹಾಗೂ ಮಾರಾಟಗಾರರು ಇವರನ್ನೂ ಯಾಮಾರಿಸುತ್ತಾರಾ ಕಾದು ನೋಡಬೇಕು.

ನಗರಕ್ಕೆ ಕಾಲಿಟ್ಟ ವಿಷಕಾರಿ ಮೂರ್ತಿಗಳು:

ಪ್ರತಿ ಬಾರಿಯೂ ಗಣೇಶ ಚತುರ್ಥಿ ಮಾಸದಲ್ಲಿ ಮಾತ್ರ ಉತ್ಸಾಹ ತೋರುವ ಅಧಿಕಾರಿಗಳು ಬಳಿಕ ತಣ್ಣಗಾಗುತ್ತಾರೆ. ವರ್ಷ ಪೂರ್ತಿ ಈ ಪಿಒಪಿ ನಿಷೇಧದ ನಿಯಮದ ಅನುಷ್ಠಾನದತ್ತ ಗಮನ ನೀಡುವುದಿಲ್ಲ. ಹೀಗಾಗಿ ನಾಲ್ಕೈದು ತಿಂಗಳು ಮುಂಚಿತವಾಗಿಯೇ ಗ್ರಾಹಕರಿಂದ ಆರ್ಡರ್‌ ಗಿಟ್ಟಿಸಿಕೊಂಡು ಪಿಒಪಿ (ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ) ಗಣೇಶಮೂರ್ತಿಗಳ ಉತ್ಪಾದನೆಯಲ್ಲಿ ತೊಡಗಿದ್ದವರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. ವಿವಿಧ ಭಂಗಿಗಳಲ್ಲಿ ಆಕರ್ಷಕ ಬಣ್ಣಗಳಿಂದ ಕಂಗೊಳಿಸುವ 20 ಸಾವಿರಕ್ಕೂ ಹೆಚ್ಚು ಮೂರ್ತಿಗಳು ಗಣೇಶಮೂರ್ತಿ ಮಾರಾಟದ ಅಂಗಡಿಗಳ ಪೆಂಡಲ್‌ ಕೆಳಗೆ ಕುಳಿತಿವೆ.

ಭಕ್ತರನ್ನು ಪರಿಸರ ಸ್ನೇಹಿ ಗಣೇಶನತ್ತ ಸೆಳೆಯಲು ವಿವಿಧ ಸಂಘಸಂಸ್ಥೆಗಳಿಂದ ಜಾಗೃತಿ ಶಿಬಿರಗಳು, ಉಚಿತ ಪರಿಸರ ಸ್ನೇಹಿ ಗಣೇಶಮೂರ್ತಿಗಳ ವಿತರಣೆ, ಆಕರ್ಷಕ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಜಾಗೃತಿ ಕಾರ್ಯಕ್ರಮಗಳು ನಡೆದರೂ ಪಿಒಪಿ ಮೂರ್ತಿಗಳ ಮಾರಾಟದ ಭರಾಟೆ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.

ನಿಯಮಗಳ ವ್ಯಾಪಕ ಉಲ್ಲಂಘನೆ:

ನಿಯಮಗಳ ಪ್ರಕಾರ ವಶಪಡಿಸಿಕೊಂಡಿರುವ ಮೂರ್ತಿಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ವಿಲೇವಾರಿ ಮಾಡಬೇಕು ಅಥವಾ ಕ್ವಾರಿಗಳಲ್ಲಿ ವಿಸರ್ಜನೆ ಮಾಡಬೇಕು. ಸಂಬಂಧಪಟ್ಟಘಟಕಗಳ ಮಾಲೀಕರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಆದರೆ, ಯಾವುದೇ ನಿಯಮ ಪಾಲಿಸದ ಅಧಿಕಾರಿಗಳು ಬೀಗ ಜಡಿದು ಸುಮ್ಮನಾಗಿದ್ದಾರೆ.

ಪಿಒಪಿ ಮೂರ್ತಿಗಳಲ್ಲಿರುವ ರಾಸಾಯನಿಕ ಬಣ್ಣಗಳು ನೀರಿಗೆ ವಿಸರ್ಜನೆಯಾದರೆ ಜಲಮೂಲದ ಮೇಲೆ ಅವಲಂಬಿಸಿರುವ ಎಲ್ಲಾ ಜೀವ ರಾಶಿಗಳಿಗೂ ಕಂಟಕ. ಪರಿಸರ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ನಡೆಸುವ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ ಜವಾಬ್ದಾರಿ ವಹಿಸಿ ಪಿಒಪಿ ನಿಷೇಧಿಸಬೇಕು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ. ಹೀಗಿದ್ದರೂ ಯಾವ ನಿಯಮವೂ ಪಾಲನೆಯಾಗುತ್ತಿಲ್ಲ.

1 ಲಕ್ಷ ಪಿಒಪಿ ಗಣೇಶ ಮೂರ್ತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಸುಮಾರು 1 ಲಕ್ಷದಿಂದ 2 ಲಕ್ಷದವರೆಗೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಸರ್ಜಿಸಲಾಗುತ್ತದೆ. ಇದರಲ್ಲಿ 1 ಲಕ್ಷಕ್ಕೂ ಹೆಚ್ಚು ಮೂರ್ತಿಗಳು ಪಿಒಪಿ ಮೂರ್ತಿಗಳಾಗಿರುತ್ತವೆ. 150 ರು.ಗಳಿಂದ 1 ಲಕ್ಷ ರು.ವರೆಗೆ ಮಾರಾಟವಾಗುವ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಸರಾಸರಿ 5 ಸಾವಿರ ರು.ಗಳಂತೆ ಪರಿಗಣಿಸಿದರೂ ಪಿಒಪಿ ಮೂರ್ತಿಗಳ ಮಾರುಕಟ್ಟೆಬರೋಬ್ಬರಿ 50 ಕೋಟಿ ರು. ಮೌಲ್ಯದ್ದಾಗಿದೆ. ವರ್ಷದಲ್ಲಿ ಭರ್ತಿ ಎರಡು ತಿಂಗಳು ನಡೆಯುವ ಮೂರ್ತಿಗಳ ಮಾರಾಟ ಭಾರಿ ಪ್ರಮಾಣದ ಹಣ ವಹಿವಾಟಿನಿಂದ ಕೂಡಿದೆ. ಹೀಗಾಗಿ ಪಿಒಪಿ ಮಾಫಿಯಾಗೆ ಲಗಾಮು ಹಾಕುವುದು ಕಷ್ಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಾರಿ ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ. ಈಗಾಗಲೇ ನಗರದ ಹಲವೆಡೆ ಬಿಬಿಎಂಪಿ ಸಿಬ್ಬಂದಿ ಮತ್ತು ತನಿಖಾ ದಳ ದಾಳಿ ನಡೆಸಿ ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮುಂದೆ ಇನ್ನೂ ಹೆಚ್ಚಿನ ನಿಗಾ ವಹಿಸಿ ದಾಳಿ ನಡೆಸಲಾಗುವುದು. ಪಿಒಪಿ ಮೂರ್ತಿಗಳ ತಯಾರಿಸುವುದು ಹಾಗೂ ಮಾರಾಟ ಮಾಡುವ ಬಗ್ಗೆ ಗಮನಕ್ಕೆ ಬಂದರೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡಬಹುದು.

- ಎನ್‌. ಮಂಜುನಾಥ ಪ್ರಸಾದ್‌, ಆಯುಕ್ತರು, ಬಿಬಿಎಂಪಿ