ಹುಬ್ಬಳ್ಳಿ :  ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದುದರಿಂದ ಸಚಿವ ಸ್ಥಾನ ತಪ್ಪಿದೆ ಎಂದು ವಿಧಾನ ಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಅಸಮಾಧಾನ ಹೊರಹಾಕಿದ್ದಾರೆ. ಆದರೆ, ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷ ಬಿಡುವುದಿಲ್ಲ, ಸಚಿವ ಸ್ಥಾನಕ್ಕಾಗಿ ಹೋರಾಟವನ್ನೂ ಮಾಡಲ್ಲ. ಶಾಸಕನಾಗಿ ಶಿಕ್ಷಕರ ಏಳ್ಗೆಗೆ ಶ್ರಮಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ಲಿಂಗಾಯತ ಧರ್ಮದ ಪರ ಹೋರಾಟ ಮಾಡಿದ್ದೇ ದೊಡ್ಡ ಅಪರಾಧವಾದಂತಾಗಿದೆ. ಕೆಲ ಸ್ವಾಮೀಜಿಗಳು ನನಗೆ ಸಚಿವ ಸ್ಥಾನ ನೀಡಿದರೆ ಧರ್ಮ ಒಡೆಯುತ್ತಾರೆ ಎಂದು ಗುಲ್ಲೆಬ್ಬಿಸಿದರು. ಕೆಲ ಉಡಾಫೆ ಸ್ವಾಮಿಗಳು ಹೋರಾಟವನ್ನು ತಪ್ಪಾಗಿ ಬಿಂಬಿಸಿದರು ಎಂದರು.

ನಾನು ಪಕ್ಷಕ್ಕೆ ಅಂಟಿಕೊಂಡು ಲಿಂಗಾಯತ ಹೋರಾಟ ಮಾಡಿಲ್ಲ. ಈ ವಿಷಯವನ್ನು ಪಕ್ಷದ ವರಿಷ್ಠ ದೇವೇಗೌಡರಿಗೂ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಸ್ಪಷ್ಟಪಡಿಸಿದ್ದೆ. ಆದರೂ ನನಗೆ ಸಚಿವ ಸ್ಥಾನ ತಪ್ಪಿದೆ. ಈ ಬಗ್ಗೆ ಅಸಮಾಧಾನವಿದೆ. ಆದರೆ, ಸಚಿವ ಸ್ಥಾನಕ್ಕಾಗಿ ನಾನು ರಂಪಾಟ ಮಾಡುವುದಿಲ್ಲ. ಪಕ್ಷ ಬಿಡಲ್ಲ. ಕಾಡಿ, ಬೇಡಿ ಸಚಿವನಾಗುವ ಆಸೆಯೂ ನನಗಿಲ್ಲ. ಸಚಿವ ಸ್ಥಾನ ನೀಡಿದರೂ ಸಂತೋಷ. ನೀಡದಿದ್ದರೂ ಸಂತೋಷ ಎಂದು ತಿಳಿಸಿದರು.

ಇದೇ ವೇಳೆ, ವಿಧಾನ ಪರಿಷತ್‌ನಲ್ಲಿ ಸಭಾಪತಿಯನ್ನಾಗಿ ಮಾಡುವುದು, ಬಿಡುವುದು ಪಕ್ಷದ ವರಿಷ್ಠ ದೇವೇಗೌಡರಿಗೆ ಬಿಟ್ಟವಿಚಾರ. ಅವರ ತೀರ್ಮಾನವೇ ಈ ವಿಚಾರದಲ್ಲಿ ಅಂತಿಮ ಎಂದು ನುಡಿದರು.