ಬೆಂಗಳೂರು[ಜೂ.20]: ಜೆಡಿಎಸ್ ನ  ಹಿರಿಯ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಂಗಾಮಿ ಸಭಾಪತಿಯಾಗಿ ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ.

ನಾಳೆ ಸಭಾಪತಿ ಡಿ ಹೆಚ್ ಶಂಕರ್ ಮೂರ್ತಿ ಅವರ ಅಧಿಕಾರಾವಧಿ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಹೊರಟ್ಟಿ ಅಧಿಕಾರ ಸ್ವೀಕರಿಸಲಿದ್ದಾರೆ. 38 ವರ್ಷಗಳಿಂದ ಬಸವರಾಜ ಹೊರಟ್ಟಿ ಅವರು ಮೇಲ್ಮನೆಯ ಸದಸ್ಯರಾಗಿದ್ದಾರೆ.

ಪರಿಷತ್ ನಿಯಮ ಪ್ರಕಾರ ಹಿರಿಯ ಸದಸ್ಯರು ಹಂಗಾಮಿ ಸಭಾಪತಿ ಹುದ್ದೆ ನಿರ್ವಹಿಸಲಿದ್ದಾರೆ. ಕಾನೂನು ಸಂಸದೀಯ ಮಂಡಳಿಯಿಂದ ರಾಜ್ಯಪಾಲರ ಕಚೇರಿಗೆ ಹೊರಟ್ಟಿ ಹೆಸರು ರವಾನೆಯಾಗಿದೆ. ನಾಳೆ ಹಂಗಾಮಿ ಸಭಾಪತಿಗೆ ರಾಜ್ಯಪಾಲ ಪ್ರಮಾಣವಚನ ಬೋಧಿಸಲಿದ್ದಾರೆ. ಸರ್ಕಾರದ ಮೊದಲ ಅಧಿವೇಶನದಲ್ಲಿ ಅಧಿಕೃತವಾಗಿ ಸಭಾಪತಿ ಆಯ್ಕೆ ನಡೆಯಲಿದೆ. ಪ್ರಮಾಣ ವಚನ ಸಮಯವನ್ನು ರಾಜಭವನ ಇನ್ನೂ ನಿಗದಿ ಮಾಡಿಲ್ಲ.