ಹುಬ್ಬಳ್ಳಿ[ಜೂ.16]: ಕಾಂಗ್ರೆಸ್ ನಾಯಕರ ಒತ್ತಡದ ಕಾರಣದಿಂದ ನನಗೆ ಸಚಿವ ಸ್ಥಾನ ತಪ್ಪಿರುವ ಸಾಧ್ಯತೆಯಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಬೇಷರತ್ ಬೆಂಬಲ ಎಂದಿದ್ದ ಕಾಂಗ್ರೆಸ್ ನಾಯಕರು ಷರತ್ತುಗಳ ಮೇಲೆ ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಇವರ ಷರತ್ತುಗಳಿಂದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಉಸಿರಾಡಲು  ಸಾಧ್ಯವಾಗುತ್ತಿಲ್ಲ ಎಂದು ಕೈ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ನನಗೆ ಸಚಿವ ಸ್ಥಾನ ನೀಡಲು ನಾನು ಕೂಡ ಬಯಸಿದ್ದೆ.  ಆಪ್ತರು ನನಗೇ ಸಿಗಬಹುದು ಎಂಬ ಆಶಯ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಉತ್ತರ ಕರ್ನಾಟಕಕ್ಕೆ ಒಲವು ನೀಡಲು ಮುಂದಾಗಿದ್ದರು. ಆದರೆ ಕೈ ಮುಖಂಡರ  ಹಸ್ತಕ್ಷೇಪದಿಂದ ಸಚಿವಸ್ಥಾನ ಕೈತಪ್ಪಿದೆ. ಇದೇ ರೀತಿ ಮುಂದುವರಿದರೆ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಏಳಬಹುದು ಎಂದು ಎಚ್ಚರಿಕೆ ನೀಡಿದರು.

ಹೆಚ್ಡಿಕೆಗೆ ಅಖಂಡ ಕರ್ನಾಟಕದ ಮೇಲೆ ಪ್ರೀತಿ
ಜೆಡಿಎಸ್ ದಕ್ಷಿಣ ಕರ್ನಾಟಕದಲ್ಲಿ 28 ಸ್ಥಾನಗಳನ್ನು ಗೆದ್ದಿದೆ. ಉತ್ತರದಲ್ಲಿ ಗೆದ್ದಿರುವುದು ಕಡಿಮೆ. ಉತ್ತರ ಕರ್ನಾಟಕದ ಮೇಲೆ ಮುಖ್ಯಮಂತ್ರಿಗಿರುವ ಕಾಳಜಿಯನ್ನು ಕಾಂಗ್ರೆಸಿನವರು ಸ್ವತಂತ್ರವಾಗಿ ಬಿಡಬೇಕಿದೆ. ಆದರೆ ಪದೇಪದೆ ಅಡ್ಡಿ ನೀಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಸರ್ಕಾರ 5 ವರ್ಷ ಪೂರ್ಣಗೊಳಿಸುವುದು ಕಷ್ಟ ಎಂದು ಮೈತ್ರಿ ಪಕ್ಷದ ವಿರುದ್ಧ ಕಿಡಿಕಾರಿದರು.